ಪುರುಷನೂ ಅಲ್ಲ.. ಮಹಿಳೆಯೂ ಅಲ್ಲ...: ಪ್ರಧಾನಿ ಕುರಿತು ಟಿಎಂಸಿ ನಾಯಕನ ವಿವಾದಾತ್ಮಕ ಪೋಸ್ಟ್

Update: 2022-12-22 04:31 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇತೀಚೆಗೆ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಶಿಲ್ಲಾಂಗ್‌ಗೆ ಭೇಟಿ ನೀಡಿದ್ದಾಗ, ಅಲ್ಲಿನ ಸಾಂಪ್ರದಾಯಿಕ ಖಾಸಿ ಉಡುಪು ಧರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟರ್ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಅಜಾದ್ ಅವರು, ಆ ಸಂದರ್ಭದಲ್ಲಿ ಮೋದಿ ಧರಿಸಿದ್ದು ಮಹಿಳೆಯರ ಉಡುಪು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಖಂಡಿಸಿದ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ, ಟಿಎಂಸಿ ನಾಯಕ ಮೇಘಾಲಯ ಸಂಸ್ಕೃತಿಯನ್ನು ಅವಹೇಳನ ಮಾಡಿದ್ದಾರೆ ಎಂದು ಆಪಾದಿಸಿದ್ದರು. ಟಿಎಂಸಿ ನಾಯಕ ಬುಡಕಟ್ಟು ಜನಾಂಗವನ್ನು ಅವಮಾನ ಮಾಡಿದ್ದಾಗಿ ಬಿಜೆಪಿ ಎಸ್ಟಿ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿತ್ತು.

ಸಂಸ್ಕೃತಿಗೆ ಅಗೌರವ ತೋರುವ ಉದ್ದೇಶ ತಮಗಿಲ್ಲ; ಕೇವಲ ಮೋದಿಯವರ ಫ್ಯಾಷನ್ ಬಗ್ಗೆ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಕೀರ್ತಿ ಆಜಾದ್ ಸ್ಪಷ್ಟಪಡಿಸಿದ್ದರು. ಈ ಪೋಸ್ಟನ್ನು ಇದೀಗ ಕಿತ್ತುಹಾಕಲಾಗಿದೆ. "ಪುರುಷನೂ ಅಲ್ಲ; ಮಹಿಳೆಯೂ ಅಲ್ಲ: ಕೇವಲ ಫ್ಯಾಶನ್ ಆರಾಧಕ" ಎಂದು ಕೀರ್ತಿ ಆಜಾದ್ ಬರೆದು ಪ್ರಧಾನಿಯವರು ಬುಡಕಟ್ಟು ಜನಾಂಗದ ದಿರಿಸು ಧರಿಸಿದ್ದ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಇದರ ಪಕ್ಕದಲ್ಲೇ ಮಹಿಳೆಯೊಬ್ಬರು ಇಂಥದ್ದೇ ಉಡುಪು ಧರಿಸಿದ್ದ ಚಿತ್ರವನ್ನೂ ಬಿಂಬಿಸಿ, "ಲೈಕ್ ಇಟ್? ಬೈ ಇಟ್ ಹೀಯರ್" ಎಂದು ಶೀರ್ಷಿಕೆ ನೀಡಲಾಗಿತ್ತು.

ಹಲವು ಮಂದಿ ನೆಟ್ಟಿಗರು ಇದು ಫೋಟೊಶಾಪ್‌ನಲ್ಲಿ ತಿದ್ದಲಾದ ಫೋಟೊ ಎಂದು ಪತ್ತೆ ಮಾಡಿದ್ದರು. ಇ-ಕಾಮರ್ಸ್ ಸೈಟ್‌ನಲ್ಲಿ ಮಹಿಳೆ ಧರಿಸಿದ್ದು ಭಿನ್ನ ದಿರಿಸು ಹಾಗೂ ಮೋದಿಯವರ ದಿರಿಸನ್ನು ಇದಕ್ಕೆ ಸೂಪರ್ ಇಂಪೋಸ್ ಮಾಡಿ ಅಣಕಿಸಲಾಗಿತ್ತು.

ಬಿಜೆಪಿ ರಾಜ್ಯಸಭಾ ಸದಸ್ಯ ಸಮೀರ್ ಓರನ್, ಕೀರ್ತಿ ಆಜಾದ್ ಅವರನ್ನು ಟೀಕಿಸಿ, ಟಿಎಂಸಿ ನಾಯಕನಿಗೆ ಈ ಬಗ್ಗೆ ಪರಿಜ್ಞಾನ ಇಲ್ಲ. ಮೋದಿ ಧರಿಸಿದ ಬುಡಕಟ್ಟು ದಿರಿಸಿದ ಬಗ್ಗೆ ಮೊದಲು ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ.

Similar News