ನಕಲಿ ಎನ್‌ಕೌಂಟರ್: 16 ವರ್ಷ ಬಳಿಕ ಐವರು ಪೊಲೀಸರಿಗೆ ಜೀವಾವಧಿ ಶಿಕ್ಷೆ

Update: 2022-12-22 02:55 GMT

ಆಗ್ರಾ: ಲೂಟಿ ಪ್ರಕರಣದಲ್ಲಿ ಷಾಮೀಲಾದ ಆರೋಪದಲ್ಲಿ 32 ವರ್ಷ ವಯಸ್ಸಿನ ಬಡಗಿಯೊಬ್ಬರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಪೊಲೀಸ್ ತಂಡದ ಐವರು ಪೊಲೀಸರಿಗೆ ಹದಿನಾರು ವರ್ಷಗಳ ಬಳಿಕ ಗಾಝಿಯಾಬಾದ್‌ನ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಒಟ್ಟು ಒಂಬತ್ತು ಮಂದಿ ಪೊಲೀಸರನ್ನು ತಪ್ಪಿತಸ್ಥರೆಂದು ನಿರ್ಣಯಿಸಿದೆ.

ತಾನು ಮಾಡಿಸಿಕೊಂಡ ಮನೆ ಕೆಲಸಕ್ಕೆ ಹಣ ನೀಡದ ಪೊಲೀಸ್ ಪೇದೆಯ ಜತೆ ಇದ್ದ ವ್ಯಾಜ್ಯದ ಹಿನ್ನೆಲೆಯಲ್ಲಿ ರಾಜಾರಾಮ್ ಶರ್ಮಾ ಅವರನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ್ದಾರೆ ಎನ್ನುವುದು ಸಂತ್ರಸ್ತರ ಕುಟುಂಬದ ಆರೋಪ. 2006ರ ಆಗಸ್ಟ್ 18ರಂದು ಅಸ್ವಸ್ಥ ಸಹೋದರಿಯನ್ನು ನೋಡಲು ಹೋಗುತ್ತಿದ್ದ ಸಂದರ್ಭದಲ್ಲಿ ಶರ್ಮಾ ಅವರನ್ನು ಪೊಲೀಸರು ಅಪಹರಿಸಿದ್ದರು. ಅಪಹರಣಕ್ಕೆ ಒಳಗಾದ ಹತ್ತು ದಿನಗಳ ಬಳಿಕ ಅವರು ಹತ್ಯೆಯಾದ ಬಗ್ಗೆ ಕುಟುಂಬಕ್ಕೆ ತಿಳಿದುಬಂದಿತ್ತು.

ಅಪರಿಚಿತ ಶವ ಎಂಬ ಸೋಗಿನಲ್ಲಿ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದರು. ರಾಜಾರಾಮ್ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳ ಇತಿಹಾಸ ಇಲ್ಲದ ಹಿನ್ನೆಲೆಯಲ್ಲಿ ಅವರ ಪತ್ನಿ ಸಂತೋಷ್ ಕುಮಾರಿ (ಇದೀಗ 38 ವರ್ಷ) ತಮ್ಮ ಪತಿಯ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸಿದ್ದರು. ಆದರೆ ಪೊಲೀಸ್ ಇಲಾಖೆ ಈ ಮನವಿಗೆ ಕಿವುಡಾಗಿತ್ತು. 2007ರ ಜೂನ್ 1ರಂದು ಅವರು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ರಾಜಾರಾಂ ಅವರ ವಿರುದ್ಧ ಒಂದು ಪ್ರಕರಣವೂ ದಾಖಲಾಗಿರದ ಹಿನ್ನೆಲೆಯಲ್ಲಿ ಅವರನ್ನು ಶಂಕಿತ ಆರೋಪಿ ಎಂದು ಹಣೆಪಟ್ಟಿ ಕಟ್ಟಿದ ಬಗ್ಗೆ ಮತ್ತು ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು.

2009ರ ಜೂನ್ 22ರಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. 2015ರ ಡಿಸೆಂಬರ್ 4ರಂದು ವಿಚಾರಣೆ ಆರಂಭವಾಗಿತ್ತು. 202 ಸಾಕ್ಷಿಗಳನ್ನು ಸಿಬಿಐ ಹಾಜರುಪಡಿಸಿತ್ತು. ಬುಧವಾರ ಗಾಝಿಯಾಬಾದ್ ಸಿಬಿಐ ವಿಶೇಷ ನ್ಯಾಯಾಧೀಶ ಪರ್ವೇಂದರ್ ಕುಮಾರ್ ಶರ್ಮಾ ಅವರು ಠಾಣಾಧಿಕಾರಿ ಪವನ್ ಸಿಂಗ್, ಪಿಎಸ್‌ಐ ಪಾಲ್ ಸಿಂಗ್, ಪೇದೆಗಳಾದ ಸರ್ನಂ ಸಿಂಗ್, ರಾಜೇಂದ್ರ ಪ್ರಸಾದ್ ಮತ್ತು ಜೀಪು ಚಾಲಕ ಮೋಖಂ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಎಲ್ಲ ಐದು ಮಂದಿಗೆ ತಲಾ 38 ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಲಾಗಿದೆ. ಇವರ ಹೊರತಾಗಿ ನಾಲ್ವರು ಪೇದೆಗಳಾದ ಬಲದೇವ್ ಪ್ರಸಾದ್, ಅಜಯ್ ಕುಮಾರ್, ಅವಧೇಶ್ ರಾವತ್ ಹಾಗೂ ಸುಮೇರ್ ಸಿಂಗ್ ಅವರಿಗೆ ಸಾಕ್ಷ್ಯ ನಾಶಪಡಿಸಿದ ಹಾಗೂ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಐದು ವರ್ಷದ ಜೈಲು ಶಿಕ್ಷೆ ಹಾಗೂ ತಲಾ 11 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಠಾಣಾಧಿಕಾರಿ ನಿವೃತ್ತರಾಗಿದ್ದು, ಉಳಿದ ಎಂಟು ಮಂದಿ ಇನ್ನೂ ಸೇವೆಯಲ್ಲಿದ್ದಾರೆ.

Similar News