ಅಂತ್ಯಕ್ರಿಯೆಗೆ ಹಣವಿಲ್ಲವೆಂದು ತಾಯಿಯ ಮೃತದೇಹ ಮನೆಯಲ್ಲಿ ಬಚ್ಚಿಟ್ಟುಕೊಂಡ ಮಗ!

ಗೋರಖ್‌ಪುರ(ಉತ್ತರಪ್ರದೇಶ): ಗುಲ್ರಿಹಾ ಪ್ರದೇಶದಲ್ಲಿ 45 ವರ್ಷದ ವ್ಯಕ್ತಿಯೊಬ್ಬ ತನ್ನ ಮೃತ ತಾಯಿಯ ಶವವನ್ನು ತನ್ನ ಮನೆಯಲ್ಲಿ ಹಲವು ದಿನಗಳ ಕಾಲ ಬಚ್ಚಿಟ್ಟಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಹಣವಿಲ್ಲದ ಕಾರಣ ತನ್ನ ತಾಯಿಯ ಅಂತ್ಯಕ್ರಿಯೆಯನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ, ಆ ವ್ಯಕ್ತಿ ಮದ್ಯವ್ಯಸನಿಯಾಗಿದ್ದು, ಮಾನಸಿಕವಾಗಿ ಅಸ್ಥಿರನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಶವ ಪತ್ತೆಯಾಗಿದೆ.
ಪೊಲೀಸ್ ತಂಡವು ಶಿವಪುರ-ಶಹಬಾಜ್‌ಗಂಜ್‌ನಲ್ಲಿರುವ ಮನೆಗೆ ಧಾವಿಸಿದ್ದು, ನಿವೃತ್ತ ಸರಕಾರಿ ಶಿಕ್ಷಕಿ ಶಾಂತಿ ದೇವಿ (82) ಎಂದು ಗುರುತಿಸಲಾದ ಮಹಿಳೆಯ ಶವವನ್ನು ಪತ್ತೆ ಹಚ್ಚಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಮನೋಜ್ ಕುಮಾರ್ ಅವಸ್ತಿ ತಿಳಿಸಿದ್ದಾರೆ.
ಮೃತ ದೇಹವು ನಾಲ್ಕೈದು ದಿನಗಳ ಹಳೆಯದು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಪುತ್ರ ನಿಖಿಲ್ ಮಿಶ್ರಾ ಅಲಿಯಾಸ್ ಡಬ್ಬು ಮದ್ಯವ್ಯಸನಿಯಾಗಿದ್ದು, ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದು ಅವಸ್ತಿ ಹೇಳಿದ್ದಾರೆ.
ಮನೆಯಲ್ಲಿ ಏನಾಯಿತು ಎಂದು ಸರಿಯಾಗಿ ಹೇಳಲು ಆತನಿಗೆ ಸಾಧ್ಯವಾಗಲಿಲ್ಲ ಎಂದು ಎಎಸ್ಪಿ ಹೇಳಿದರು.
"ಐದು ದಿನಗಳ ಹಿಂದೆ ತನ್ನ ತಾಯಿ ನಿಧನರಾದರು ಎಂದು ಮಗ ಹೇಳಿದ್ದಾನೆ. ಆದರೆ ಹಣದ ಕೊರತೆಯಿಂದಾಗಿ ಅಂತ್ಯಕ್ರಿಯೆಯನ್ನು ಮಾಡಲು ಸಾಧ್ಯವಾಗಲಿಲ್ಲ" ಎಂದು ಪೊಲೀಸ್ ಅಧಿಕಾರಿ ಹೇಳಿದರು.







