ವಿಶ್ವಕಪ್ ಸಮಾರೋಪ ಸಮಾರಂಭದಲ್ಲಿ ಮೈದಾನಕ್ಕೆ ಅಕ್ರಮ ಪ್ರವೇಶ: ಖ್ಯಾತ ಚೆಫ್ ಸಾಲ್ಟ್ ಬೇ ವಿರುದ್ಧ ತನಿಖೆಗೆ ಮುಂದಾದ ಫಿಫಾ

Update: 2022-12-23 06:58 GMT

ಹೊಸದಿಲ್ಲಿ: ವಿಶ್ವಕಪ್ ಫೈನಲ್ ಪಂದ್ಯದ ಮುಕ್ತಾಯದ ನಂತರ ಅನಧಿಕೃತವಾಗಿ ಮೈದಾನಕ್ಕೆ ಪ್ರವೇಶಿಸಿ ಪ್ರತಿಷ್ಠಿತ ವಿಶ್ವಕಪ್ ಟ್ರೋಫಿಯನ್ನು ಹಿಡಿದುಕೊಂಡ ಖ್ಯಾತ ಚೆಫ್ ಸಾಲ್ಟ್ ಬೇ ವರ್ತನೆಯು ತೀವ್ರ ಟೀಕೆಗೆ ಗುರಿಯಾಗಿದ್ದು, ಈ ಕುರಿತು ತನಿಖೆ ನಡೆಸಲು ಫಿಫಾ ಮುಂದಾಗಿದೆ ಎಂದು ndtv.com ವರದಿ ಮಾಡಿದೆ.

ವಿಶ್ವಕಪ್ ವಿಜೇತ ತಂಡವಾದ ಅರ್ಜೆಂಟೀನಾ ತಂಡದ ಭಾಗವಲ್ಲದಿದ್ದರೂ ಪಂದ್ಯದ ನಂತರ ಮೈದಾನದೊಳಗೆ ಪ್ರವೇಶಿಸಿದ್ದ ಸಾಲ್ಟ್ ಬೇ, ಪ್ರತಿಷ್ಠಿತ ವಿಶ್ವಕಪ್ ಟ್ರೋಫಿಯನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಫಿಫಾ ನಿಯಮಾವಳಿಗಳ ಪ್ರಕಾರ, ಸಮಾರೋಪ ಸಮಾರಂಭದ ಸಂದರ್ಭದಲ್ಲಿ ವಿಜೇತ ತಂಡದ ಸದಸ್ಯರು ಹಾಗೂ ಆ ದೇಶದ ಮುಖ್ಯಸ್ಥರು ಮಾತ್ರ ಟ್ರೋಫಿಯನ್ನು ಮುಟ್ಟಲು ಅವಕಾಶವಿದೆ.

ಮೂಲತಃ ನುಸ್ರತ್ ಗೋಕ್ಸೆ ಎಂಬ ಹೆಸರಿನ ಈ ಪ್ರಖ್ಯಾತ ಚೆಫ್ ತಾಂತ್ರಿಕವಾಗಿ ಮೈದಾನಕ್ಕೆ ಪ್ರವೇಶಿಸಲು ಅವಕಾಶ ಇಲ್ಲದಿದ್ದರೂ, ಮೈದಾನದೊಳಗೆ ಅನಧಿಕೃತವಾಗಿ ಪ್ರವೇಶಿಸಿದ್ದರು. ಈ ಸಂದರ್ಭದ ಅನೇಕ ವಿಡಿಯೊಗಳು ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಅರ್ಜೆಂಟೀನಾ ತಂಡದ ಆಟಗಾರರೊಂದಿಗೆ ಸಾಲ್ಟ್ ಬೇ ಟ್ರೋಫಿ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಲ್ಟ್ ಬೇ ವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಫಿಫಾ, ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಫಿಫಾ ವಕ್ತಾರರು, "ಘಟನೆಯನ್ನು ಪರಾಮರ್ಶಿಸಿದ ನಂತರ, ಡಿಸೆಂಬರ್ 18ರಂದು ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಖಾಸಗಿ ವ್ಯಕ್ತಿಗಳು ಹೇಗೆ ಅಕ್ರಮ ಪ್ರವೇಶ ಪಡೆದರು ಎಂಬುದರ ಕುರಿತು ತನಿಖೆ ನಡೆಸಲು ನಿರ್ಧರಿಸಲಾಗಿದೆ. ತನಿಖೆಯ ನಂತರ ಸಮರ್ಪಕವಾದ ಆಂತರಿಕ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

ಈ ನಡುವೆ ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೊರೊಂದಿಗೆ ಹೊಂದಿರುವ ಸಂಪರ್ಕಗಳ ನೆರವಿನಿಂದ ಸಾಲ್ಟ್ ಬೇ ಮೈದಾನವನ್ನು ಪ್ರವೇಶಿಸಿ ಟ್ರೋಫಿ ಹಿಡಿದುಕೊಳ್ಳಲು ಸಾಧ್ಯವಾಗಿದೆ ಎಂಬ ವದಂತಿಗಳು ಹಬ್ಬಿವೆ. ಆದರೆ ಈ ವದಂತಿಗಳನ್ನು ಅಲ್ಲಗಳೆದಿರುವ Sky Sports, ಘಟನೆಯಲ್ಲಿ ಅವರಿಬ್ಬರ ಯಾವ ಪಾತ್ರವೂ ಇಲ್ಲ ಮತ್ತು ಫಿಫಾ ಹಾಗೂ ಸಾಲ್ಟ್ ಬೇ ನಡುವೆ ಯಾವುದೇ ವ್ಯಾವಹಾರಿಕ ಸಂಬಂಧಗಳೂ ಇಲ್ಲ ಎಂದು ವರದಿ ಮಾಡಿದೆ.

Similar News