ಪದೇ ಪದೇ ಹೇಳಿ ಕಿರಿಕಿರಿ ಮಾಡಬೇಡಿ: ಬಿಲ್ಕಿಸ್ ಬಾನು ಪ್ರಕರಣದ ಶೀಘ್ರ ವಿಚಾರಣೆ ಮನವಿಗಳಿಗೆ ಸುಪ್ರೀಂ ಪ್ರತಿಕ್ರಿಯೆ

Update: 2022-12-14 07:22 GMT

ಹೊಸದಿಲ್ಲಿ: ಬಿಲ್ಕಿಸ್ ಬಾನು (Bilkis Bano) ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳ ಶಿಕ್ಷೆಯನ್ನು ಮನ್ನಾಗೊಳಿಸಿ ಬಿಡುಗಡೆಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಕೋರಿ ಮಾಡಿದ ಮನವಿಗಳಿಗೆ ಸುಪ್ರೀಂ ಕೋರ್ಟ್ (Supreme Court) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ ಎಂದು indianexpress.com ವರದಿ ಮಾಡಿದೆ.

ಪ್ರಕರಣದ ವಿಚಾರಣೆಗೆ ಇನ್ನೊಂದು ಪೀಠವನ್ನು ರಚಿಸುವಂತೆ ಬಿಲ್ಕಿಸ್ ಪರ ವಕೀಲೆ ಶೋಭಾ ಗುಪ್ತಾ ಅವರು ಮಾಡಿದ ಸತತ ಮನವಿಗಳಿಗೆ  ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಆಕ್ಷೇಪ ವ್ಯಕ್ತಪಡಿಸಿದೆ. "ಅರ್ಜಿಯನ್ನು ವಿಚಾರಣೆಗೆ ಲಿಸ್ಟ್ ಮಾಡಲಾಗುವುದು. ದಯವಿಟ್ಟು ಅದನ್ನೇ ಪದೇ ಪದೇ ಹೇಳಬೇಡಿ, ಅದು ತುಂಬಾ ಕಿರಿಕಿರಿ ಸೃಷ್ಟಿಸುತ್ತದೆ,'' ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವುದನ್ನು ಪ್ರಶ್ನಿಸಿ  ಬಿಲ್ಕಿಸ್ ಸಲ್ಲಿಸಿದ್ದ ಅರ್ಜಿ ಮಂಗಳವಾರ ವಿಚಾರಣೆಗೆ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಬೇಕಿದ್ದರೂ ಪೀಠದ ನ್ಯಾಯಮೂರ್ತಿಗಳಲ್ಲೊಬ್ಬರಾದ ಜಸ್ಟಿಸ್ ಬೇಲಾ ಎಂ ತ್ರಿವೇದಿ ಅವರು ಹಿಂದೆ ಸರಿದ ಕಾರಣ ಮಂಗಳವಾರ ವಿಚಾರಣೆ ನಡೆದಿಲ್ಲ. ಜಸ್ಟಿಸ್ ತ್ರಿವೇದಿ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ.

ಪ್ರಕರಣದ ವಿಚಾರಣೆಗೆ ಈಗ ಮುಖ್ಯ ನ್ಯಾಯಮೂರ್ತಿ ಹೊಸ ಪೀಠ ರಚಿಸಬೇಕಿದೆ.

ಇದನ್ನೂ ಓದಿ: ಅಂತ್ಯಕ್ರಿಯೆಗೆ ಹಣವಿಲ್ಲವೆಂದು ತಾಯಿಯ ಮೃತದೇಹ ಮನೆಯಲ್ಲಿ ಬಚ್ಚಿಟ್ಟುಕೊಂಡ ಮಗ!

Similar News