×
Ad

ರೈತರನ್ನು ಕಾಯಬಲ್ಲ ಮಾನವೀಯ ನೀತಿ ಬೇಕಿದೆ

ಇಂದು ರಾಷ್ಟ್ರೀಯ ರೈತರ ದಿನ

Update: 2022-12-23 10:36 IST

ರೈತನ ಕಷ್ಟಕಾಲದಲ್ಲಿ ಅವನ ಬಲಕ್ಕೆ ನಿಲ್ಲುವ ಮಾನವೀಯ ಮಾರ್ಗಗಳು ತೆರೆದುಕೊಳ್ಳುವುದು ಅಗತ್ಯವಿದೆ. ಕಾರ್ಪೊರೇಟ್ ವಲಯದ ಹಿತಾಸಕ್ತಿಗಳನ್ನು ಕಾಯುವುದಕ್ಕಿಂತ ಈ ದೇಶದ ಬಡ ರೈತನನ್ನು ಕಾಳಜಿಯಿಂದ, ಕಳಕಳಿಯಿಂದ ನೋಡುವ ನೀತಿಗಳ ಅಗತ್ಯ ಬಹಳವಿದೆ.

ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ನಲುಗುತ್ತಿರುವವನು ಈ ದೇಶದ ರೈತ. ಅವನಿಂದು ತನ್ನ ಬಡತನ, ಆರ್ಥಿಕ ಅಸಹಾಯಕತೆ, ಬೆಳೆನಷ್ಟದಂಥ ಸಮಸ್ಯೆಗಳ ಜೊತೆಗೇ ತನ್ನನ್ನು ಇಡಿಯಾಗಿ ನುಂಗಿಹಾಕಲು ಬರುತ್ತಿರುವ ಕಾರ್ಪೊರೇಟ್ ಆಕ್ರಮಣವನ್ನು ಕೂಡ ಎದುರಿಸಬೇಕಾಗಿದೆ.

ದೇಶದ ರೈತರ ಪಾಲಿಗೆ ಕಳೆದ ಕೆಲವು ವರ್ಷಗಳಂತೂ ಇವೆಲ್ಲದರ ಜೊತೆಗೇ ಕೋವಿಡ್ ಬರೆಯನ್ನೂ ಎಳೆದಿವೆ. ಸಾಮಾನ್ಯ ಜನರ ಬದುಕನ್ನು ಕೋವಿಡ್ ಅಸ್ತವ್ಯಸ್ತಗೊಳಿಸಿದೆ. ಇಂದಿಗೂ ಎಷ್ಟೋ ಕುಟುಂಬಗಳು ಕೋವಿಡ್ ಹೊಡೆತದಿಂದ ಸುಧಾರಿಸಿಕೊಂಡಿಲ್ಲ. ಸಣ್ಣಪುಟ್ಟ ಉದ್ಯಮಗಳು ಇಲ್ಲವಾಗಿ ಹೋಗಿವೆ. ಅದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದವರು ಅತಂತ್ರಗೊಂಡಿದ್ದಾರೆ.

ಕೃಷಿ ವಲಯದಲ್ಲೂ ರೈತರು ಇದರ ಪರಿಣಾಮವಾಗಿ ತಿಂದಿರುವ ಹೊಡೆತ ಸಣ್ಣದಲ್ಲ. ಕೃಷಿಕರು ಮಾತ್ರವಲ್ಲದೆ, ಕೃಷಿಯನ್ನೇ ನೆಚ್ಚಿದ್ದ ಕೃಷಿ ಕಾರ್ಮಿಕರು, ಎಷ್ಟೋ ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡರು. ಅಂತಿಮವಾಗಿ ಇದು ಎಷ್ಟೋ ಮಂದಿಯನ್ನು ಬಲಿ ತೆಗೆದು ಕೊಂಡಿತು ಕೂಡ. 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, 2021ರಲ್ಲಿ ದೇಶಾದ್ಯಂತ ಕೃಷಿ ವಲಯದ 10,881 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 5,318 ರೈತರು ಮತ್ತು 5,563 ಕೃಷಿ ಕಾರ್ಮಿಕರು. ಈ ಆತ್ಮಹತ್ಯೆ ಪ್ರಮಾಣವು 2021ರಲ್ಲಿ ದೇಶದಲ್ಲಿ ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡವರ ಒಟ್ಟು ಪ್ರಮಾಣದಲ್ಲಿ ಶೇ.6.6ರಷ್ಟಿದೆ. 5,318 ರೈತರ ಆತ್ಮಹತ್ಯೆಗಳಲ್ಲಿ, ಒಟ್ಟು 5,107 ಪುರುಷರು ಮತ್ತು 211 ಮಹಿಳೆಯರು ಇದ್ದಾರೆ. ಕೃಷಿ ವಲಯದಲ್ಲಿ ತೊಡಗಿರುವ ಹೆಚ್ಚಿನ ಆತ್ಮಹತ್ಯೆಗಳು ಮಹಾರಾಷ್ಟ್ರದಲ್ಲಿ ಸಂಭವಿಸಿವೆ. ಅದರ ಪ್ರಮಾಣ ಶೇ.37.3 ಆಗಿದ್ದರೆ, ಕರ್ನಾಟಕದಲ್ಲಿ ಶೇ.19.9ರಷ್ಟು, ಆಂಧ್ರಪ್ರದೇಶದಲ್ಲಿ ಶೇ. 9.8, ಮಧ್ಯಪ್ರದೇಶದಲ್ಲಿ ಶೇ. 6.2 ಮತ್ತು ತಮಿಳುನಾಡಿನಲ್ಲಿ ಶೇ. 5.5ರಷ್ಟು ಮಂದಿ ಕೃಷಿವಲಯದವರು ಬದುಕು ಮುಗಿಸಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕೃಷಿ ಕಾರ್ಮಿಕರ ಒಟ್ಟು ಸಂಖ್ಯೆ 5,563ರಲ್ಲಿ 5,121 ಪುರುಷರು ಮತ್ತು 442 ಮಹಿಳೆಯರು ಸೇರಿದ್ದಾರೆ.

ಈ ಅಂಕಿಅಂಶಗಳ ಪ್ರಕಾರ ಕರ್ನಾಟಕ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂದಿದೆಯಾದರೂ, ಇದನ್ನು ರಾಜ್ಯ ಅಲ್ಲಗಳೆದಿದೆ. ಈ ಪ್ರಮಾಣದಲ್ಲಿ ಆತ್ಮಹತ್ಯೆಗಳು ಈ ಸಾಲಿನಲ್ಲಿ ಸಂಭವಿಸಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ.

ಇನ್ನು ಸಮಾಧಾನದ ಸಂಗತಿಯೆಂದರೆ ಕೆಲವು ರಾಜ್ಯಗಳಲ್ಲಿ ಕೃಷಿಕರ ಆತ್ಮಹತ್ಯೆ ಶೂನ್ಯ ಎಂದಿರುವುದು. ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೃಷಿಕರು ಮತ್ತು ಕೃಷಿ ವಲಯದ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದು ಗಮನೀಯ. ಎನ್‌ಸಿಆರ್‌ಬಿ ವರದಿ ಪ್ರಕಾರ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶ, ಉತ್ತರಾಖಂಡ, ಚಂಡೀಗಡ, ಲಕ್ಷದ್ವೀಪ ಮತ್ತು ಪುದುಚೇರಿಗಳಲ್ಲಿ ರೈತರು ಮತ್ತು ಕೃಷಿಕರು ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿಲ್ಲ.

ಇದೇ ವೇಳೆ, ಕಳೆದ 7 ವರ್ಷಗಳಲ್ಲಿ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಕೆ ಕಂಡಿವೆ. ಸರಕಾರದ ಅಂಕಿ ಅಂಶಗಳು ಇಂಥದೊಂದು ಸಮಾಧಾನಕರ ಸಂಗತಿಯನ್ನು ಕಾಣಿಸುತ್ತವೆ. 2015-16ರಲ್ಲಿ 1,062ರಷ್ಟಿದ್ದ ರೈತವಲಯದವರ ಆತ್ಮಹತ್ಯೆ ಪ್ರಮಾಣ 2016-17ರಲ್ಲಿ 932ಕ್ಕೆ ಇಳಿದಿದೆ. 2017-18ರಲ್ಲಿ 1052 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2018-19ರಲ್ಲಿ 868, 2019-2020ರಲ್ಲಿ 885, 2020-21ರಲ್ಲಿ 647 ಹಾಗೂ 2021-22ರಲ್ಲಿ 268 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಇಳಿಕೆ ಕಾಣಿಸುತ್ತಿರುವುದು ರೈತರು ಎದುರಿಸುತ್ತಿರುವ ಸಮಸ್ಯೆಗಳೂ ಕಡಿಮೆಯಾಗುತ್ತಿದೆ ಎಂಬುದರ ಸೂಚಕ ಎನ್ನುತ್ತದೆ ಸರಕಾರ. ಕೃಷಿ ಸಚಿವಾಲಯ ರೈತರಿಗೆ ಎರಡನೇ ಆದಾಯಕ್ಕೆ ಆಗ್ರಹಿಸುತ್ತಿದೆ. ಸರಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ ವಿದ್ಯಾರ್ಥಿವೇತನ ನೀಡುತ್ತಿದ್ದು, ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯಗಳಲ್ಲಿ ಶೇ.50ರಷ್ಟು ಕೋಟಾ ಏರಿಕೆ ಮಾಡುತ್ತಿದೆ ಎಂದೂ ಸರಕಾರ ಹೇಳುತ್ತದೆ. ಟ್ರ್ಯಾಕ್ಟರ್‌ಗಳಲ್ಲಿ ಬಳಕೆ ಮಾಡುವ ಇಂಧನಕ್ಕೆ ಸಬ್ಸಿಡಿ ಘೋಷಣೆ, ಬೆಳೆ ಸಮೀಕ್ಷೆಗೆ ತಂತ್ರಜ್ಞಾನ ಬಳಕೆ ಮೊದಲಾದ ಕ್ರಮಗಳ ಮೂಲಕ ರೈತರ ಜೀವನ ಮಟ್ಟವನ್ನು ಸುಧಾರಿಸಲು ಯತ್ನಿಸಲಾಗುತ್ತಿದೆ ಎಂಬುದು ಸರಕಾರದ ಮಾತು.

ಹಿಂದಿನ ವರ್ಷದ ಅಂಕಿಅಂಶಗಳನ್ನು ನೋಡಿಕೊಂಡರೂ, ನಿರಾಳತೆ ಮೂಡಿಸುವ ಸಂಗತಿಗಳಿವೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಕಳೆದ 25 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂಬುದರ ಮೇಲೆ ಕೃಷಿ ಇಲಾಖೆಯ ಅಂಕಿ-ಅಂಶಗಳು ಬೆಳಕು ಚೆಲ್ಲಿವೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಅತಿವೃಷ್ಟಿಯೂ ಅಲ್ಲದ, ತೀವ್ರ ಅನಾವೃಷ್ಟಿಯೂ ಅಲ್ಲದ ಹದವಾದ ಮಳೆಯಿಂದ ರೈತರ ಸಂಕಷ್ಟ ಕಡಿಮೆಯಾಗಿರುವುದು ಆತ್ಮಹತ್ಯೆ ಸಂಖ್ಯೆ ಇಳಿಕೆಗೆ ಕಾರಣ ಎಂಬ ವಿಶ್ಲೇಷಣೆಗಳಿವೆ. ಆದರೂ ಮಳೆ ಅನಿಶ್ಚಿತತೆ ಹೆಚ್ಚಿರುವ ಇವತ್ತಿನ ದಿನಗಳಲ್ಲಿ ಹೆಚ್ಚು ಹೆಚ್ಚು ರೈತನ ಪರವಾದ ಕಾಳಜಿಯೊಂದಿಗೆ ಸರಕಾರದ ನಡೆಗಳು ನಿರ್ಧಾರವಾಗಬೇಕಿದೆ.

ಆತ್ಮಹತ್ಯೆ ಪ್ರಮಾಣ ಕಡಿಮೆಯಾ ದರೂ ಕೆಲವೊಂದು ಸಮಸ್ಯೆಗಳು ಪರಿಹಾರ ಕಾಣದೆ ಮುಂದುವರಿದಿವೆ ಎಂಬುದನ್ನು ಮರೆಯುವಂತಿಲ್ಲ. ಉತ್ತಮ ಬೆಲೆ, ನೆರೆ ನಿರ್ವಹಣೆ, ಯೋಜನೆಗಳ ಪ್ರಾಮಾಣಿಕ ಅನುಷ್ಠಾನ ಮುಂತಾದ ದೀರ್ಘಕಾಲೀನ ಸಮಸ್ಯೆಗಳ ವಿಚಾರದಲ್ಲಿ ಇನ್ನೂ ಕೆಲಸಗಳು ಆಗಬೇಕಿವೆ ಎಂಬುದನ್ನು ಪರಿಣಿತರೆಲ್ಲರೂ ಹೇಳುತ್ತಾರೆ.

ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ ಎಂಬುದು ಸಂತಸದ ಸಂಗತಿಯಾದರೂ, ಇದು ನಿಂತಿಲ್ಲ ಎಂಬುದು ವಾಸ್ತವ. ಹೀಗಿರುವಲ್ಲಿ ರೈತರ ಆತ್ಮಹತ್ಯೆಯ ಕಾರಣಗಳನ್ನು ಹುಡುಕಿ, ಅವರ ಬೆಂಬಲಕ್ಕೆ ನಿಲ್ಲಬೇಕಾದದ್ದೂ ಅಷ್ಟೇ ಮುಖ್ಯ.

ರೈತರ ಸರಣಿ ಆತ್ಮಹತ್ಯೆಗಳು ಹೆಚ್ಚಿನ ಸಲ ಸಂಭವಿಸುವುದಕ್ಕೆ ಕಾರಣ ಸಾಲದ ಹೊರೆ ಮತ್ತು ಆರ್ಥಿಕ ಮುಗ್ಗಟ್ಟು. ಆದರೂ, ಕೆಲವು ಸಲ ಸರಣಿ ಆತ್ಮಹತ್ಯೆಗಳಿಗೆ ಸಾಲದ ಹೊರೆಯಷ್ಟೇ ಕಾರಣವಲ್ಲ ಎಂಬ ಮಹತ್ವದ ಸಂಗತಿಯನ್ನು ಕೂಡ ಎನ್‌ಸಿಆರ್‌ಬಿ ವರದಿ ಹೇಳಿರುವುದಿದೆ. ದೇಶದ ರೈತರ ಆತ್ಮಹತ್ಯೆಗಳ ಬಗ್ಗೆ ಸಮೀಕ್ಷೆ ನಡೆಸಿರುವ ಎನ್‌ಸಿಆರ್‌ಬಿ, ರೈತರ ಆತ್ಮಹತ್ಯೆಗೆ ಆರ್ಥಿಕತೆ ಮಾತ್ರವಲ್ಲದೆ ಇತರ ಕಾರಣಗಳೂ ಇರುವುದನ್ನು ತೋರಿಸಿದೆ. ರೈತರ ಆತ್ಮಹತ್ಯೆಗಳಲ್ಲಿ ಹೆಚ್ಚಿನವು ಸಾಲ ಮತ್ತು ಆರ್ಥಿಕ ನಷ್ಟದ ಕಾರಣದಿಂದ ನಡೆಯುವಾಗಲೇ ಹೆಚ್ಚು ಕಡಿಮೆ ಅಷ್ಟೇ ಪ್ರಮಾಣದ ಆತ್ಮಹತ್ಯೆಗಳು ಕೌಟುಂಬಿಕ ಕಾರಣಕ್ಕಾಗಿಯೂ ನಡೆಯುವುದುಂಟು ಎನ್ನುತ್ತದೆ ವರದಿ. ಬೆಳೆ ನಷ್ಟದಂಥವುಗಳ ಜೊತೆಗೇ ಆರೋಗ್ಯ ಸಮಸ್ಯೆ, ಮತ್ತೇನೋ ವ್ಯಸನ, ವ್ಯಾಜ್ಯಗಳೂ ಕಾರಣವಾಗಿರುತ್ತವೆ. ಇವಲ್ಲದೆ, ಸಾಗುವಳಿ ಭೂಮಿಯ ಪ್ರಮಾಣ ಕೂಡ ಇಲ್ಲಿ ಇನ್ನೊಂದು ಅಂಶವಾಗುತ್ತದೆ. ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರು ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಗಮನಕ್ಕೆ ಬಂದಿದೆ. ಇಂಥವರೆಲ್ಲ ಎರಡು ಹೆಕ್ಟೇರಿಗಿಂತ ಕಡಿಮೆ ಪ್ರಮಾಣದ ಭೂಮಿ ಹೊಂದಿದವರು ಎಂಬುದನ್ನು ವರದಿ ಗಮನಿಸಿದೆ. ಇನ್ನೊಂದು ವಿಚಾರವೆಂದರೆ, ಬಹಳ ಸಲ ಸಣ್ಣ ವಯೋಮಾನದ ರೈತರೇ ಆತ್ಮಹತ್ಯೆಗೆ ಒಳಗಾಗುವುದು.

ಇಂಥ ಹಲವು ಸೂಕ್ಷ್ಮಗಳನ್ನು ಗಮನಿಸುವುದು ಅಗತ್ಯ. ಸಾಲ ಕೊಟ್ಟ ಬ್ಯಾಂಕ್‌ಗಳು ವಸೂಲಿಗಾಗಿ ಅನುಸರಿಸುವ ಕ್ರಮ ಕೂಡ ಅಮಾನವೀಯ ಬಗೆಯದ್ದು. ಇವಂತೂ ಎಷ್ಟೋ ಸಲ ರೈತನನ್ನು ಧೃತಿಗೆಡಿಸಿಬಿಡುತ್ತವೆ. ಇಲ್ಲೊಂದು ಆಪ್ತವಾದ ನಡೆಯ ಅಗತ್ಯವಿದೆ. ರೈತನ ಕಷ್ಟಕಾಲದಲ್ಲಿ ಅವನ ಬಲಕ್ಕೆ ನಿಲ್ಲುವ ಮಾನವೀಯ ಮಾರ್ಗಗಳು ತೆರೆದುಕೊಳ್ಳುವುದು ಅಗತ್ಯವಿದೆ. ಕಾರ್ಪೊರೇಟ್ ವಲಯದ ಹಿತಾಸಕ್ತಿಗಳನ್ನು ಕಾಯುವುದಕ್ಕಿಂತ ಈ ದೇಶದ ಬಡ ರೈತನನ್ನು ಕಾಳಜಿಯಿಂದ, ಕಳಕಳಿಯಿಂದ ನೋಡುವ ನೀತಿಗಳ ಅಗತ್ಯ ಬಹಳವಿದೆ.

Similar News