ಫಿಫಾ ಫೈನಲ್ ಮರು ಪಂದ್ಯಾಟಕ್ಕೆ ಆಗ್ರಹಿಸಿ ಎರಡು ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸಿದ ʼಅತೃಪ್ತ ಅಭಿಮಾನಿಗಳುʼ

"ಅರ್ಜೆಂಟಿನಾ vs ಫ್ರಾನ್ಸ್‌ ಪಂದ್ಯದಲ್ಲಿ ಮೋಸ" : ಅಭಿಮಾನಿಗಳ ಆರೋಪ

Update: 2022-12-24 17:10 GMT

ಪ್ಯಾರಿಸ್: ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯಾಟದಿಂದ ಅತೃಪ್ತರಾಗಿರುವ ಸುಮಾರು 2 ಲಕ್ಷ ಅಭಿಮಾನಿಗಳು ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವಿನ 2022 ರ ವಿಶ್ವಕಪ್ ಫೈನಲ್ ಅನ್ನು ಮತ್ತೊಮ್ಮೆ ಆಡಿಸಲು‌ ಫಿಫಾಗೆ ಮನವಿ ಮಾಡಿ MesOpinions ಮೂಲಕ ಸಹಿ ಹಾಕಿದ್ದಾರೆ.

ನಿಗದಿತ 90 ನಿಮಿಷಗಳ ಪಂದ್ಯದಲ್ಲಿ 2-2ರಲ್ಲಿ ಸಮನಾದ ನಂತರ ಪಂದ್ಯ ಹೆಚ್ಚುವರಿ ಸಮಯದ ಮೊರೆ ಹೋಗಲಾಯಿತು. 108ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ಮತ್ತೊಂದು ಗೋಲು ಬಾರಿಸಿ ಅರ್ಜೆಂಟೀನಾವನ್ನು ಮುನ್ನಡೆಸಿದರು. ಮತ್ತೊಮ್ಮೆ ಅರ್ಜೆಂಟೀನಾ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತ್ತಾದರೂ, 117ನೇ ನಿಮಿಷದಲ್ಲಿ ಫ್ರಾನ್ಸ್​ ತಂಡ ಗೋಲು ಬಾರಿಸುವ ಮೂಲಕ ಪಂದ್ಯವನ್ನು 3-3ರಲ್ಲಿ ಸಮಬಲಗೊಳಿಸಿದರು. ಇದಾದ ಬಳಿಕ ಪಂದ್ಯ ಪೆನಾಲ್ಟಿ ಶೂಟೌಟ್ ನಡೆದಿತ್ತು.   ಅರ್ಜೆಂಟೀನಾ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಗೆದ್ದಿತ್ತು.

ಅರ್ಜೆಂಟೀನಾ ಪೆನಾಲ್ಟಿಯ ಮೂಲಕ ಪಡೆದ ಕಪ್‌ ಅನ್ನು ಅನ್ಯಾಯದ ಕಪ್ ಎಂದು ಅವರು ನಂಬಿರುವ ಅಭಿಮಾನಿಗಳು, ಫ್ರಾನ್ಸ್ ವಿರುದ್ಧ ಮರುಪಂದ್ಯವನ್ನು ಆಡುವಂತೆ ಅರ್ಜೆಂಟೀನಾಗೆ ಒತ್ತಾಯಿಸಿದ್ದಾರೆ.

ಅಂಪೈರ್‌ ಮಾರಾಟವಾಗಿದ್ದಾರೆ ಎಂದು ಆರೋಪಿಸಿರುವ ಫ್ರಾನ್ಸ್‌ ಅಭಿಮಾನಿಗಳು ಎರಡನೇ ಗೋಲ್‌ ಹೊಡೆಯಲು ಕಾರಣವಾದ ಪೆನಾಲ್ಟಿಯನ್ನು ಅನವಶ್ಯಕ ಮತ್ತು ಅನ್ಯಾಯ ಎಂದು ಹೇಳಿದ್ದಾರೆ. ಅಲ್ಲದೆ, ಎಂಬಪ್ಪೆಯ ಫೌಲ್‌ ಕೂಡಾ ನಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ.

Similar News