ನಿರ್ಭಯ ನಿಧಿಯಿಂದ ಖರೀದಿಸಿದ ಕಾರು ಶಿಂದೆ ಬಣದ ಶಾಸಕರಿಗೆ ವೈ ಪ್ಲಸ್ ಶ್ರೇಣಿ ಭದ್ರತೆ ಒದಗಿಸಲು ಬಳಕೆ: ವರದಿ

Update: 2022-12-11 09:53 GMT

ಮುಂಬೈ:  ಮಹಿಳೆಯರ ಮೇಲೆ ನಡೆಯುವ ಅಪರಾಧಗಳ ವಿರುದ್ಧ ಹೋರಾಡಲು ನಿರ್ಭಯ ನಿಧಿಯನ್ನು ಬಳಸಿಕೊಂಡು ಖರೀದಿಸಲಾಗಿರುವ ಎಸ್‌ಯುವಿ ಕಾರುಗಳನ್ನು ಜುಲೈನಿಂದ ಆಡಳಿತಾರೂಢ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಶಾಸಕರು, ಸಂಸದರಿಂದ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಲು ಬೆಂಗಾವಲು ವಾಹನವನ್ನಾಗಿ ಬಳಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು Indianexpress.com ವರದಿ ಮಾಡಿದೆ. ವೈ ಪ್ಲಸ್ ಶ್ರೇಣಿಯ ಭದ್ರತಾ ಸೌಲಭ್ಯ ಹೊಂದಿರುವವರು ದಿನದ ಇಪ್ಪತ್ತನಾಲ್ಕು ಗಂಟೆಯೂ ಒಂದು ಬೆಂಗಾವಲು ವಾಹನ ಹಾಗೂ ಐವರು ಪೊಲೀಸರನ್ನೊಳಗೊಂಡ ಭದ್ರತೆಯನ್ನು ಪಡೆಯುತ್ತಾರೆ.

ಈ ವರ್ಷದ ಜೂನ್ ತಿಂಗಳಲ್ಲಿ ಮುಂಬೈ ಪೊಲೀಸರು ನಿರ್ಭಯ ನಿಧಿಯಡಿಯಲ್ಲಿ 220 ಬೊಲೆರೊ, 35 ಎರ್ಟಿಗಾ, 313 ಪಲ್ಸರ್ ಬೈಕ್ ಹಾಗೂ 200 ಆ್ಯಕ್ಟಿವಾ ಸ್ಕೂಟರ್‌ಗಳನ್ನು 30 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಿದ್ದರು. ಮಹಿಳೆಯರ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸಲು 2013ರಿಂದ ಕೇಂದ್ರ ಸರ್ಕಾರವು ಈ ನಿಧಿಯನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡುತ್ತಿದೆ. ಜುಲೈ ತಿಂಗಳಲ್ಲಿ ಈ ನಿಧಿಯಡಿ ಖರೀದಿಸಲಾಗಿದ್ದ ವಾಹನಗಳನ್ನು ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿತ್ತು.

ಆದರೆ, ಮಹಾರಾಷ್ಟ್ರ ಮೈತ್ರಿ ಸರ್ಕಾರದ ಭಾಗವಾಗಿರುವ ಏಕನಾಥ್ ಶಿಂದೆ ನೇತೃತ್ವದ ಬಾಳಾಸಾಹೇಬಾಚಿ ಶಿವಸೇನೆ ಬಣದ ಎಲ್ಲ 40 ಶಾಸಕರಿಗೆ ಜುಲೈನಲ್ಲಿ ವೈ ಪ್ಲಸ್ ಶ್ರೇಣಿಯ ಭದ್ರತೆಯನ್ನು ಒದಗಿಸಲಾಯಿತು. ಅತಿ ಗಣ್ಯ ವ್ಯಕ್ತಿಗಳ ಭದ್ರತಾ ಇಲಾಖೆಯ ಆದೇಶವನ್ನು ಅನುಸರಿಸಿ ಪೊಲೀಸ್ ಠಾಣೆಗಳು ತುರ್ತಾಗಿ 47 ಬೊಲೆರೊ ವಾಹನಗಳ ಅಗತ್ಯವಿದೆಯೆಂದು ಮುಂಬೈ ಪೊಲೀಸ್ ಇಲಾಖೆಯ ವಾಹನ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದವು. ಈ ಪೈಕಿ 17 ವಾಹನಗಳು ಇಲಾಖೆಗೆ ಮರಳಿದ್ದು, ಉಳಿದ 30 ವಾಹನಗಳು ಮರಳಲು ಬಾಕಿ ಉಳಿದಿವೆ ಎಂದು Indianexpress.com ವರದಿ ಮಾಡಿದೆ. 

ಈ ಕುರಿತು ಪ್ರತಿಕ್ರಿಸಿರುವ ಹೆಸರೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು, ಹೊಸ ಬೊಲೆರೊ ವಾಹನಗಳನ್ನು ಅವುಗಳನ್ನು ಖರೀದಿಸಿದ ತಕ್ಷಣವೇ ಜೂನ್ ತಿಂಗಳಲ್ಲಿ ವಾಗನಗಳ ಕೊರತೆಯಿಂದ ಗಮನಾರ್ಹ ನಿರ್ವಾತ ಅನುಭವಿಸುತ್ತಿದ್ದ ಹಲವಾರು ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

"ಪೊಲೀಸ್ ಠಾಣಾ ಪ್ರದೇಶದ ಗಾತ್ರ ಮತ್ತು ವ್ಯಾಪ್ತಿಯ ಸೂಕ್ಷ್ಮತೆಯನ್ನು ಪರಿಗಣಿಸಿ ನಗರ ವ್ಯಾಪ್ತಿಯಲ್ಲಿನ 95 ಪೊಲೀಸ್ ಠಾಣೆಗಳಿಗೆ ವಾಹನಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ಕೆಲವು ಪೊಲೀಸ್ ಠಾಣೆಗಳು ಒಂದು ಬೊಲೆರೊ ವಾಹನವನ್ನು ಪಡೆದಿದ್ದರೆ ಮತ್ತೆ ಕೆಲವು ಎರಡು ವಾಹನಗಳನ್ನು ಪಡೆದಿವೆ" ಎಂದು ಅವರು ಹೇಳಿದ್ದಾರೆ.

ಆದರೆ, ಬೊಲೆರೊ ವಾಹನಗಳು ಪೊಲೀಸ್ ಠಾಣೆಗಳನ್ನು ತಲುಪುತ್ತಿದ್ದಂತೆಯೆ ಅತಿ ಗಣ್ಯ ವ್ಯಕ್ತಿಗಳ ಭದ್ರತೆಯ ಬಳಕೆಗೆ ಅವುಗಳನ್ನು ಮರಳಿಸುವಂತೆ ಪೊಲೀಸ್ ಠಾಣೆಗಳಿಗೆ ಸೂಚಿಸಲಾಯಿತು. ಈ ಕುರಿತು ವಾಹನ ಹಂಚಿಕೆ ಜವಾಬ್ದಾರಿ ಹೊತ್ತಿರುವ ವಾಹನ ಸಾರಿಗೆ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಅತಿ ಗಣ್ಯ ವ್ಯಕ್ತಿಗಳ ಭದ್ರತೆಯನ್ನು ಪೂರೈಸಲು ವಾಹನಗಳ ಅಗತ್ಯವಿದೆ ಎಂಬ ಸೂಚನೆ ಬಂದಿದ್ದರಿಂದ ನಗರ ಪೊಲೀಸ್ ಠಾಣೆಗಳಿಂದ ತಾತ್ಕಾಲಿಕವಾಗಿ 30 ಬೊಲೆರೊ ವಾಹನಗಳನ್ನು ಮರಳಿ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದೆ.

"ಆದರೆ, ವಾಹನಗಳನ್ನು ಮರಳಿ ಪಡೆದ ಕೆಲವೇ ವಾರಗಳಲ್ಲಿ ತಮಗೆ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಪೊಲೀಸ್ ಠಾಣೆಗಳಿಂದ ಕರೆಗಳು ಬರಲು ಶುರುವಾಯಿತು. ಹೀಗಾಗಿ ಎಲ್ಲ ವಾಹನಗಳನ್ನಲ್ಲದಿದ್ದರೂ ಕೆಲವು ವಾಹನಗಳನ್ನು ಪೊಲೀಸ್ ಠಾಣೆಗಳಿಗೆ ಮರಳಿಸಲಾಗಿದೆ" ಎಂದು ಮೂಲಗಳು ತಿಳಿಸಿವೆ‌.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಮಹಾ ನಿರೀಕ್ಷಕ (ಅತಿ ಗಣ್ಯರ ಭದ್ರತೆ) ಕೃಷ್ಣ ಪ್ರಕಾಶ್, ನಾವು ವಾಹನಗಳಿಗಾಗಿ ಯಾವುದೇ ಬೇಡಿಕೆ ಇಟ್ಟಿರಲಿಲ್ಲ‌. ಬದಲಿಗೆ ತಮ್ಮ ವ್ಯಾಪ್ತಿಯ ಶಾಸಕರ ಭದ್ರತೆಗೆ ಸಂಪನ್ಮೂಲ ಒದಗಿಸುವಂತೆ ಮಾತ್ರ ಆದೇಶಿಸಲಾಗಿತ್ತು ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆಯು ಪೊಲೀಸ್ ಠಾಣೆಗಳು ಎದುರಿಸುತ್ತಿದ್ದ ವಾಹನ ಕೊರತೆಯನ್ನು ಸರಿದೂಗಿಸಲು ಬೊಲೆರೊ ವಾಹನಗಳನ್ನು ಖರೀದಿಸಿದೆ. 2019ರ ನಂತರ ಇದು ಮೊದಲ ಖರೀದಿಯಾಗಿದೆ. ಈ ನಡುವೆ ಪೊಲೀಸ್ ಠಾಣೆಗಳ ಸಂಖ್ಯೆ ಏರಿಕೆಯಾಗಿದ್ದರಿಂದ ಅವುಗಳ ಅಗತ್ಯಕ್ಕೆ ತಕ್ಕಷ್ಟು ಪೊಲೀಸ್ ವಾಹನ ಖರೀದಿ ಪ್ರಕ್ರಿಯೆ ಜರುಗಿರಲಿಲ್ಲ ಎಂದು ವಾಹನ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ನಮ್ಮ ಶಾಸಕರ ಭದ್ರತೆಗಾಗಿ ಎಷ್ಟು ವಾಹನಗಳನ್ನು ಬಳಸಲಾಗುತ್ತಿದೆ ಎಂಬ ಕುರಿತು ನನಗೆ ಖಾತ್ರಿಯಿಲ್ಲ. ಆದರೆ, ಠಾಕ್ರೆ ಬಣ ನಿರಂತರವಾಗಿ ನಮ್ಮ ಶಾಸಕರನ್ನು ದೇಶದ್ರೋಹಿಗಳು, ವಂಚಕರು ಎಂದು ಟೀಕಿಸುತ್ತಿದ್ದುದರಿಂದ ಸಂಭವನೀಯ ಅಪಾಯವನ್ನು ತಪ್ಪಿಸಲು ನಮ್ಮ ಶಾಸಕರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆಯನ್ನು ನೀಡಲಾಗಿದೆ" ಎಂದು ನಿರ್ಭಯ ನಿಧಿಯಡಿ ಖರೀದಿಸಿದ ವಾಹನಗಳನ್ನು ಶಿಂದೆ ಬಣದ ಶಾಸಕರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆ ನೀಡಲು ಬಳಸಲಾಗುತ್ತಿದೆ ಎಂಬ ಆರೋಪದ ಕುರಿತು ಶಿಂದೆ ಬಣದ ವಕ್ತಾರ ಕಿರಣ್ ಪವಸ್ಕರ್ ಸ್ಪಷ್ಟನೆ ನೀಡಿದ್ದಾರೆ.

Similar News