ಚಳಿಗಾಲದಲ್ಲಿ ನೆಗಡಿಗೆ ತುತ್ತಾಗುವ ಸಾಧ್ಯತೆ ಹೆಚ್ಚು, ಏಕೆ ಎನ್ನುವುದು ಇಲ್ಲಿದೆ...
ನಮ್ಮಲ್ಲಿ ಹೆಚ್ಚಿನವರು ವರ್ಷಕ್ಕೆ ಒಮ್ಮೆಯಾದರೂ ಜ್ವರದಿಂದ ಬಳಲುತ್ತಾರೆ ಮತ್ತು ಅದು ತುಲನಾತ್ಮಕವಾಗಿ ಸಾದಾ ವೈರಸ್ ಆಗಿದ್ದರೂ ಹಾಗೆ ಅನ್ನಿಸುವುದಿಲ್ಲ ಎಂದು ಇತ್ತೀಚಿಗೆ ಜ್ವರದಿಂದ ಬಳಲಿರುವ ಯಾರೇ ಆದರೂ ಒಪ್ಪುತ್ತಾರೆ.
ನೆಗಡಿ ಅಥವಾ ಸಾಮಾನ್ಯ ಶೀತವು ನಮ್ಮ ದಿನಚರಿಯನ್ನು ಅಸ್ತವ್ಯಸ್ತಗೊಳಿಸುತ್ತದೆ. ನೀವು ಇಡೀ ದಿನವನ್ನು ಬ್ಲಾಂಕೆಟ್ ಹೊದ್ದುಕೊಂಡು ಸೀನುತ್ತ ಮತ್ತು ಕೆಮ್ಮುತ್ತ ಕಳೆಯುತ್ತೀರಿ. ತಾಪಮಾನವು ಕಡಿಮೆಯಾಗುತ್ತಿದ್ದಂತೆ ಜ್ವರದ ಬಳಲಿಕೆಯ ಚಕ್ರವು ಆರಂಭವಾಗುತ್ತದೆ.
ಚಳಿಗಾಲದಲ್ಲಿ ಜನರು ಸುಲಭವಾಗಿ ಅಸ್ವಸ್ಥತೆಗೆ ಗುರಿಯಾಗುವುದು ಏಕೆ ಎಂಬ ಬಗ್ಗೆ ನಿಮಗೆಂದಾದರೂ ಅಚ್ಚರಿಯುಂಟಾಗಿದೆಯೇ? ನಮ್ಮ ಶರೀರದ ಮೇಲೆ ಇಷ್ಟೊಂದು ತೀವ್ರ ಪರಿಣಾಮಗಳನ್ನು ಬೀರುವುದು ಈ ತಿಂಗಳುಗಳಲ್ಲೇನಿದೆ? ಇದಕ್ಕೆ ಗುರುಗ್ರಾಮದ ಫೋರ್ಟಿಸ್ ಮೆಮೋರಿಯಲ್ ರೀಸರ್ಚ್ ಇನ್ಸ್ಟಿಟ್ಯೂಟ್ ನ ಇಂಟರ್ನಲ್ ಮೆಡಿಸಿನ್ ವಿಭಾಗದ ಹೆಚ್ಚುವರಿ ನಿರ್ದೇಶಕಿ ಡಾ.ಬೇಲಾ ಶರ್ಮಾ ಉತ್ತರಿಸಿದ್ದಾರೆ.
ಸಾಮಾನ್ಯ ಶೀತವೆಂದರೇನು?
ಅದು ವೈರಲ್ ಸೋಂಕು ಆಗಿದ್ದು, ನಿಮ್ಮ ಸುತ್ತಲಿನ ಯಾರಾದರೂ ಶೀತದಿಂದ ಬಳಲುತ್ತಿದ್ದರೆ ನಿಮಗೂ ಅದು ಅಂಟಿಕೊಳ್ಳುವ ಹೆಚ್ಚಿನ ಸಾಧ್ಯತೆಯಿರುತ್ತದೆ. ಈ ಸಾದಾ ವೈರಸ್ ಅತ್ಯಂತ ಸಾಂಕ್ರಾಮಿಕ ಎನ್ನುವುದೇ ಸಮಸ್ಯೆ. ನಿಮ್ಮಲ್ಲಿ ಕಡಿಮೆ ಪ್ರತಿರೋಧಕ ಶಕ್ತಿಯಿದ್ದರೆ ಅಥವಾ ಅಲರ್ಜಿ, ಕಾಲೋಚಿತ ಜ್ವರ ಅಥವಾ ಒಣಹವೆಯ ಸಂಪರ್ಕಕ್ಕೆ ಬಂದರೆ ಈ ಸೋಂಕು ವೇಗವಾಗಿ ಹರಡುತ್ತದೆ.
ಚಳಿಗಾಲದಲ್ಲಿ ಹೆಚ್ಚಿನ ಅಸ್ವಸ್ಥತೆ ಕಾಡುವುದೇಕೆ?
ಚಳಿಗಾಲದಲ್ಲಿ ಯಾರೇ ಆದರೂ ತ್ವರಿತವಾಗಿ ನೆಗಡಿಗೆ ತುತ್ತಾಗುವುದನ್ನು ಹೆಚ್ಚಾಗಿ ಕಾಣಬಹುದು. ಮನೆಗಳಲ್ಲಿ ಶುದ್ಧ ಗಾಳಿಯ ಕೊರತೆ,ಶುಷ್ಕ/ಶೀತ ಹವಾಮಾನ,ಒಣ ಹವೆ ಮತ್ತು ನಮ್ಮ ಶರೀರದ ಸ್ವಯಂ ರಕ್ಷಣೆ ಸಾಮರ್ಥ್ಯ ಕಡಿಮೆಯಾಗುವುದು ಇವು ನೆಗಡಿಗೆ ಕೆಲವು ಕಾರಣಗಳಾಗಿವೆ.
ನೆಗಡಿಯ ಲಕ್ಷಣಗಳೇನು?
ಸಾಮಾನ್ಯವಾಗಿ,ಶೀತವನ್ನುಂಟು ಮಾಡುವ ವೈರಸ್ಗೆ ಒಡ್ಡಿಕೊಂಡ ಒಂದರಿಂದ ಮೂರು ದಿನಗಳ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಇವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.
ಚಳಿ, ಕೆಮ್ಮು, ಗಂಟಲು ಕೆರೆತ, ಜ್ವರ, ಮೈ ನೋವು, ತಲೆನೋವು, ಉಸಿರಾಟಕ್ಕೆ ತೊಂದರೆ, ದಣಿವು ಇವು ನೆಗಡಿಯ ಲಕ್ಷಣಗಳಾಗಿವೆ.
ಇದಕ್ಕೆ ಚಿಕಿತ್ಸೆ ಏನು?
ನೆಗಡಿಗೆ ಚಿಕಿತ್ಸೆಯ ಕುರಿತು ಹೇಳುವುದಾದರೆ ಅದಕ್ಕೆ ವಿಶೇಷ ಔಷಧಿಗಳ ಅಗತ್ಯವಿಲ್ಲ. ಸಾಮಾನ್ಯವಾಗಿ ಅದು ತನ್ನ ಅವಧಿಯನ್ನು ಮುಗಿಸುತ್ತದೆ ಮತ್ತು ಅಗತ್ಯವಿದ್ದರೆ ರೋಗಲಕ್ಷಣದ ಆರೈಕೆ ಸಾಕಾಗುತ್ತದೆ.
ನೆಗಡಿಯುಂಟಾದ ಸಂದರ್ಭದಲ್ಲಿ ಯಾವುದೇ ತೊಡಕುಗಳನ್ನು ನಿವಾರಿಸಲು ಮಕ್ಕಳು, ವೃದ್ಧರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸಬೇಕು.
►ಮಧುಮೇಹ ಅಥವಾ ಹೃದ್ರೋಗದಿಂದ ಬಳಲುತ್ತಿರುವವರು ಶೀತವುಂಟಾದಾಗ ವೈದ್ಯರ ಸಲಹೆ ಪಡೆದುಕೊಳ್ಳಬೇಕು.
►ಬೆಚ್ಚಗಿನ ಬಟ್ಟೆಗಳನ್ನು ಧರಿಸಿ.
►ಚಹಾ, ಕಾಫಿ ಅಥವಾ ಅರಿಷಿಣ ಬೆರೆತ ಹಾಲಿನಂತಹ ಬಿಸಿ ಪಾನೀಯಗಳನ್ನು ಸೇವಿಸಿ.
►ಧೂಮಪಾನ ಬೇಡವೇ ಬೇಡ.
►ಸ್ವಚ್ಛತೆಯನ್ನು ಕಾಯ್ದುಕೊಳ್ಳಿ.
►ಕೆಲ ಸಮಯ ತಣ್ಣನೆಯ ವಾತಾವರಣದ ಸ್ಥಳಗಳಿಂದ ದೂರವಿರಿ.
►ಚಳಿಯ ವಾತಾವರಣವಿದ್ದಾಗ ತಡರಾತ್ರಿ ಮನೆಯಿಂದ ಹೊರ ಹೋಗಬೇಡಿ.
ಮುನ್ನೆಚ್ಚರಿಕೆ ಮತ್ತು ರಕ್ಷಣೆ
►ವೈರಸ್ ದಾಳಿಯಿಂದ ರಕ್ಷಿಸಿಕೊಳ್ಳಲು ನಿಮ್ಮನ್ನು ಮತ್ತು ನಿಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ.
►ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದನ್ನು ಮರೆಯಬೇಡಿ.
►ನೆಗಡಿಯಿಂದ ಸೋಂಕಿತ ವ್ಯಕ್ತಿಯೊಂದಿಗೆ ಯಾವುದೇ ಸಂಪರ್ಕವನ್ನು ನಿವಾರಿಸಿ.
►ವರ್ಷಕ್ಕೊಮ್ಮೆ ಇನ್ಫ್ಲುಯೆಂಜಾ ಲಸಿಕೆಯನ್ನು ತೆಗೆದುಕೊಳ್ಳಿ.
►ತಂಪು ಪಾನೀಯಗಳನ್ನು ದೂರವಿಟ್ಟು ಬಿಸಿ ಪೇಯಗಳನ್ನು ಸೇವಿಸಿ. ಮೂಸಂಬಿ,ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ಧಾರಾಳವಾಗಿ ತಿನ್ನಿ.
►ಸೂಪ್ಗಳು ನಿಮ್ಮ ಮೆಚ್ಚಿನ ಆಹಾರವಾಗಿರಲಿ.
►ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ ಮತ್ತು ಸದಾ ಕ್ರಿಯಾಶೀಲರಾಗಿರಲು ಪ್ರಯತ್ನಿಸಿ.
►ನಿಮ್ಮ ತ್ವಚೆ ಸ್ವಚ್ಛವಾಗಿರುವಂತೆ ಮತ್ತು ತೇವಾಂಶವನ್ನು ಹೊಂದಿರುವಂತೆ ನೋಡಿಕೊಳ್ಳಿ,ಏಕೆಂದರೆ ಚಳಿಗಾಲದಲ್ಲಿ ತ್ವಚೆಗೆ ಕೊಂಚ ಹೆಚ್ಚಿನ ಕಾಳಜಿ ಅಗತ್ಯವಾಗುತ್ತದೆ.