BCCIನೊಂದಿಗಿನ ಪ್ರಾಯೋಜಕತ್ವ ಒಪ್ಪಂದದಿಂದ ಹಿಂದೆ ಸರಿಯಲು ಮುಂದಾದ ಬೈಜೂಸ್, ಎಂಪಿಎಲ್ ಸ್ಪೋರ್ಟ್ಸ್

Update: 2022-12-22 09:20 GMT

ಹೊಸದಿಲ್ಲಿ: ಜೂನ್ ತಿಂಗಳಲ್ಲಿ ಬಿಸಿಸಿಐನೊಂದಿಗೆ ಮಾಡಿಕೊಂಡಿದ್ದ ಪ್ರಾಯೋಜಕತ್ವ ಒಪ್ಪಂದದಿಂದ ಹಿಂದೆ ಸರಿಯಲು ಭಾರತೀಯ ತಂಡದ ಪ್ರಮುಖ ಪ್ರಾಯೋಜಕತ್ವ ಸಂಸ್ಥೆಗಳಾದ ಬೈಜೂಸ್ ಹಾಗೂ ಎಂಪಿಎಲ್ ಸ್ಪೋರ್ಟ್ಸ್ ಮುಂದಾಗಿವೆ ಎಂದು ತಿಳಿದು ಬಂದಿದೆ. ಜೂನ್ ತಿಂಗಳಲ್ಲಿ ಭಾರತೀಯ ತಂಡದ ಆಟಗಾರರ ಜೆರ್ಸಿಯನ್ನು ಪ್ರಾಯೋಜಿಸಲು ಬೈಜೂಸ್ ಬಿಸಿಸಿಐನೊಂದಿಗೆ 35 ದಶಕಕ್ಷ ಡಾಲರ್ ಒಪ್ಪಂದಕ್ಕೆ ಸಹಿ ಮಾಡಿತ್ತು. ಈ ಒಪ್ಪಂದಂತೆ ಬೈಜೂಸ್ ನವೆಂಬರ್, 2023ರವರೆಗೆ ಜೆರ್ಸಿಯನ್ನು ಪ್ರಾಯೋಜಿಸಬೇಕಿತ್ತು. ಆದರೆ, ಒಪ್ಪಂದದಿಂದ ಹಿಂದೆ ಸರಿಯಲು ಮುಂದಾಗಿರುವ ಬೈಜೂಸ್ ಸಂಸ್ಥೆಗೆ ಕನಿಷ್ಠ ಮಾರ್ಚ್, 2023ರವರೆಗೆ ಪ್ರಾಯೋಜಕತ್ವ ಮುಂದುವರಿಸುವಂತೆ ಬಿಸಿಸಿಐ ಮನವಿ ಮಾಡಿತ್ತು.

"ಇತ್ತೀಚೆಗೆ ಮುಕ್ತಾಯಗೊಂಡ ಟಿ-20 ವಿಶ್ವಕಪ್ ನಂತರ ಒಪ್ಪಂದವನ್ನು ರದ್ದುಗೊಳಿಸುವಂತೆ ಬೈಜೂಸ್ ಕಳಿಸಿರುವ ಈಮೇಲ್ ನವೆಂಬರ್ 4, 2022ರಂದು ಬಿಸಿಸಿಐಗೆ ತಲುಪಿದೆ. ಆದರೆ, ಬೈಜೂಸ್ ಸಂಸ್ಥೆಯೊಂದಿಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಮಾರ್ಚ್ 31, 2023ರವರೆಗಾದರೂ ಹಾಲಿ ಒಪ್ಪಂದವನ್ನು ಮುಂದುವರಿಸುವಂತೆ ಮನವಿ ಮಾಡಲಾಗಿದೆ" ಎಂದು ಬಿಸಿಸಿಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು thenewsminute.com ವರದಿ ಮಾಡಿದೆ.

ಈ ಕುರಿತು ಬುಧವಾರದಂದು ಬಿಸಿಸಿಐ ಉನ್ನತ ಮಂಡಳಿಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ. 2019ರಲ್ಲಿ ಒಪ್ಪೊ ಬದಲಿಗೆ ಬೈಜೂಸ್ ಸಂಸ್ಥೆ ಭಾರತೀಯ ಆಟಗಾರರ ಜೆರ್ಸಿ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. ಇತ್ತೀಚೆಗೆ ಕತರ್‌ನಲ್ಲಿ ಮುಕ್ತಾಯಗೊಂಡ ಫಿಫಾ ವಿಶ್ವಕಪ್ 2022ರ ಪ್ರಾಯೋಜಕ ಸಂಸ್ಥೆಗಳ ಪೈಕಿ ಬೈಜೂಸ್ ಸಂಸ್ಥೆ ಕೂಡಾ ಒಂದಾಗಿತ್ತು.

Similar News