ರಶ್ಯ–ಉಕ್ರೇನ್ ಸಂಘರ್ಷ ಶೀಘ್ರ ಅಂತ್ಯ: ಪುಟಿನ್

Update: 2022-12-23 05:50 GMT

ಮಾಸ್ಕೊ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರವರ ವಾಷಿಂಗ್ಟನ್ ಭೇಟಿಯ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅತ್ಯಾಧುನಿಕ ಪೇಟ್ರಿಯಾಟ್ ಕ್ಷಿಪಣಿ ಸೇರಿದಂತೆ ರೂ. 14700 ಕೋಟಿ ಸೇನಾ ನೆರವನ್ನು ಅವರಿಗೆ ಹಸ್ತಾಂತರಿಸಿದರು. ಇದರ ಬೆನ್ನಿಗೇ ಪ್ರತಿಕ್ರಿಯಿಸಿರುವ ರಶ್ಯ, ಈ ನೆರವಿನಿಂದ ಯುದ್ಧ ಬಿಕ್ಕಟ್ಟನ್ನು ಪರಿಹರಿಸಲಾಗಲಿ ಅಥವಾ ರಶ್ಯ ತನ್ನ ಗುರಿ ಸಾಧನೆ ಮಾಡುವುದನ್ನು ತಡೆಯಲಾಗಲಿ ಸಾಧ್ಯವಿಲ್ಲ ಎಂದು ಹೇಳಿದೆ.

ಈ ಕುರಿತು ಮಾಸ್ಕೊದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಶ್ಯ ಅಧ್ಯಕ್ಷ ವ್ಲಾದಿಮಿರ್‌‌ ಪುಟಿನ್, ಪೇಟ್ರಿಯಾಟ್ ಕ್ಷಿಪಣಿಗಳು ಸಾಕಷ್ಟು ಹಳತಾಗಿದ್ದು, ಅವನ್ನು ಎದುರಿಸಲು ಮಾರ್ಗೋಪಾಯ ಕಂಡುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಬಯಸಿದ್ದು, ಅದಕ್ಕಾಗಿ ಅನಿವಾರ್ಯವಾಗಿ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಲು ಬಯಸಿದ್ದೇವೆ ಎಂದೂ ಹೇಳಿದ್ದಾರೆ.

ಪೇಟ್ರಿಯಾಟ್ ಕ್ಷಿಪಣಿಗಳು ಅತ್ಯಂತ ಸುಧಾರಿತ ವಾಯು ಮಾರ್ಗದ ರಕ್ಷಣಾ ವ್ಯವಸ್ಥೆ ಎಂದು ತಜ್ಞರಿಂದ ಪರಿಗಣಿತವಾಗಿವೆ.

"ನಮ್ಮ ಗುರಿ ಯುದ್ಧ ಬಿಕ್ಕಟ್ಟಿನ ಬೆಂಕಿ ಚಕ್ರವನ್ನು ತಿರುಗಿಸುತ್ತಾ ಕೂರುವುದಲ್ಲ; ಬದಲಿಗೆ ನಾವು ಈ ಯುದ್ಧವನ್ನು ಕೊನೆಗೊಳಿಸಲು ಬಯಸಿದ್ದೇವೆ. ಎಷ್ಟು ಶೀಘ್ರ ಸಾಧ್ಯವೊ ಅಷ್ಟು ಶೀಘ್ರವಾಗಿ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತೇವೆ" ಎಂದು ಪುಟಿನ್ ತಿಳಿಸಿದ್ದಾರೆ.

ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶ್ವೇತ ಭವನದ ವಕ್ತಾರ ಜಾನ್ ಕಿರ್ಬಿ, "ಫೆಬ್ರವರಿ 24ರಂದು ಉಕ್ರೇನ್ ಮೇಲೆ ಶುರು ಮಾಡಿದ ಆಕ್ರಮಣವನ್ನು ಕೊನೆಗೊಳಿಸಲು ಮಾತುಕತೆಯಲ್ಲಿ ತೊಡಗುವ ಕುರಿತು ಪುಟಿನ್ ನಿರಾಸಕ್ತಿಯ ಸೂಚನೆ ನೀಡಿದ್ದಾರೆ" ಎಂದು ಟೀಕಿಸಿದ್ದಾರೆ.

"ಬಾಯುಪಚಾರದ ಮಾತನಾಡುತ್ತಿರುವ ಪುಟಿನ್, ವಾಸ್ತವವಾಗಿ ಉಕ್ರೇನ್ ಪ್ರಜೆಗಳ ಮೇಲಿನ ಹಿಂಸೆಯನ್ನು ಮುಂದುವರಿಸಲು ಹಾಗೂ ಯುದ್ಧವನ್ನು ತೀವ್ರಗೊಳಿಸಲು ಬಯಸಿದ್ದಾರೆ" ಎಂದು ಕಿರ್ಬಿ ಕಿಡಿ ಕಾರಿದ್ದಾರೆ.

ರಶ್ಯ ತಾನು ಮಾತುಕತೆಗೆ ಮುಕ್ತವಾಗಿದ್ದೇನೆ ಎಂದು ಪದೇ ಪದೇ ಹೇಳುತ್ತಿದ್ದರೂ ಉಕ್ರೇನ್ ಮತ್ತು ಮಿತ್ರ ದೇಶಗಳು ಅದರ ಹಿಂದೆ ಒಂದಷ್ಟು ಸಮಯ ಹೊಂದಿಸಿಕೊಳ್ಳುವ ಸಂಚಿರಬಹುದು ಎಂದು ಅನುಮಾನಿಸುತ್ತಿವೆ. ಯುದ್ಧರಂಗದಲ್ಲಿ ರಶ್ಯ ಸರಣಿ ಸೋಲು ಅನುಭವಿಸಿರುವುದು ಮತ್ತು ಕಳೆದ ಹತ್ತು ತಿಂಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಮೇಲುಗೈ ಸಾಧಿಸಿರುವುದರಿಂದ ರಶ್ಯ ಅದನ್ನು ತಪ್ಪಿಸಲು ಮಾತುಕತೆಯ ನಾಟಕವಾಡುತ್ತಿರಬಹುದು ಎಂದು ಉಕ್ರೇನ್ ಮತ್ತು ಮಿತ್ರ ದೇಶಗಳು ಶಂಕಿಸುತ್ತಿವೆ ಎಂದು indianexpress.com ವರದಿ ಮಾಡಿದೆ.

Similar News