ಹೊಸ ಉದ್ವಿಗ್ನತೆಯ ನಡುವೆ ಭಾರತೀಯ ಯೋಧರು ಚೀನಿಯರನ್ನು ಹಿಮ್ಮೆಟ್ಟಿಸುವ ವಿಡಿಯೋ ವೈರಲ್: ವಾಸ್ತವಾಂಶ ಇಲ್ಲಿದೆ

Update: 2022-12-14 12:23 GMT

ಹೊಸದಿಲ್ಲಿ: ಅರುಣಾಚಲ ಪ್ರದೇಶದ ( Arunachal Pradesh) ತವಾಂಗ್‌ನ ಗಡಿಯಲ್ಲಿ ಡಿ.9ರಂದು ಭಾರತ (India) ಮತ್ತು ಚೀನಿ ಪಡೆಗಳ (China Troops) ನಡುವೆ ಘರ್ಷಣೆಗಳು ನಡೆದಿದ್ದನ್ನು ಕೇಂದ್ರ ಸರಕಾರವು ಮಂಗಳವಾರ ದೃಢಪಡಿಸಿದ ಬೆನ್ನಿಗೇ ಹಿಂದಿನ ಘರ್ಷಣೆಗಳ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕಳೆದ ವರ್ಷದ ಈ ವೀಡಿಯೊ ಅರುಣಾಚಲ ಪ್ರದೇಶದ ತವಾಂಗ್‌ನ ಅದೇ ಪ್ರದೇಶದಲ್ಲಿ ನಡೆದಿದ್ದ ಭೀಷಣ ಘರ್ಷಣೆಗಳನ್ನು ತೋರಿಸುತ್ತಿದೆ.

ಈ ವೀಡಿಯೊಕ್ಕೂ ಡಿ.9ರಂದು ಸಂಭವಿಸಿದ್ದ ಘರ್ಷಣೆಗಳಿಗೂ ಸಂಬಂಧವಿಲ್ಲ ಎಂದು ಸೇನೆಯು ಸ್ಪಷ್ಟಪಡಿಸಿದೆ. ವೀಡಿಯೊದಲ್ಲಿ ತೋರಿಸಲಾಗಿರುವ ಘರ್ಷಣೆಗಳು 2020ರ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದಿದ್ದ ಘರ್ಷಣೆಗಳ ಸ್ವಲ್ಪ ಸಮಯದ ಬಳಿಕ ತವಾಂಗ್‌ನ ಯಾಂಗ್‌ತ್ಸೆ ಪ್ರದೇಶದಲ್ಲಿ ಸಂಭವಿಸಿದ್ದವು ಎಂದು ನಂಬಲಾಗಿದೆ. ಗಲ್ವಾನ್ ಕಣಿವೆ ಸಂಘರ್ಷಗಳಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು ಮತ್ತು 40ಕ್ಕೂ ಅಧಿಕ ಚೀನಿ ಸೈನಿಕರು ಮೃತಪಟ್ಟಿದ್ದರು ಅಥವಾ ಗಾಯಗೊಂಡಿದ್ದರು.

ಭಾರತೀಯ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ತಳವೂರುವ ಚೀನಿಯರ ಪ್ರಯತ್ನಗಳನ್ನು ಭಾರತೀಯ ಯೋಧರು ಸಂಘಟಿತರಾಗಿ ಹಿಮ್ಮೆಟ್ಟಿಸುತ್ತಿರುವುದನ್ನು ವೀಡಿಯೊ ತೋರಿಸಿದೆ.

ಭಾರತೀಯ ಯೋಧರು ಘರ್ಷಣೆಯಲ್ಲಿ ತೊಡಗಿರುವುದನ್ನು ಮತ್ತು ಗಡಿ ದಾಟಲು ಪ್ರಯತ್ನಿಸುತ್ತಿದ್ದ ಚೀನಿಯರನ್ನು ಥಳಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

‘ಅವರನ್ನು ಬಲವಾಗಿ ಹೊಡೆಯಿರಿ, ಅವರಿನ್ನು ಇಲ್ಲಿಗೆ ಬರಬಾರದು’ ಎಂದು ಪಂಜಾಬಿಯಲ್ಲಿ ಕೂಗುತ್ತಿದ್ದ ಭಾರತೀಯ ಯೋಧರು ಚೀನಿ ಸೈನಿಕರನ್ನು ಲಾಠಿಗಳಿಂದ ಥಳಿಸುವುದನ್ನು ಮತ್ತು ಮುಷ್ಟಿಗಳಿಂದ ಗುದ್ದುವುದನ್ನು ವೀಡಿಯೊ ತೋರಿಸಿದೆ.

ಕಳೆದ ವಾರದ ಘಟನೆ ಬಹಿರಂಗಗೊಂಡ ಬಳಿಕ ಹಲವು ರಾಜಕೀಯ ನಾಯಕರು ಈ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.

Similar News