×
Ad

ದೇಶ ಕಂಡ ಅದ್ಭುತ ಗಣಿತದ ಪ್ರತಿಭೆ ಶ್ರೀನಿವಾಸನ್ ರಾಮಾನುಜನ್

ಇಂದು ರಾಷ್ಟ್ರೀಯ ಗಣಿತ ಶಾಸ್ತ್ರ ದಿನ

Update: 2022-12-22 09:27 IST

ರಾಮಾನುಜನ್ ಸುಮಾರು 3,900ಕ್ಕೂ ಹೆಚ್ಚು ಕ್ಲಿಷ್ಟ ಸಮಸ್ಯೆಗಳನ್ನು ಗುರುತಿಸಿ ದಾಖಲಾತಿಯನ್ನು ಅತೀ ಕಡಿಮೆ ಅವಧಿಯಲ್ಲಿ ಮಾಡಿ ವಿಶ್ವವಿಖ್ಯಾತಿ ಗಳಿಸಿದ್ದರು. ರಾಮಾನುಜನ್ ಪ್ರೈಮ್, ರಾಮಾನುಜನ್ ಥೀಟಾ ಫಂಕ್ಷನ್, ಪಾರ್ಟಿಷನ್ ಫಾರ್ಮುಲಾ, ಮ್ಯಾಕ್ ಥೀಟಾ ಫಂಕ್ಷನ್ ಹೀಗೆ ಅವರ ನೂರಾರು ವಿಚಾರಗಳು, ಸಂಶೋಧನೆಗಳು ಜಗತ್‌ವಿಖ್ಯಾತಿಯಾಗಿದೆ. 

ಪ್ರತೀ ವರ್ಷ ಡಿಸೆಂಬರ್ 22ರಂದು ಭಾರತದಾದ್ಯಂತ ರಾಷ್ಟ್ರೀಯ ಗಣಿತ ಶಾಸ್ತ್ರ ದಿನ ಎಂದು ಆಚರಿಸಿ ಭಾರತ ದೇಶ ಕಂಡಂತಹ ಅತ್ಯಂತ ಮೇಧಾವಿ ಮತ್ತು ಚತುರ ಗಣಿತ ಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜನ್ ಅವರನ್ನು ಸ್ಮರಿಸಲಾಗುತ್ತದೆ. ಅವರು ವಿಶ್ವದ ಗಣಿತ ಶಾಸ್ತ್ರಕ್ಕೆ ಕೊಟ್ಟಂತಹ ಕೊಡುಗೆಗಳಾದ ನಂಬರ್ ಥಿಯರಿ, ಅನಂತ ಸರಣಿ ಅಥವಾ ಇನ್‌ಫಿನಿಟ್ ಸೀರೀಸ್, ಗಣಿತ ಶಾಸ್ತ್ರದ ವಿಶ್ಲೇಷಣೆ ಮುಂತಾದವುಗಳು ಗಣಿತ ಶಾಸ್ತ್ರದ ಮೈಲಿಗಲ್ಲುಗಳಾಗಿ ದಾಖಲಾಗಿದೆ.

ಅವರ 125ನೇ ಜನ್ಮಶತಾಬ್ದಿಯ ಅಂಗವಾಗಿ ಭಾರತ ಸರಕಾರ ಅವರ ಭಾವಚಿತ್ರದ ಅಂಚೆ ಚೀಟಿಯನ್ನು ಜಾರಿಗೆ ತಂದಿತು. 2012ರಲ್ಲಿ ಆಗಿನ ಭಾರತದ ಪ್ರಧಾನಿ ಮನಮೋಹನ್‌ಸಿಂಗ್ ಅವರು ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನವಾದ ಡಿಸೆಂಬರ್ 22ರನ್ನು ರಾಷ್ಟ್ರೀಯ ಗಣಿತ ರಾಷ್ಟ್ರ ದಿನ ಎಂದು ಘೋಷಿಸಿ, ಹೊಸದಾದ ಆಚರಣೆಯನ್ನು ದೇಶದಾದ್ಯಂತ ಆರಂಭಿಸಿದರು.

ಯಾರಿವರು ರಾಮಾನುಜನ್?

ಶ್ರೀನಿವಾಸನ್ ಅಯ್ಯಂಗಾರ್ ರಾಮಾನುಜನ್, 1887ನೇ ಇಸವಿ ಡಿಸೆಂಬರ್ 22ರಂದು ಈರೋಡ್ (ತಮಿಳುನಾಡು)ನಲ್ಲಿ ಜನಿಸಿದರು. ಅತ್ಯಂತ ಕಡುಬಡುತನದ ಕುಟುಂಬದಲ್ಲಿ ಹುಟ್ಟಿದ ರಾಮಾನುಜನ್ ಬದುಕಿದ್ದು ಕೇವಲ 32 ವರ್ಷ. ಆದರೆ ಅಷ್ಟು ಕಡಿಮೆ ಅವಧಿಯಲ್ಲಿ ಅವರು ಸಾಧಿಸಿದ ಸಾಧನೆ ಮಾತ್ರ ಊಹೆಗೂ ನಿಲುಕದ್ದು. ಬಹಳ ಮೇಧಾವಿಯಾಗಿದ್ದ ಆತ ತನ್ನ 12ನೇ ವಯಸ್ಸಿಗೆ ಟ್ರಿಗ್ನೂಮೆಟ್ರಿಯನ್ನು ಕರಗತ ಮಾಡಿ ತನ್ನದೇ ಆದ ವಿಚಾರಗಳನ್ನು ಥಿಯರಮ್ ಮತ್ತು ಐಡಿಯಾಗಳನ್ನು ಪ್ರತಿಪಾದಿಸಿದ.

ಗಣಿತ ಶಾಸ್ತ್ರದ ಮೇಲೆ ವಿಪರೀತ ಮೋಹ ಹೊಂದಿದ್ದ ರಾಮಾನುಜನ್ ಇತರ ವಿಷಯಗಳಲ್ಲಿ ಆಸಕ್ತಿ ಹೊಂದಿರಲಿಲ್ಲ. 1904ರಲ್ಲಿ ಸರಕಾರಿ ಆರ್ಟ್ ಕಾಲೇಜು ಕುಂಬಕೋಣಮ್ ಇಲ್ಲಿ ದಾಖಲಾತಿಯಾದರೂ ಗಣಿತದಲ್ಲಿ ವಿಶೇಷ ವ್ಯಾಮೋಹದ ಕಾರಣದಿಂದ ಇತರ ವಿಷಯಗಳಲ್ಲಿ ಅನುತ್ತೀರ್ಣರಾದ ಕಾರಣ ಪದವಿಗಳಿಸಲಿಲ್ಲ. 

14ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಹೋಗಿ ತನ್ನ ಗಣಿತಶಾಸ್ತ್ರದ ದಾಹವನ್ನು ತೀರಿಸಲು ಯತ್ನಿಸಿದ್ದರು. 1912ರಲ್ಲಿ ಭಾರತೀಯ ಗಣಿತ ಶಾಸ್ತ್ರ ಸೊಸೈಟಿ ಇದರ ಸಂಸ್ಥಾಪಕರಾದ ರಾಮಸ್ವಾಮಿ ಅಯ್ಯರ್ ಅವರು ರಾಮಾನುಜನ್ ಅವರ ಪ್ರತಿಭೆ ಗುರುತಿಸಿ ಆತನಿಗೆ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಕ್ಲರ್ಕ್ ಕೆಲಸ ನೀಡಿದರು. ಜೀವನೋಪಾಯಕ್ಕಾಗಿ ಕ್ಲರ್ಕ್ ಕೆಲಸ ಮಾಡಿ ತನ್ನ ಓದಿನ ಅಗತ್ಯಗಳನ್ನು ಪೂರ್ಯೆಸುತ್ತಿದ್ದ ರಾಮಾನುಜನ್ ಗಣಿತಶಾಸ್ತ್ರದ ಅತೀ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸಿ ತನ್ನದೇ ಆದ ಥಿಯರಿ ಮತ್ತು ಹೊಸ ಹೊಸ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದರು. ಇದರಿಂದ ಮತ್ತಷ್ಟು ಪ್ರಚೋದಿತರಾಗಿ ತನ್ನ ಎಲ್ಲಾ ಸಂಶೋಧನೆಗಳನ್ನು ಇಂಗ್ಲೆಂಡ್ ಗಣಿತಶಾಸ್ತ್ರಜ್ಞರಿಗೆ ರಾಮಾನುಜನ್ ಕಳುಹಿಸಲು ಆರಂಭಿಸಿದರು. 1913ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಜಿ.ಎಚ್. ಹಾರ್ಡಿ ಇವರು ರಾಮಾನುಜನ್‌ಗೆ ಪತ್ರ ಬರೆದು ಅವರನ್ನು ಇಂಗ್ಲೆಂಡ್‌ಗೆ ಆಹ್ವಾನಿಸಿದರು. 1914ರಲ್ಲಿ ಅವರು ಇಂಗ್ಲೆಂಡ್‌ಗೆ ತಲುಪಿ ಟ್ರಿನಿಟಿ ಕಾಲೇಜಿಗೆ ಸೇರುತ್ತಾರೆ. 

1917ರಲ್ಲಿ ಲಂಡನ್ ಗಣಿತಶಾಸ್ತ್ರ ಸೊಸೈಟಿ ಇದರ ಸದಸ್ಯರಾದರು. 1918ರಲ್ಲಿ ರಾಯಲ್ ಸೊಸೈಟಿ ಫೆಲೋ ಆಗಿ ಆಯ್ಕೆಯಾಗಿ ಅತೀ ಚಿಕ್ಕ ವಯಸ್ಸಿನಲ್ಲಿ ಇದರ ಸದಸ್ಯರಾದ ಹಿರಿಮೆ ಅವರದು. ಗಣಿತಶಾಸ್ತ್ರದ ಕ್ಲಿಷ್ಟ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಅವರು ಪರಿಹರಿಸುತ್ತಿದ್ದರು. ಯಾರ ಸಹಾಯವಿಲ್ಲದೆ, ತನ್ನದೇ ಆದ ವಿಚಾರಗಳನ್ನು ಪ್ರತಿಪಾದಿಸಿ ಅದನ್ನು ಸಾಧಿಸುವ ಛಲ ಮತ್ತು ಕೌಶಲ ಅವರಿಗಿತ್ತು. 

ಅವರ ಹೆಚ್ಚಿನ ಎಲ್ಲಾ ಸಂಶೋಧನೆಗಳು ಭಾರತೀಯ ಗಣಿತ ಶಾಸ್ತ್ರ ನಿಯತಕಾಲಿಕಗಳಲ್ಲಿ ಪ್ರಕಟವಾಗಿತ್ತು. ಸುಮಾರು 3,900ಕ್ಕೂ ಹೆಚ್ಚು ಕ್ಲಿಷ್ಟ ಸಮಸ್ಯೆಗಳನ್ನು ಗುರುತಿಸಿ ದಾಖಲಾತಿಯನ್ನು ಅತೀ ಕಡಿಮೆ ಅವಧಿಯಲ್ಲಿ ಮಾಡಿ ವಿಶ್ವವಿಖ್ಯಾತಿ ಗಳಿಸಿದ್ದರು. ರಾಮಾನುಜನ್ ಪ್ರೈಮ್, ರಾಮಾನುಜನ್ ಥೀಟಾ ಫಂಕ್ಷನ್, ಪಾರ್ಟಿಷನ್ ಫಾರ್ಮುಲಾ, ಮ್ಯಾಕ್ ಥೀಟಾ ಫಂಕ್ಷನ್ ಹೀಗೆ ಅವರ ನೂರಾರು ವಿಚಾರಗಳು, ಸಂಶೋಧನೆಗಳು ಜಗತ್‌ವಿಖ್ಯಾತಿಯಾಗಿದೆ. 

ಅತೀ ಕಡಿಮೆ ಅವಧಿಯಲ್ಲಿ ಆತ ಮಾಡಿದ ಈ ಸಾಧನೆಗಳು ಮತ್ತಷ್ಟು ಹೆಚ್ಚಿನ ಸಂಶೋಧನೆಗಳಿಗೆ ರಹದಾರಿಯನ್ನು ತೋರಿಸಿತ್ತು. ಇದು ಇನ್ನಿತರ ಹೊಸ ಹೊಸ ಪ್ರತಿಭೆಗಳಿಗೆ ಮತ್ತಷ್ಟು ಹುಮ್ಮಸ್ಸು ತುಂಬಿ ಗಣಿತ ಶಾಸ್ತ್ರದ ಬಗ್ಗೆ ಹೆಚ್ಚು ಹೆಚ್ಚು ಜನರು ಮುಖ ಮಾಡುವಂತೆ ಪ್ರೇರೇಪಣೆ ನೀಡಿತ್ತು ಎಂದರೆ ತಪ್ಪಾಗಲಾರದು.

ಅದರೆ ಇಂಗ್ಲೆಂಡ್‌ನ ಆಹಾರ ಮತ್ತು ವಾತಾವರಣ ಅವರಿಗೆ ಹಿಡಿಸದೆ ಆರೋಗ್ಯ ಕೈಕೊಡುತ್ತದೆ. 1919ರಲ್ಲಿ ಆರೋಗ್ಯ ಸಮಸ್ಯೆಯಿಂದ ಭಾರತಕ್ಕೆ ವಾಪಸಾಗುತ್ತಾರೆ. ಹದಗೆಟ್ಟ ಆರೋಗ್ಯ ಮತ್ತಷ್ಟು ಕಾಡಿ 1920ರಲ್ಲಿಯೇ ಇಹಲೋಕ ತ್ಯಜಿಸಿದರು. ಕೇವಲ 32 ವರ್ಷ ಬದುಕಿದ್ದರೂ ಸಾವಿರಾರು ವಿಚಾರಗಳನ್ನು, ಪ್ರಬಂಧಗಳನ್ನು, ನೂರಾರು ಸಂಶೋಧನೆಗಳನ್ನು ಮಾಡಿ ಯುವ ಪೀಳಿಗೆಗೆ ಬಹಳಷ್ಟು ಸ್ಫೂರ್ತಿಯಾಗಿ ಗಣಿತಶಾಸ್ತ್ರಕ್ಕೆ ಅದ್ಭುತವಾದ ಕೊಡುಗೆ ನೀಡಿದವರು.

ದಿನಾಚರಣೆಯ ಉದ್ದೇಶ

* ಮಕ್ಕಳಲ್ಲಿ ಮೂಲ ವಿಜ್ಞಾನದ ತಿರುಳಾದ ಗಣಿತ ಶಾಸ್ತ್ರದ ಬಗ್ಗೆ ಒಲವು ಮೂಡಿಸಲು.

* ಹೆತ್ತವರಲ್ಲಿ ತಮ್ಮ ಮಕ್ಕಳನ್ನು ಸಂಶೋಧನೆಗೆ ತೆರೆದುಕೊಳ್ಳಲು ಪೂರಕವಾದ ಗಣಿತಶಾಸ್ತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ.

* ಗಣಿತ ಶಾಸ್ತ್ರದಿಂದ ಮಾನವೀಯತೆಯ ಸೇವೆ ಸಾಧ್ಯ ಎಂಬ ವಿಚಾರವನ್ನು ಜನರಲ್ಲಿ ಮನದಟ್ಟು ಮಾಡಿ ಮನಪರಿವರ್ತನೆ ಮಾಡುವ ಉದ್ದೇಶದಿಂದ.

* ನಮ್ಮ ಜೀವನದ ದೈನಂದಿನ ಕೆಲಸ ಕಾರ್ಯಗಳು ಸರಾಗವಾಗಿ ಸಾಗಬೇಕಿದ್ದಲ್ಲಿ ಗಣಿತ ಶಾಸ್ತ್ರದ ಅಧ್ಯಯನ ಮತ್ತು ಅಳವಡಿಕೆ ಅತೀ ಅವಶ್ಯಕ ಎಂಬ ವಿಚಾರವನ್ನು ಜನರಲ್ಲಿ ಮತ್ತು ಸಮಾಜದಲ್ಲಿ ಮನವರಿಕೆ ಮಾಡಿಸಲು.

* ಯುವ ಜನರಲ್ಲಿ ಹೆಚ್ಚು ಹೆಚ್ಚು ಹಣ ಮಾಡುವ ಉದ್ದೇಶದ ವಿದ್ಯಾಭ್ಯಾಸದ ಬಗ್ಗೆ ಮಾತ್ರ ಹೆಚ್ಚಿನ ಒಲವು ಇರುವುದನ್ನು ತೊಡೆದುಹಾಕಿ, ಸಂಶೋಧನೆ ಮತ್ತು ಬೋಧನೆ ಮುಖಾಂತರ ಸಮಾಜ ಪರಿವರ್ತನೆ ಮಾಡಲು ಸಾಧ್ಯವಾಗುವ ಗಣಿತ ಶಾಸ್ತ್ರದ ಬಗ್ಗೆ ಒಲವು ಮೂಡಿಸಲು.

Similar News