ಅತ್ಯಧಿಕ ನಿರುದ್ಯೋಗಕ್ಕೆ ನಗದು ಅಮಾನ್ಯತೆ, ಜಿಎಸ್‌ಟಿ ಕಾರಣ: ಜೈರಾಮ್ ರಮೇಶ್

Update: 2022-12-11 17:06 GMT

ಬುಂಡಿ (ರಾಜಸ್ತಾನ), ಡಿ.11: ನಗದು ಅಮಾನ್ಯತೆ,ದೋಷಪೂರಿತ ಜಿಎಸ್‌ಟಿ ಹಾಗೂ ನರೇಂದ್ರ ಮೋದಿ ಸರಕಾರದ ಪ್ರಮಾದಕಾರಿ ಆರ್ಥಿಕ ನೀತಿಗಳು, ಈಗ ದೇಶವು ಕಳೆದ 45 ವರ್ಷಗಳಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ನಿರುದ್ಯೋಗವನ್ನು ಎದುರಿಸುತ್ತಿರುವುದಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ರವಿವಾರ ಆರೋಪಿಸಿದ್ದಾರೆ.

ರಾಜಸ್ತಾನದ ಬುಂಡಿ ಜಿಲ್ಲೆಯ ಲಾಲ್‌ಬಾನ್ ಗ್ರಾಮಕ್ಕೆ ರವಿವಾರ ಆಗಮಿಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಗರಿಷ್ಠ ಉದ್ಯೋಗವನ್ನು ಕಲ್ಪಿಸುವ ಸೂಕ್ಷ್ಮ, ಸಣ್ಣ ಹಾಗ ಮಧ್ಯಮ ಗಾತ್ರದ ಉದ್ಯಮಗಳ ನಾಶಕ್ಕೆ ನಗದು ಅಮಾನ್ಯತೆಯು ಪ್ರಮುಖ ಕಾರಣವಾಗಿದ್ದರೆ,ಜಿಎಸ್‌ಟಿ ಆನಂತರದ ಪಾತ್ರ ವಹಿಸಿದೆ ಎಂದು ರಮೇಶ್ ತಿಳಿಸಿದ್ದಾರೆ.

 ಆರ್ಥಿಕ ಅಸಮಾನತೆಯಂತಹ ಮಹತ್ವದ ವಿಷಯಗಳನ್ನು ಪ್ರಸ್ತಾವಿಸಲು ಭಾರತ್ ಜೋಡೋ ಯಾತ್ರೆ ಅವಕಾಶ ಮಾಡಿಕೊಟ್ಟಿದೆ ಎಂದು ರಮೇಶ್ ತಿಳಿಸಿದರು.ಕಾರ್ಯಕ್ರಮದಲ್ಲಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಚಲನಚಿತ್ರವೊಂದನ್ನು ಕೂಡಾ ಅವರು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

Similar News