ನನ್ನ ಸದ್ದಡಗಿಸಲು ಸಾವಿರಾರು ಕೋಟಿ ಖರ್ಚು ಮಾಡಲಾಗುತ್ತಿದೆ: ರವೀಶ್ ಕುಮಾರ್

"ಅದಾನಿ ಜೇಬಲ್ಲಿ ದುಡ್ಡಿರಬಹುದು, ಆದರೆ ನನ್ನಲ್ಲಿ ಧಮ್ ಇದೆ " ಎಂದ ದಿಟ್ಟ ಪತ್ರಕರ್ತ

Update: 2022-12-22 06:53 GMT

ಹೊಸದಿಲ್ಲಿ: ಭಾರತದ ಖ್ಯಾತ  ಪತ್ರಕರ್ತರಲ್ಲಿ ಓರ್ವರಾದ ರವೀಶ್ ಕುಮಾರ್ ಅವರು ಕೈಗಾರಿಕೋದ್ಯಮಿ ಗೌತಮ್ ಅದಾನಿ ತನ್ನನ್ನು ಮೌನವಾಗಿಸಲೆಂದೇ ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. NDTV ಸುದ್ದಿಜಾಲವನ್ನು ಅದಾನಿ ಖರೀದಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬಳಿಕ ಅದಕ್ಕೆ ರಾಜೀನಾಮೆ ನೀಡಿದ ಕುಮಾರ್ ‘TheWire.in’ ಸುದ್ದಿ ಜಾಲತಾಣಕ್ಕಾಗಿ ಕರಣ್ ಥಾಪರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ತನ್ನ ರಾಜೀನಾಮೆಗೆ ಕಾರಣ,‌ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಸ್ಥಿತಿ ಇತ್ಯಾದಿಗಳ ಕುರಿತು ವಿವರವಾಗಿ ಮಾತನಾಡಿದ್ದಾರೆ. ಅವರ ಮಾತುಗಳ ಸಾರಾಂಶವಿಲ್ಲಿದೆ.....

ಇಷ್ಟು ವರ್ಷಗಳಲ್ಲಿ ನನ್ನನ್ನು ಖರೀದಿಸಲು ನಿಮಗೆ ಸಾಧ್ಯವಾಗಲಿಲ್ಲ, ಹೀಗಾಗಿ ಈಗ ಟೇಕ್‌ ಓವರ್ ಮಾರ್ಗ ಹಿಡಿದಿದ್ದೀರಿ; ಇದು ಅದಾನಿ ಸಮೂಹವು NDTVಯನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ನನ್ನ ಮನಸ್ಸಿನಲ್ಲಿ ಹೊಳೆದಿದ್ದ ಆಲೋಚನೆ.

ನಿಸ್ಸಂದೇಹವಾಗಿ NDTV ಒಂದು ವಿಶಿಷ್ಟ ಬ್ರಾಂಡ್ ಆಗಿದೆ ಮತ್ತು ತನ್ನದೇ ಆದ ಅನನ್ಯತೆಯನ್ನು ಹೊಂದಿದೆ. ಇತ್ತೀಚಿಗೆ ಅದನ್ನು ‘ರವೀಶರ ಚಾನೆಲ್ ’ಎಂದು ಕರೆಯಲಾಗುತ್ತಿದೆ. NDTV  ಮಾಲಕ ಪ್ರಣಯ್ ರಾಯ್ ಅವರಿಗೆ ಈ ಬಗ್ಗೆ ಯಾವುದೇ ಸಮಸ್ಯೆಯಿರಲಿಲ್ಲ, ಬದಲಿಗೆ ಅವರಿಗೆ ಸಂತಸವಾಗಿತ್ತು.

ಟಿವಿ ಕ್ಷೇತ್ರದಿಂದ ನನ್ನನ್ನು ಹೊರದಬ್ಬಲು ಈ ಇಡೀ ಆಟವನ್ನು ಆಡಲಾಗುತ್ತಿದೆ ಎಂದು ಮುಕುಲ್ ಕೇಶವನ್ ಅವರು ‘ದಿ ಟೆಲಿಗ್ರಾಫ್ ’ನಲ್ಲಿ ತನ್ನ ಬರಹದಲ್ಲಿ ಹೇಳಿದ್ದರು.

NDTV ಟೇಕ್‌ ಓವರ್ ಸುದ್ದಿ ಹೊರಬಿದ್ದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಟಿವಿ ರಂಗದಿಂದ ನನ್ನ ಉಪಸ್ಥಿತಿಯನ್ನು ಇಲ್ಲವಾಗಿಸಲು ಈ ಸಂಚು ರೂಪಿಸಲಾಗಿತ್ತು ಎನ್ನುವುದು ನನಗೂ ಮನದಟ್ಟಾಗಿದೆ. ಇದು ಸಾಮಾನ್ಯ ಕಾರ್ಪೊರೇಟ್ ಟೇಕ್‌ ಓವರ್ ಎಂದು ಹೇಳುವವರೂ ಇದ್ದಾರೆ. ಸರಿ, ನನ್ನನ್ನು ದೂರ ತಳ್ಳುವ ಮೂಲಕ ನನ್ನನ್ನು ಅಡಿಟಿಪ್ಪಣಿಯ ಮಟ್ಟಕ್ಕೆ ಇಳಿಸಲು ನೀವು ಬಯಸಿರಬಹುದು, ಆದರೆ ನಾನು ಅಡಿಟಿಪ್ಪಣಿಯಲ್ಲ. ಅದಾನಿ ಸಾಹೇಬರಿಗೆ ಈಗಾಗಲೇ ಇದು ಅರ್ಥವಾಗಿರಲೇಬೇಕು. ವಾಸ್ತವದಲ್ಲಿ ಈ ಟೇಕ್‌ ಓವರ್ ಕಾರಣ ನನ್ನಂತೆ ಜನರಿಗೂ ಸ್ಪಷ್ಟವಾಗಿದೆ. ನಿಮಗೆ ಬಡವರ ಧ್ವನಿಯನ್ನು ಖರೀದಿಸಲು ಸಾಧ್ಯವಾಗಲಿಲ್ಲ, ನೀವು ಅದನ್ನು ವೇದಿಕೆಯಿಂದಲೇ ಅಳಿಸಲು ಬಯಸಿದ್ದೀರಿ. ಅದಕ್ಕೆ ನೀವು ಕಂಡುಕೊಂಡ ಸರಳ ಉಪಾಯ; ಇಡೀ ವೇದಿಕೆಯನ್ನೇ ಖರೀದಿಸುವುದು. ಅಲ್ಲಿ ನನ್ನ ಉಪಸ್ಥಿತಿಯು ದೊಡ್ಡ ವಿರೋಧಾಭಾಸವಾಗುತ್ತಿತ್ತು,ನನ್ನನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ,ಹೀಗಾಗಿ ನನ್ನನ್ನು ತೆಗೆದುಹಾಕಲಾಯಿತು.

ನನ್ನನ್ನು ನಿರುದ್ಯೋಗಿಯನ್ನಾಗಿಸಲು ಸಾವಿರಾರು ಕೋಟಿ ರೂ.ಗಳ ವೆಚ್ಚ ಮಾಡಲಾಗಿದೆ. ಇಷ್ಟೊಂದು ಹಣದಿಂದ ಉತ್ತರ ಪ್ರದೇಶ ಮತ್ತು ಬಿಹಾರಗಳ ಸಾವಿರಾರು ಯುವಕರು ಮತ್ತು ಯುವತಿಯರಿಗೆ ಉದ್ಯೋಗಗಳನ್ನು ಒದಗಿಸಬಹುದಿತ್ತು.

ನ.25ರಂದು ಫೈನಾನ್ಶಿಯಲ್ ಟೈಮ್ಸ್ ಗೆ ನೀಡಿದ್ದ ಸಂದರ್ಶನದಲ್ಲಿ ಅದಾನಿ ಹೇಳಿದ್ದರ ಬಗ್ಗೆ ಗಮನ ಸೆಳೆಯುತ್ತೇನೆ. ‘ಸ್ವಾತಂತ್ರ್ಯ ಎಂದರೆ ಸರಕಾರವು ಏನಾದರೂ..., ಗಮನಿಸಿ ಏನಾದರೂ... ತಪ್ಪು ಮಾಡಿದ್ದರೆ ಅದು ತಪ್ಪು ಎಂದು ನೀವು ಹೇಳುತ್ತೀರಿ. ಆದರೆ ಇದೇ ವೇಳೆ ಸರಕಾರವು ಪ್ರತಿದಿನ ಸರಿಯಾದ ಕೆಲಸವನ್ನು ಮಾಡುತ್ತಿದ್ದರೆ ಅದನ್ನೂ ಹೇಳುವ ಧೈರ್ಯ ನಿಮಗಿರಬೇಕು’ ಎಂದು ಅದಾನಿ ಹೇಳಿದ್ದರು.

ಇದನ್ನು ಒಂದು ರೀತಿಯಲ್ಲಿ,ಎನ್ಡಿಟಿವಿಯಲ್ಲಿ ಏನಾಗಬಹುದು ಎನ್ನುವುದನ್ನು ಸೂಚಿಸಿರುವ ಅದಾನಿಯವರ ಸಂಪಾದಕೀಯ ಆದೇಶವನ್ನಾಗಿ ನೋಡಬಹುದು.

ಈ ಹೇಳಿಕೆಯನ್ನೇ ತಿರುಗಿಸಿ ನಾನು ಅದಾನಿಯವರಿಗೆ ಕೇಳಲು ಬಯಸುತ್ತೇನೆ. ಸರಕಾರ ತಪ್ಪು ಮಾಡಿದಾಗ ಯಾರಾದರೂ ಟೀಕಿಸಿದರೆ ಅದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಗೋದಿ (ಲ್ಯಾಪ್ಡಾಗ್) ಮೀಡಿಯಾ ಮತ್ತು ಅದರ ಮಾಲಕರಲ್ಲಿ ಇಲ್ಲದ, ಈ ಟೀಕೆಗಳನ್ನೂ ಹೇಳುವ ಧೈರ್ಯ ನಿಮ್ಮಲ್ಲಿರಬೇಕು. ಅದಾನಿ ಇದನ್ನು ಹೇಳಬಲ್ಲರೇ? ಆ ಧೈರ್ಯ ಅವರಲ್ಲಿದ್ದರೆ ‘ನೀವು ಏನನ್ನು ಮಾಡುತ್ತಿದ್ದಿರೋ ಅದನ್ನು ಮುಂದುವರಿಸಿ, ನಿಮ್ಮನ್ನು ಯಾರೂ ಮುಟ್ಟುವುದಿಲ್ಲ’ ಎಂಬ ಸಂದೇಶವನ್ನು ಅವರು ನನಗೆ ರವಾನಿಸುತ್ತಿದ್ದರು ಎಂದು ನಾನು ಭಾವಿಸುತ್ತಿದ್ದೆ.

ಸರಕಾರದ ಟೀಕಾಕಾರ ಎನ್ನುವುದೇ ನನ್ನ ಗುರುತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಯಾವುದೇ ಪತ್ರಕರ್ತ ಸರಕಾರವನ್ನು ಟೀಕಿಸಿದರೆ ಬಿಜೆಪಿ ಮತ್ತು ಮೋದಿ ಸರಕಾರ ಆತನನ್ನು ಬಹಿಷ್ಕರಿಸಬಾರದು ಎಂದು ಅದಾನಿ ಟ್ವೀಟಿಸಬಲ್ಲರೇ? ಕೇವಲ ನಾಲ್ಕು ದಿನಗಳ ಕಾಲ ಅದಾನಿ ಈ ಕೆಲಸ ಮಾಡಿದರೆ ಐದನೇ ದಿನ ಅವರು ಜಾರಿ ನಿರ್ದೇಶನಾಲಯ (ಈ.ಡಿ.)ದ ಕಚೇರಿಯಲ್ಲಿರುತ್ತಾರೆ. ಸರಕಾರವನ್ನು ಟೀಕಿಸುವುದರಿಂದ ದೂರವಿರುವವರೆಗೆ ಅವರು ತನ್ನ ಸ್ಥಾನದಲ್ಲಿ ಉಳಿಯುತ್ತಾರೆ. ಟೀಕಿಸಿದ ದಿನ ಅವರಿಗೆ ಈ.ಡಿ.ಅಥವಾ ಸಿಬಿಐ ಕಚೇರಿಯಲ್ಲಿ ಕುಳಿತುಕೊಳ್ಳಲು ಸ್ಟೂಲ್ ಸಹ ಸಿಗುವುದಿಲ್ಲ.

ಅದಾನಿ ಪ್ರಶ್ನಿಸುವುದನ್ನು ಅಥವಾ ಟೀಕಿಸುವುದನ್ನು ಯಾವುದೇ ರೀತಿಯಲ್ಲಿ ಪ್ರೋತ್ಸಾಹಿಸುವುದಿಲ್ಲ. ಅವರು ಯಾವುದೇ ರೀತಿಯಲ್ಲಿಯೂ ಪತ್ರಿಕಾ ಸ್ವಾತಂತ್ರದ ಐಕಾನ್ ಅಲ್ಲ. ನೀವು ‘ಗ್ಯಾಂಗ್ಸ್ ಆಫ್ ವಸೇಪುರ’ ಚಿತ್ರವನ್ನು ನೋಡಿದ್ದಿದ್ದರೆ ಕಲ್ಲಿದ್ದಲು ವ್ಯವಹಾರದ ಒಳಸುಳಿಗಳು ನಿಮಗೆ ಅರ್ಥವಾಗುತ್ತವೆ. ನಾನು ಬಂದಿರುವ ಬಿಹಾರದಲ್ಲಿ, ಜಾರ್ಖಂಡ್ ಇನ್ನೂ ಅದರಲ್ಲಿದ್ದಾಗ ಮತ್ತು ಪ್ರತ್ಯೇಕಗೊಂಡಾಗ, ಕಲ್ಲಿದ್ದಲು ವ್ಯವಹಾರದಲ್ಲಿ ಗುರುತಿಸಿಕೊಂಡಿದ್ದವರು ಮತ್ತು ನಂತರ ಬಂದವರ ಬಗ್ಗೆ ನನಗೆ ಗೊತ್ತು.

ಇದೇ ರೀತಿ ಮೊದಲು ಎನ್ಡಿಟಿವಿ ಕೇವಲ ಎನ್ಡಿಟಿವಿ ಆಗಿತ್ತು. ಅದು ಜೊತೆಯಲ್ಲಿ ಹೋಟೆಲ್ ಅಥವ ವೃತ್ತಪತ್ರಿಕೆ ಉದ್ಯಮವನ್ನು ಹೊಂದಿರಲಿಲ್ಲ. ಈಗ ಅದು ಕಲ್ಲಿದ್ದಲು ಉದ್ಯಮವನ್ನೂ ಹೊಂದಿದೆ ಅಥವಾ ಮಾಧ್ಯಮಗಳು ಬಣ್ಣಿಸಿರುವಂತೆ ವಿಶ್ವದ ಅತ್ಯಂತ ದೊಡ್ಡ ಕಲ್ಲಿದ್ದಲು ಉದ್ಯಮಿ ಈಗ ಟಿವಿ ಚಾನೆಲನ್ನೂ ಹೊಂದಿದ್ದಾರೆ ಎಂದು ನೀವು ಹೇಳಬಹುದು.  ಸುದ್ದಿವಾಹಿನಿಯ ಮೂಲಕ ಉತ್ತಮ ಪತ್ರಿಕೋದ್ಯಮ ಮಾಡುವುದು ಅದಾನಿಯವರ ಉದ್ದೇಶವಾಗಿದ್ದರೆ ಅವರು ಹೂಡಿಕೆ ಮಾಡಿರುವ ‘ಬ್ಲೂಮ್ಬರ್ಗ್ ಕ್ವಿಂಟ್’ ಮೂಲಕ ತನ್ನ ಗುರಿಯನ್ನು ಸಾಧಿಸಬಹುದಿತ್ತು. ಈ ಸ್ವಾಧೀನದಿಂದ ಯಾವ ದೊಡ್ಡ ಪತ್ರಿಕೋದ್ಯಮವನ್ನು ಸಾಧಿಸಲಾಗಿದೆ?

ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿಯವರ ನಿಕಟತೆಯ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ. ಈ ಗ್ರಹಿಕೆಯು ಅಷ್ಟೊಂದು ಆಧಾರರಹಿತವಲ್ಲ. ಅವರು ನಿಖರವಾಗಿ ಏನು ಮಾತನಾಡುತ್ತಾರೆ ಎನ್ನುವುದನ್ನು ತಿಳಿಯುವುದನ್ನು ಸಾಧ್ಯವಿಲ್ಲವಾದರೂ ನಾವು ನಿರ್ದಿಷ್ಟ ಸಂದರ್ಭದಲ್ಲಿ ಚೆನ್ನಾಗಿ ಊಹಿಸಬಹುದು ಮತ್ತು ಅದು ಸಂಪೂರ್ಣ ಆಧಾರರಹಿತವಾಗಿರುವುದಿಲ್ಲ.

ಯಾವುದೇ ಉದ್ಯಮಿ ಪತ್ರಿಕಾ ಸ್ವಾತಂತ್ರದ ಪರವಾಗಿ ಮಾತನಾಡುವ ಸ್ಥಿತಿಯಲ್ಲಿ ಇಂದು ಇಲ್ಲ. ಪ್ರಶ್ನೆಯನ್ನು ಕೇಳುವ ಧೈರ್ಯ ಮಾಡಿದ್ದ ರಾಹುಲ್ ಬಜಾಜ್ ಗೆ ಏನಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಿ. ವಿಷಯವೆಂದರೆ ಗೋದಿ ಮೀಡಿಯಾದ ಇಡೀ ಗುಂಪು ಸರಕಾರವನ್ನು ಹೊಗಳುವುದನ್ನು ಬಿಟ್ಟು ಬೇರೆನನ್ನೂ ಮಾಡುತ್ತಿಲ್ಲ, ಸರಕಾರವು ಮಾಡದ ಕೆಲಸಗಳಿಗೂ ಗೋದಿ ಮೀಡಿಯಾ ಅದನ್ನು ಹೊಗಳುತ್ತಿದೆ.

ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ ಸನಾ ಇರ್ಷಾದ್ ಗೆ ಪ್ರಶಸ್ತಿ ಸ್ವೀಕರಿಸಲು ಅಮೆರಿಕಕ್ಕೆ ತೆರಳಲು ಅವಕಾಶವನ್ನು ನೀಡಲಾಗಿಲ್ಲ. ಕರ್ತವ್ಯದಲ್ಲಿದ್ದಾಗಲೇ ಯುದ್ಧಭೂಮಿಯಲ್ಲಿ ಮೃತಪಟ್ಟ ಪುಲಿಟ್ಝರ್ ಪ್ರಶಸ್ತಿ ವಿಜೇತ ದಾನಿಷ್ ಸಿದ್ದಿಕಿಯವರನ್ನು ಪ್ರಧಾನಿ ಒಮ್ಮೆಯೂ ನೆನಪಿಸಿಕೊಳ್ಳಲಿಲ್ಲ. ಅದಾನಿ ಒಪ್ಪಿಕೊಳ್ಳುತ್ತಾರೆಯೇ? ಇಂತಹ ಪತ್ರಕರ್ತರ ಸ್ವಾತಂತ್ರದ ಬಗ್ಗೆ ಅವರು ಮಾತನಾಡುತ್ತಾರೆಯೇ? ಅಲ್ ಝಝೀರಾ ಮತ್ತು ಫೈನಾನ್ಶಿಯಲ್ ಟೈಮ್ಸ್ ಕುರಿತು ಮಾತನಾಡುವ ಅವರು ಸನಾ ಇರ್ಷಾದ್ ಅಥವಾ ದಾನಿಷ್ ಬಗ್ಗೆ ಮಾತನಾಡುತ್ತಾರೆಯೇ? ಇಲ್ಲ.

ಅದಾನಿ ಪತ್ರಿಕಾ ಸ್ವಾತಂತ್ರ್ಯದ ಬೆಂಬಲಿಗರಾಗಿದ್ದರೆ ಅವರು ದೈನಿಕ ಜಾಗರಣ್ ನಲ್ಲಿ ಅನಾಮಧೇಯ ವರದಿಗಾರನಿಗೆ ವಿಶೇಷ ಸಂದರ್ಶನವನ್ನು ನೀಡುತ್ತಿರಲಿಲ್ಲ. ಪ್ರಧಾನಿಯವರೇ ಸ್ವತಃ ಸ್ಥಳೀಯತೆಯನ್ನು ಪ್ರತಿಪಾದಿಸುತ್ತಿರುವಾಗ ಸ್ಥಳೀಯರ ಬೇಡಿಕೆಗಳನ್ನು ಧ್ವನಿಸುವ ಹಿಂದಿ ಮಾಧ್ಯಮಗಳನ್ನು ದಾರಿಯಿಂದ ತೆಗೆದುಹಾಕಲು ನೀವು ಜಾಗತಿಕ ಚಾನೆಲ್ ಆರಂಭಿಸಲು ಯೋಜಿಸಿರುವುದು ವಿಪರ್ಯಾಸವಾಗಿದೆ. ಅಲ್ ಜಝೀರ ದಂತಹ ಚಾನಲ್ ಮಾಡಬೇಕು ಎಂದು ಹೇಳುವ ಅದಾನಿ ಅಲ್ ಜಝೀರದವರು ಪ್ರಶ್ನೆ ಕೇಳಿದರೆ ಉತ್ತರಿಸುವುದಿಲ್ಲ. 

ಅದಾನಿ ಬಳಿ ಹಣವಿದೆ, ಬಯಸಿದರೆ ಎನ್ಡಿಟಿವಿಯನ್ನು ಜಾಗತಿಕ ಚಾನೆಲನ್ನಾಗಿ ಮಾಡಬಲ್ಲರು ಎಂದು ನೀವು ಹೇಳುತ್ತೀರಿ. ಆದರೆ ಅವರ ಹಣಕ್ಕೆ ಯಾವುದೇ ಮೌಲ್ಯವಿಲ್ಲ. ತಾಕತ್ತು, ಖಂಡಿತವಾಗಿಯೂ ಅದಕ್ಕೂ ಬೆಲೆಯಿಲ್ಲ. ಅವರ ಜೇಬಲ್ಲಿ ದುಡ್ಡಿದ್ದರೆ ನನ್ನಲ್ಲಿ ಧಮ್ ಇದೆ.  ಅದಕ್ಕೆ ಬೆಲೆ ಇದ್ದಿದ್ದರೆ ಅವರು ನನ್ನನ್ನು ಖರೀದಿಸಿರುತ್ತಿದ್ದರು. ನನ್ನನ್ನು ಖರೀದಿಸಲು ಸಾಧ್ಯವಿಲ್ಲ.

ಅವರ ಗಣನೀಯ ವಿಶ್ವಾಸಾರ್ಹತೆಯ ಆಧಾರದಲ್ಲಿ ಜಾಗತಿಕ ಚಾನೆಲ್ ಸೃಷ್ಟಿಸುವ ಈ ಮಾತುಗಳ ಬಗ್ಗೆ ನನಗೆ ವಿಶ್ವಾಸವಿಲ್ಲ. ಅವರ ವಿಶ್ವಾಸಾರ್ಹತೆ ಅವರ ವ್ಯವಹಾರದಲ್ಲಿದೆ ಎನ್ನುವುದು ನಿಮಗೆ ಗೊತ್ತು. ಚಾನೆಲ್ ವೀಕ್ಷಕರು ಕಲ್ಲಿದ್ದಲು ಗಣಿಗಾರಿಕೆ ಉದ್ಯಮ ಮತ್ತು ವ್ಯವಹಾರಗಳ ಬಗ್ಗೆ, ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಓದಿಕೊಂಡರೆ ಅದಾನಿ ಏನು ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ.

Full View

Similar News