×
Ad

'ಪಠಾಣ್' ಸಿನಿಮಾ ವಿವಾದ: ದೀಪಿಕಾ, ಶಾರೂಖ್ ಬೆನ್ನಿಗೆ ನಿಂತ ಪ್ರಕಾಶ್ ರಾಜ್ ಹೇಳಿದ್ದೇನು?

Update: 2022-12-15 18:04 IST

ಚೆನ್ನೈ: ಶಾರೂಖ್ ಖಾನ್‌, ದೀಪಿಕಾ ಪಡುಕೋಣೆ ಹಾಗೂ ಜಾನ್‌ ಅಬ್ರಹಂ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಪಠಾಣ್' ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಸದ್ದು ಮಾಡುತ್ತಿದೆ. ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದ್ದು, ಅದರ ತುಣುಕೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. 

ದೀಪಿಕಾ ಪಡುಕೋಣೆ ತೊಟ್ಟಿರುವ ಕೇಸರಿ ಬಣ್ಣದ ವಸ್ತ್ರ ವಿವಾದದ ಕೇಂದ್ರ ಬಿಂದುವಾಗಿದೆ. ದೀಪಿಕಾ ಪಡುಕೋಣೆ ವಸ್ತ್ರದ ಬಗ್ಗೆ ಬಲಪಂಥೀಯರಿಂದ ವಿರೋಧ ವ್ಯಕ್ತವಾಗಿದ್ದು, ಚಿತ್ರದ ಬಹಿಷ್ಕಾರಕ್ಕೂ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. 

ಇದರ ಬೆನ್ನಲ್ಲೇ ಚಿತ್ರತಂಡದ ಬೆಂಬಲಕ್ಕೆ ಧಾವಿಸಿರುವ ನಟ ಪ್ರಕಾಶ್ ರಾಜ್, ಪ್ರತಿಭಟನಾಕಾರರ ಆಕ್ರೋಶವು ಅಪಮಾನಕಾರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರ ನಡೆಯನ್ನು ಕುಟುಕಿದ ಅವರು, ವಸ್ತ್ರದ ಬಣ್ಣದ ಬಗ್ಗೆ ವಿರೋಧ ವ್ಯಕ್ತಪಡಿಸಿದವರಿಗೆ ಬಣ್ಣಗುರುಡು ಇದೆ ಎಂದು ಲೇವಡಿ ಮಾಡಿದ್ದಾರೆ.

ಶಾರೂಖ್‌ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ ಸಂಘಪರಿವಾರ ಕಾರ್ಯಕರ್ತರನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್‌ ಪ್ರಕಾಶ್‌ ರಾಜ್‌,“ಹಾಗಾದರೆ ಕೇಸರಿ ವಸ್ತ್ರಧಾರಿಗಳು ಅತ್ಯಾಚಾರಿಗಳಿಗೆ ಹಾರ ಹಾಕಿದರೆ, ಧ್ವೇಷ ಭಾಷಣ ಮಾಡಿದರೆ, ಶಾಸಕರ ದಲ್ಲಾಳಿಗಳಾದರೆ ಪರವಾಗಿಲ್ಲವೇ?, ಕೇಸರಿ ವಸ್ತ್ರಧಾರಿ ಸ್ವಾಮೀಜಿ ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರವೆಸಗಿದರೆ ಪರವಾಗಿಲ್ಲವೇ, ಆದರೆ ಚಿತ್ರದಲ್ಲಿ ವಸ್ತ್ರ ಧರಿಸಬಾರದಲ್ಲವೇ ??” ಎಂದು ಪ್ರಶ್ನಿಸಿದ್ದಾರೆ.

ಕೇಸರಿ ಬಣ್ಣ ಈಗಾಗಲೇ ಕೆಲವು ಹಾಡುಗಳಲ್ಲಿ ಬಳಕೆಯಾಗಿದ್ದು, 1992ರಲ್ಲಿ ಬಿಡುಗಡೆಯಾದ 'ಬೇಟಾ' ಚಿತ್ರದ "ಧಕ್ ಧಕ್ ಕರ್ನೆ ಲಗಾ', ಅಕ್ಷಯ್ ಕುಮಾರ್-ಕತ್ರಿನಾ ಕೈಫ್ ಜೋಡಿಯಾಗಿ ನಟಿಸಿದ್ದ 'ಗಲೆ ಲಗ್ ಜಾ'ನಂತಹ ಹಾಡುಗಳಲ್ಲಿ ಕೇಸರಿ ಬಣ್ಣದ ಉಡುಗೆಗಳನ್ನು ಬಳಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಅಥವಾ ಆಕ್ಷೇಪ ವ್ಯಕ್ತವಾಗಿರಲಿಲ್ಲ, ಶಾರುಖ್‌ ಚಿತ್ರದಲ್ಲಿ ಬಳಸಿದಾಗ ವಿವಾದವನ್ನು ಬೇಕೆಂದಲೇ ಸೃಷ್ಟಿಸಲಾಗುತ್ತಿದೆ ಎಂದೂ ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

2021ರಲ್ಲಿ ದೀಪಿಕಾ ಪಡುಕೋಣೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದ ಜೆಎನ್‌ಯು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರಿಗೆ ಬೆಂಬಲ ಸೂಚಿಸಿದ್ದರು.

'ಪಠಾಣ್' ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ., ಶ್ರೀಧರ್ ರಾಘವನ್ ಕತೆ ಒದಗಿಸಿದ್ದು, ಯಶ್‌ರಾಜ್ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡಿದೆ. ಮುಖ್ಯ ಭೂಮಿಕೆಯಲ್ಲಿ ಶಾರೂಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಇದ್ದಾರೆ. ಡಿಸೆಂಬರ್ 12ರಂದು ಚಿತ್ರದ "ಬೇಶರಮ್ ರಂಗ್" ಹಾಡಿನ ದೃಶ್ಯವನ್ನು ಬಿಡುಗಡೆಗೊಳಿಸಲಾಗಿತ್ತು. 

Similar News