ಪೊಲೀಸರ ಮೇಲೆ ಗುಂಡಿನ ದಾಳಿ : ಕೊಸೋವೊದಲ್ಲಿ ಉದ್ವಿಗ್ನ ಸ್ಥಿತಿ

Update: 2022-12-12 16:58 GMT

ಬೆಲ್ಗ್ರೇಡ್, ಡಿ.12: ಸರ್ಬಿಯಾದಿಂದ ಪ್ರತ್ಯೇಕಗೊಂಡಿರುವುದಾಗಿ ಘೋಷಿಸಿಕೊಂಡಿರುವ ಕೊಸೋವೊ (Kosovo)ಪ್ರಾಂತದಲ್ಲಿ ರವಿವಾರ ಗುರುತು ಪತ್ತೆಯಾಗದ ದಾಳಿಕೋರರು ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆಗೆ ನಿಯೋಜನೆಗೊಂಡಿರುವ ಯುರೋಪಿಯನ್ ಯೂನಿಯನ್ ತುಕಡಿಯ ಮೇಲೆ ಗುಂಡಿನ ದಾಳಿ ನಡೆಸಿ ಸ್ಟನ್ ಗ್ರೆನೇಡ್ (Stun grenade)ಎಸೆದ ಬಳಿಕ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ ಎಂದು ವರದಿಯಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿಯ ಬಂಧನದಿಂದ ಆಕ್ರೋಶಗೊಂಡ ನೂರಾರು ಸರ್ಬಿಯನ್ನರು ಕೊಸೋವೊದಿಂದ ಸರ್ಬಿಯಾಕ್ಕೆ ಸಂಪರ್ಕ ಕಲ್ಪಿಸುವ 2 ಗಡಿದಾಟು ಸ್ಥಳದಲ್ಲಿ  ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಕೊಸೊವೊ 2008ರಲ್ಲಿ ಸರ್ಬಿಯಾದಿಂದ ಪ್ರತ್ಯೇಕವಾಗಿರುವುದಾಗಿ ಘೋಷಿಸಿಕೊಂಡಿದ್ದರೂ ಇದನ್ನು ಸರ್ಬಿಯಾ ಮಾನ್ಯ ಮಾಡಿಲ್ಲ. ಜನಾಂಗೀಯವಾಗಿ ವಿಭಜನೆಗೊಂಡಿರುವ ಕೊರ್ಸೋವದ ಉತ್ತರದಲ್ಲಿ ಸರ್ಬಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ಸರ್ಬಿಯಾ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿದೆ. ಕೊಸೋವೊ ಪ್ರಾಂತದಲ್ಲಿ ಯುರೋಪಿಯನ್ ಯೂನಿಯನ್ನ ಕಾನೂನು ಸುವ್ಯವಸ್ಥೆ ಘಟಕವನ್ನೂ ನಿಯೋಜಿಸಲಾಗಿದೆ.

ತಮ್ಮ ಮೇಲಿನ  ದಾಳಿಯಿಂದ ಸ್ವಯಂ ರಕ್ಷಣೆಗೆ ಪೊಲೀಸರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದಾಗ ಕ್ರಿಮಿನಲ್ಗಳ ತಂಡ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಸರ್ಬ್ ಪ್ರಾಬಲ್ಯದ ಪುರಸಭೆಗಳಲ್ಲಿ  ಡಿಸೆಂಬರ್ 18ರಂದು ಚುನಾವಣೆಯನ್ನು ಕೊಸೋವೊ ಆಡಳಿತ ನಿಗದಿಗೊಳಿಸಿದೆ. ಇದಕ್ಕೆ ಸರ್ಬಿಯನ್ನರು ಹಾಗೂ ಸರ್ಬ್ ರಾಜಕೀಯ ಪಕ್ಷಗಳ ವಿರೋಧವಿದೆ. ಇದೀಗ ಉದ್ವಿಗ್ನತೆ ಹೆಚ್ಚಿರುವುದರಿಂದ ಚುನಾವಣೆಯನ್ನು ಎಪ್ರಿಲ್ 23ಕ್ಕೆ ಮುಂದೂಡಲು ನಿರ್ಧರಿಸಿರುವುದಾಗಿ ಕೊಸೋವೊ ಅಧ್ಯಕ್ಷ ವೊಜೊಸ ಒಸ್ಮಾನಿ ಹೇಳಿದ್ದಾರೆ. ಈ ನಿರ್ಧಾರವನ್ನು ಸ್ವಾಗತಿಸುವುದಾಗಿ ಫ್ರಾನ್ಸ್, ಜರ್ಮನಿ, ಇಟಲಿ, ಬ್ರಿಟನ್ ಮತ್ತು ಅಮೆರಿಕ ಹೇಳಿದೆ. 1.8 ದಶಲಕ್ಷ ಜನಸಂಖ್ಯೆಯಿರುವ ಕೊಸೋವೊದಲ್ಲಿ ಸುಮಾರು 1,20,000ದಷ್ಟು ಸರ್ಬಿಯನ್ನರಿದ್ದಾರೆ. 

Similar News