ಮುಟ್ಟಿಸಿಕೊಂಡವರು
ಪ್ರಪಂಚದ ಯಾವ ದೇಶದಲ್ಲೂ ಮನುಷ್ಯ ಮನುಷ್ಯನನ್ನು ಮುಟ್ಟದಂತಹ ಕಾನೂನು ಜಾರಿಯಲ್ಲಿರಲಿಲ್ಲ. ಅದು ನಮ್ಮ ದೇಶದಲ್ಲಿತ್ತು. ಅದು ಈಗಲೂ ಇದೆ. ನಾವು ದೂರ ನಿಂತು ಕೈ ಮುಗಿಯುವುದು, ಕೈ ಮುಗಿಸಿಕೊಂಡವರು ದೂರದಿಂದಲೇ ಅಶೀರ್ವಾದ ಮಾಡುವುದು. ಇದು ನಡೆದು ಬರುವಾಗ ಬ್ರಿಟಿಷರು ಬಂದ ಮೇಲೆ ಕೈ ಕುಲುಕುವ ಪದ್ಧತಿ ಜಾರಿಗೆ ಬಂತು. ಈಗಲೂ ಅದು ಪೂರ್ಣವಾಗಿ ಜಾರಿಗೆ ಬಂದಿಲ್ಲ. ಮುಟ್ಟುವ ಕ್ರಿಯೆ ಮಾನವೀಯವಾದದ್ದು. ಸಮಾನತೆಯನ್ನು ಸಾರುವಂತಹದ್ದು.
ಕಳೆದವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಗೋಪಾಲಗೌಡರ ಶತಮಾನೋತ್ಸವದ ಸಮಾರಂಭಕ್ಕೆ ಗೋಪಾಲಗೌಡರ ರಾಜಕಾರಣ ಕುರಿತು ಚಿಂತಿಸಿದವರು ಮತ್ತು ತೀರ್ಥಹಳ್ಳಿ ಕಡೆಯ ಅಭಿಮಾನಿಗಳೆಲ್ಲಾ ಬಂದಿದ್ದರು. ಅಲ್ಲಿಗೆ ಗೋಪಾಲಗೌಡರ ಭೂ ಹೋರಾಟದ ಫಲಾನುಭವಿಗಳು ಬಂದಿರಲಿಲ್ಲ. ಈ ಹೋರಾಟದ ಸಮಯದಲ್ಲೇ ಗೋಪಾಲಗೌಡರು ಕಾಗೋಡು ತಿಮ್ಮಪ್ಪನವರಿಗೆ ಹೇಳಿದ್ದರಂತೆ, ನಿನ್ನ ಹತ್ತಿರ ಬಂದು ಹೀಗೆ ನಿಲ್ಲುವ ಜನ ಭೂಮಿ ಸಿಕ್ಕ ನಂತರ ನಿನ್ನ ಹತ್ತಿರ ಸುಳಿಯುವುದಿಲ್ಲ ಎಂದು. ಹಾಗೇ ಆಯಿತು. ಭೂಮಿ ಪಡೆದವರು ತಿಮ್ಮಪ್ಪನವರನ್ನು ಸೋಲಿಸಿದರು. ಇದನ್ನು ಅರ್ಧ ಶತಮಾನದ ಹಿಂದೆಯೇ ಗುರುತಿಸಿದ್ದ ಗೋಪಾಲಗೌಡರು ಭಾರತದ ರಾಜಕೀಯಾಗಸದಲ್ಲಿ ಎಂದೆಂದಿಗೂ ಮಿನುಗುವ ನಕ್ಷತ್ರವಾಗುಳಿರುವುದಕ್ಕೆ ಕಾರಣ, ಅವರು ಮೂರು ಬಾರಿ ಶಾಸಕರಾಗಿದ್ದರೂ ತೀರಿಕೊಂಡಾಗ ಬ್ಯಾಂಕ್ ಅಕೌಂಟಿರಲಿಲ್ಲ, ಮನೆಯಿರಲಿಲ್ಲ, ಸೈಟಿರಲಿಲ್ಲ. ಜನರಿಂದಲೇ ಒಂದು ರೂಪಾಯಿಯಿಂದ ಹಿಡಿದು ಐವತ್ತು ರೂ.ಗಳವರೆಗೆ ದೇಣಿಗೆ ಪಡೆದು, ಖರ್ಚು ವೆಚ್ಚ ಕಳೆದಾಗ ಎಂಟೂವರೆ ಸಾವಿರ ಸಂಗ್ರಹವಾಗಿ ಇನ್ನೂ ಒಂದಿಷ್ಟು ಚಿಲ್ಲರೆ ಉಳಿಸಿದ ದಾಖಲೆ ಸಿಗುತ್ತದೆ. ಇವೆಲ್ಲಾ ನಂಬಲನರ್ಹ ಸಂಗತಿಗಳಾಗಿ ಮುಂದಿನ ಪೀಳಿಗೆಗೆ ಕಾಣಿಸಬಹುದು. ನಾನೇ ಒಂದು ಘಟನೆಯನ್ನು ದಾಖಲಿಸುವುದಾದರೆ, 1995ನೇ ಫೆಬ್ರವರಿ 17ರಂದು ಲಂಕೇಶರನ್ನು ನೋಡಲು ಹೋದಾಗ ಒಬ್ಬರೇ ಕುಳಿತಿದ್ದರು. ತುಸು ಗಂಭೀರವಾಗಿದ್ದರು. ಅಂತಹ ಸಮಯದಲ್ಲಿ ನಾವು ಮಾತನಾಡುತ್ತಿರಲಿಲ್ಲ. ‘‘ಗೋಪಾಲಗೌಡರು ಇರಬೇಕಿತ್ತು’’ ಎಂದರು. ನಾನೇನು ಉತ್ತರಿಸಲಿಲ್ಲ. ‘‘ಅವರು ತುಂಬ ಹಣಕಾಸಿನ ತೊಂದ್ರೇಲಿ ತೀರಿಹೋದರು. ನಾವೆಷ್ಟು ಅವಿವೇಕಿಗಳು ಅಂದ್ರೆ ಅವರತ್ರ ಏನು ದುಡ್ಡಿತ್ತೋ ಇಲ್ಲವೊ, ಊಟ ಮಾಡಿದ್ದರೂ, ಇಲ್ಲವೊ ಅನ್ನದ ತಿಳಕಳಕ್ಕೋಗಲಿಲ್ಲ, ತುಂಬ ಸ್ವಾಭಿಮಾನ. ಅವರು ದುಡ್ಡಿಲ್ಲ ಅಂದ್ರೂ ಕೇಳತಿರಲಿಲ್ಲ. ಹಸಿದಿದ್ರೂ ಕೇಳತಿರಲಿಲ್ಲ. ಈಗ ನೆನೆಸಿಕಂಡ್ರೆ ನೋವಾಗುತ್ತೆ’’ ಅಂದಾಗ, ಅವರ ಕಣ್ಣು ತುಂಬಿ ಬಂದವು. ಗೋಪಾಲಗೌಡರು ಲಂಕೇಶರು ಇದ್ದ ಜಾಗಕ್ಕೆ ಹುಡುಕಿಕೊಂಡು ಬಂದ ಉದ್ದೇಶವೇನಿತ್ತು. ಖರ್ಚಿಗೆ ಕಾಸು ಕೊಡಬೇಕಿತ್ತೇ ಅಥವಾ ಊಟ ಮಾಡಿಸಬೇಕಿತ್ತೇ ಎಂಬ ಅನುಮಾನಗಳೆಲ್ಲಾ ಅವರು ಸುಸ್ಥಿತಿಯಲ್ಲಿದ್ದ ಸಮಯದಲ್ಲಿ ಮುತ್ತಿಕೊಂಡಿದ್ದವು. ಆಗಾಗ ಕನ್ನಡಕ ತೆಗೆದು ಕಣ್ಣು ಒರೆಸಿಕೊಳ್ಳುತ್ತಿದ್ದರು. ಲಂಕೇಶ್ ಈ ರೀತಿ ದುಖಃಪಟ್ಟಿದ್ದನ್ನು ನಾನು ನೋಡಿರಲಿಲ್ಲ. ಮುಂದೂ ನೋಡಲಿಲ್ಲ. ಅವರ ಮನಕರಗಿಸಿದ ಗೋಪಾಲಗೌಡರ ಬದುಕು ಇನ್ನೆಂತಹದಿರಬೇಕೆಂದು ನನ್ನ ಮನಸ್ಸಿನಲ್ಲಿ ಗೌಡರ ಆಕೃತಿ ಬೆಳೆಯತೊಡಗಿತು. ಅಂತಹವರ ಮಗ ರಾಮ ಮನೋಹರ ಗಾಂಧಿ ಭವನದಲ್ಲಿ ಕಂಡಾಗ ಮೆಚ್ಚುಗೆಯಿಂದ ಕೈ ಹಿಡಿದು ಮೈ ಸವರಿದೆ. ರಾಮ ಮನೋಹರ ನಕ್ಕಾಗ ನಾನು ಗೋಪಾಲಗೌಡರನ್ನು ಮುಟ್ಟಲಾಗಲಿಲ್ಲ. ಅದಕ್ಕೆ ನಿನ್ನನ್ನ ಈ ರೀತಿ ಮುಟ್ಟಿದೆ ಎಂದೆ. ಇಂತಹ ಇನ್ನೊಂದು ಅಪೇಕ್ಷೆ ಅಕ್ಟೋಬರ್‌ಲ್ಲಿ ನಡೆಯಿತು.
ಭಾರತ್ ಜೋಡೊ ಯಾತ್ರೆಯ ನಾಯಕ ರಾಹುಲ್‌ಗಾಂಧಿ ನಮ್ಮ ನಾಗಮಂಗಲದ ಮುಖಾಂತರ ಹಾದು ಹೋಗುತ್ತಾರೆಂದು ಗೊತ್ತಾದಾಗ ಅವರನ್ನು ನೋಡಲು ಶಿವಮೊಗ್ಗದಿಂದ ಓಡಿ ಬಂದೆ. ಏಕೆಂದರೆ ರಾಹುಲ್‌ಗಾಂಧಿ ಜನರನ್ನು ಮುಟ್ಟಲು ಬಂದವರು. ಹಾಗಾಗಿ. ಎಳೆ ಮಕ್ಕಳನ್ನು ಎತ್ತಿಕೊಂಡು ಹೆಗಲ ಮೇಲೆ ಕೂರಿಸಿಕೊಂಡರು. ಅಸಹಾಯಕರು, ವೃದ್ಧರು, ಅಸ್ಪಶ್ಯತೆಗೆ ತುತ್ತಾದವರನ್ನು ಅನಾಮತ್ತು ಅಪ್ಪಿಕೊಂಡರು. ತಮ್ಮ ಬಗ್ಗೆ ಅವ್ಯಾಹತವಾಗಿ ನಡೆದ ಅಪಪ್ರಚಾರಕ್ಕೆ ಉತ್ತರವಾಗಿ ನಿಜ ಸಂಗತಿ ತಿಳಿಸಲು ಬಂದವರು. ನಮ್ಮ ತಾಲೂಕನ್ನು ಹಾದು ಹೋಗುವವರೆಗೆ ಇದನ್ನೆೆಲ್ಲಾ ಗ್ರಹಿಸಿದೆ. ನಮ್ಮ ತಾಲೂಕಿನ ಗಡಿಯಲ್ಲಿ ಎದುರುಗೊಂಡಾಗ ಚಲುವರಾಯ ಸ್ವಾಮಿ ರಾಹುಲ್‌ಗಾಂಧಿಗೆ ಪರಿಚಯಿಸಿದರು. ಗೌರಿ ಪತ್ರಿಕೆಯಲ್ಲಿ ನಾನು ಕಾಲಮಿಸ್ಟು ಎಂದೇ. ‘‘ನಿಮ್ಮ ಕಾಲಮ್ಮಿನ ವಿಷಯವೇನು’’ ಎಂದರು. ಹಳ್ಳಿ ಜನರು ರಾಜಕಾರಣವನ್ನು ತಮ್ಮ ಮನೋಗತಕ್ಕೆ ತಕ್ಕ ಹಾಗೆ ತಮಾಷೆಯಿಂದ ಚರ್ಚೆ ಮಾಡ್ತಾರೆ ಎಂದೆ. ‘‘ಅದರ ಒಳ್ಳೆಯ ಮೂರು ಎಪಿಸೋಡುಗಳನ್ನು ಟ್ರಾನ್ಸ್‌ಲೇಟ್ ಮಾಡಿ ಸಾಯಂಕಾಲಕ್ಕೆ ನನಗೆ ತಲುಪಿಸಿ’’ ಎನ್ನುತ್ತಾ ಕೈಲಿದ್ದ ಬಾಟಲಿ ಕೊಟ್ಟರು. ಅದರ ಬಿರುಡೆ ಬಿಚ್ಚಿ ಕುಡಿದಾಗ ಅದು ಎಳೆನೀರಾಗಿತ್ತು. ಆಗ ನನಗೆ ರಾಹುಲ್‌ಗಾಂಧಿಯನ್ನು ಮುಟ್ಟಬೇಕೆನಿಸಿತು. ಆತನನ್ನು ಮುಟ್ಟುವ ಕ್ರಿಯೆ ನೆಹರೂವರೆಗೂ ತಲುಪಿ ಆ ಮನೆತನವನ್ನು ಮುಟ್ಟಿದಂತಾಗುತ್ತಿತ್ತು. ಆದ್ದರಿಂದ ಅವರಿಗೆ ಒತ್ತರಿಸಿಕೊಂಡು ನಡೆದು ಕೈ ಮುಟ್ಟಿದೆ. ಕೂಡಲೇ ಸೆಕ್ಯೂರಿಟಿ ಅಡ್ಡ ಕೈ ನೀಡಿದ. ರಾಹುಲ್ ಗಾಂಧಿ ತೋಳು ಉಕ್ಕಿನಂತಿದ್ದವು. ಆತ ಸಹಜವಾಗಿ ನಡೆಯುತ್ತಿದ್ದರೆ ನಾವೆಲ್ಲಾ ದಾಪುಗಾಲು ಹಾಕಬೇಕಿತ್ತು. ಆತನನ್ನು ಮುಟ್ಟಿದ ಸಾರ್ಥಕತೆ ನನ್ನನ್ನು ಆವರಿಸಿತು. ಆತನನ್ನು ಮುಟ್ಟುವ ಮುಖಾಂತರ ನಾನು ರಾಜೀವ್‌ಗಾಂಧಿ, ಸೋನಿಯಾಗಾಂಧಿ, ಇಂದಿರಾಗಾಂಧಿ, ನೆಹರೂರವರನ್ನು ಮುಟ್ಟಿದ್ದೆ. ಒಂಭತ್ತು ವರ್ಷ ಜೈಲಿನಲ್ಲಿದ್ದು ಹದಿನೇಳು ವರ್ಷ ಪ್ರಧಾನಿಯಾಗಿದ್ದ ನೆಹರೂ ಹೆಸರನ್ನು ಅಳಿಸಿಹಾಕಲು ಭಾರತದ ಕೆಲವು ಮಂದ ಮತಿಗಳು ಹೋರಾಡುತ್ತಿದ್ದಾರೆ. ಅದಕ್ಕಿಂತ ಮೊದಲು ನೆಹರೂ ತಮ್ಮ ವಿರೋಧಿಗಳ ಬಗ್ಗೆ ಯಾವ ನಿಲುವು ತಳೆದಿದ್ದರು ಎಂಬುದನ್ನು ಇವರು ಅವಲೋಕಿಸಬೇಕಿದೆ. ಅವರ ಕಟು ಟೀಕಾಕಾರರಾದ ಲೋಹಿಯಾ ತಮ್ಮ ಎದುರೇ ಚುನಾವಣೆಗೆ ನಿಲ್ಲುತ್ತಾರೆಂದು ಗೊತ್ತಾದಾಗ ನೆಹರೂ ಪೋನ್ ಮಾಡಿ ‘‘ವೈಯಕ್ತಿಕ ಟೀಕೆ ಕಡಿಮೆ ಇರಲಿ’’ ಎಂದು ಕೇಳಿಕೊಳ್ಳುತ್ತಾರೆ. ಇವೆಲ್ಲಾ ರಾಜಕಾರಣದಲ್ಲಿ ನಡೆದ ದೊಡ್ಡತನಗಳು. ನಮ್ಮ ವಿರೋಧಿಗಳು ಇರಲೇಬಾರದೆಂಬ ಮನೋಭಾವನೆಯ ಈ ಜನರ ಇತಿಹಾಸವನ್ನೊಮ್ಮೆ ನೋಡಿದರೆ, ಇಲ್ಲಿ ಮನುಷ್ಯ ಮನುಷ್ಯನನ್ನು ಮುಟ್ಟದ ಅಸ್ಪಶ್ಯ ನಡವಳಿಕೆ ಸಾವಿರಾರು ವರ್ಷ ನಡೆದು ಬಂದಿದೆ. ಅದು ಈಗಲೂ ಇದೆ. ಈ ಕಾರಣಕ್ಕೆ ಮುಟ್ಟಿಸಿಕೊಂಡವನು ಎಂಬ ಕತೆಯನ್ನು ಲಂಕೇಶ್ ಬರೆದದ್ದು. ಆ ಕತೆಗೆ ಇಡೀ ನಾಡಿನ ಮೂಲೆ ಮೂಲೆಯಿಂದ ಪತ್ರಗಳು ಬಂದವು. ಅದು ಜನತಾದಳದ ಅಧ್ಯಕ್ಷ ಆಗಿದ್ದ ಡಾ.ತಿಪ್ಪೇಸ್ವಾಮಿಯವರ ಅನುಭವವಾಗಿತ್ತು. ಇವತ್ತಿಗೂ ಅಸ್ಪಶ್ಯತೆಗೆ ತುತ್ತಾದ ಜನರ ನಗುವನ್ನು ಗ್ರಹಿಸಿದರೆ ಸಾಕು. ಅದೆಷ್ಟು ಶತಮಾನದಿಂದ ಹೀಗೆ ನಗುತ್ತಾ ಬಂದಿದ್ದರೋ ಏನೋ. ಪ್ರಪಂಚದ ಯಾವ ದೇಶದಲ್ಲೂ ಮನುಷ್ಯ ಮನುಷ್ಯನನ್ನು ಮುಟ್ಟದಂತಹ ಕಾನೂನು ಜಾರಿಯಲ್ಲಿರಲಿಲ್ಲ. ಅದು ನಮ್ಮ ದೇಶದಲ್ಲಿತ್ತು. ಅದು ಈಗಲೂ ಇದೆ. ನಾವು ದೂರ ನಿಂತು ಕೈ ಮುಗಿಯುವುದು, ಕೈ ಮುಗಿಸಿಕೊಂಡವರು ದೂರದಿಂದಲೇ ಅಶೀರ್ವಾದ ಮಾಡುವುದು. ಇದು ನಡೆದು ಬರುವಾಗ ಬ್ರಿಟಿಷರು ಬಂದ ಮೇಲೆ ಕೈ ಕುಲುಕುವ ಪದ್ಧತಿ ಜಾರಿಗೆ ಬಂತು. ಈಗಲೂ ಅದು ಪೂರ್ಣವಾಗಿ ಜಾರಿಗೆ ಬಂದಿಲ್ಲ. ಮುಟ್ಟುವ ಕ್ರಿಯೆ ಮಾನವೀಯವಾದದ್ದು. ಸಮಾನತೆಯನ್ನು ಸಾರುವಂತಹದ್ದು. ಮುಟ್ಟಿಸಿಕೊಳ್ಳದವರನ್ನು ಒಂದು ಜಾತಿಗೋ ವರ್ಗಕ್ಕೋ ಅನ್ವಯಿಸಿ ಮಾತನಾಡುವಂತಿಲ್ಲ. ಶ್ರೇಣೀಕರಣದ ಜಾತಿಪಾತಿಗಳಲ್ಲಿ ಬದುಕಿದ ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಈ ಅನಿಷ್ಟ ಆಚರಣೆಯನ್ನು ಪಾಲಿಸಿದ್ದಾರೆ. ಈ ಅಸ್ಪಶ್ಯತೆಯ ಆಚರಣೆಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ಮಾತನಾಡುತ್ತಿದ್ದಾಗ ಶಿವಮೊಗ್ಗದ ಶೇಷಣ್ಣ ಎಂಬವರು ನನ್ನ ಕಣ್ಣು ತೆರೆಸಿದರು. ಶೇಷಣ್ಣ ಇಲ್ಲಿನ ಬಿ.ಟಿ. ಸ್ಟ್ರೀಟಿನಲ್ಲಿದ್ದು ಸ್ತ್ರೀ ಶಕ್ತಿ ಸಂಘದ ಮಹಿಳೆಯರನ್ನೆಲ್ಲಾ ಸಂಘಟಿಸಿ ಅವರಿಗೆ ಸಾಲ ಕೊಡಿಸಿ ಕಷ್ಟದಲ್ಲಿದ್ದ ಮಹಿಳೆಯರನ್ನು ಕಾಪಾಡಿದ ವ್ಯಕ್ತಿ. ಅವರನ್ನು ಮನೆಗೆ ಕರೆದಾಗ ಕಾಫಿ ಕೊಟ್ಟರೆ ಲೋಟ ತೊಳೆಯಲು ಹೇಸಿಕೊಳ್ಳುತ್ತಿದ್ದ ಹೆಂಡತಿಯ ಬಗ್ಗೆ ಬೇಸರಗೊಳ್ಳದೆ ಪ್ಲಾಸ್ಟಿಕ್ ಲೋಟ ತಂದು ಮಡಗಿದರು. ಹೆಂಡತಿ ಕಾಲವಾದ ನಂತರ ಆ ಸಮಸ್ಯೆ ಇಲ್ಲದಂತಾಗಿ ಅನ್ಯಜಾತಿ ಮಹಿಳೆಯರೇ ಕೋಣೆಗೆ ನುಗ್ಗಿ ಹೋಗಿ ಕಾಫಿ ಟೀ ಮಾಡುವಂತೆ ತಾಕೀತು ಮಾಡುತ್ತಿದ್ದರು. ಆಗೊಮ್ಮೆ ನಾನು ಅವರ ಮನೆಗೆ ಹೋಗಿದ್ದಾಗ ರೇಣುಕಮ್ಮ ಎಂಬ ದಲಿತ ಮಹಿಳೆಗೆ ತಾಕೀತು ಮಾಡಿ ‘‘ಚಂದ್ರೇಗೌಡ್ರು ಬಂದವರೆ ವಳಗೋಗಿ ಕಾಫಿಮಾಡಿಕೊಂಡು ಬಾರಮ್ಮ’’ ಎಂದರು. ಏನು ಮಾಡಿದರೂ ಆಯಮ್ಮ ಹೋಗಲಿಲ್ಲ. ಕಡೆಗೆ ತಾವೇ ಮಾಡಿ ತಂದುಕೊಟ್ಟರು. ಇಂತಹ ವ್ಯಕ್ತಿ ಕೊರೋನಕ್ಕೆ ಬಲಿಯಾದರು. ಅಲ್ಲಿಗೆ ಅವರ ಕ್ರಾಂತಿಕಾರಿ ಚಟುವಟಿಕೆ ಮುಗಿದುಹೋದವು. ಮಹಿಳಾ ಸಂಘದ ಹೆಣ್ಣುಮಕ್ಕಳೆಲ್ಲಾ ತಂದೆಯನ್ನು ಕಳೆದುಕೊಂಡಂತಾದರು. ಬ್ರಾಹ್ಮಣರೆಲ್ಲಾ ಶೇಷಣ್ಣನಂತಿದ್ದರೆ ನಾವೆಲ್ಲಾ ಎಷ್ಟು ಚೆನ್ನಾಗಿ ಬದುಕಬಹುದಿತ್ತಲ್ಲವೇ?