ಮುಂದಿನ ವರ್ಷದ ಮಾ.31ರೊಳಗೆ ಆಧಾರ್ ನೊಂದಿಗೆ ಜೋಡಣೆಗೊಳ್ಳದ ಪಾನ್ ನಿಷ್ಕ್ರಿಯ

Update: 2022-12-24 16:51 GMT

ಹೊಸದಿಲ್ಲಿ: ಮುಂದಿನ ವರ್ಷದ ಮಾರ್ಚ್ 31ರೊಳಗೆ ಆಧಾರ್ನೊಂದಿಗೆ ಜೋಡಣೆಗೊಳ್ಳದ ಪಾನ್ ನಿಷ್ಕ್ರಿಯಗೊಳ್ಳಲಿದೆ ಎಂದು ಆದಾಯ ತೆರಿಗೆ ಇಲಾಖೆಯು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

1961ರ ಆದಾಯ ತೆರಿಗೆ ಕಾಯ್ದೆಯಂತೆ ವಿನಾಯಿತಿ ವರ್ಗದಡಿ ಬರದ, ಪಾನ್ ಕಾರ್ಡ್ ಹೊಂದಿರುವ ಎಲ್ಲರೂ 2023, ಮಾ.31ಕ್ಕೆ ಮೊದಲು ಆಧಾರ್ ಜೊತೆಗೆ ತಮ್ಮ ಪಾನ್ ಜೋಡಣೆಗೊಳಿಸುವುದು ಕಡ್ಡಾಯವಾಗಿದೆ. ಜೋಡಣೆಗೊಳ್ಳದ ಪಾನ್ 2023, ಎ.1ರಿಂದ ನಿಷ್ಕ್ರಿಯಗೊಳ್ಳುತ್ತದೆ ಎಂದು ಇಲಾಖೆಯು ಹೇಳಿದೆ.

ಮೇ, 2017ರಲ್ಲಿ ಕೇಂದ್ರ ವಿತ್ತ ಸಚಿವಾಲಯವು ಹೊರಡಿಸಿದ್ದ ಅಧಿಸೂಚನೆಯಂತೆ ಅಸ್ಸಾಂ, ಜಮ್ಮು-ಕಾಶ್ಮೀರ ಮತ್ತು ಮೇಘಾಲಯಗಳ ನಿವಾಸಿಗಳು, ಆದಾಯ ತೆರಿಗೆ ಕಾಯ್ದೆಯಂತೆ ಅನಿವಾಸಿ ಭಾರತೀಯರು, ಹಿಂದಿನ ವರ್ಷದ ಯಾವುದೇ ಸಮಯದಲ್ಲಿ 80 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ಭಾರತದ ಪ್ರಜೆಯಲ್ಲದ ವ್ಯಕ್ತಿಗಳು ವಿನಾಯಿತಿ ವರ್ಗದಲ್ಲಿ ಸೇರಿದ್ದಾರೆ.

ಪಾನ್ ನಿಷ್ಕ್ರಿಯಗೊಂಡರೆ ವ್ಯಕ್ತಿಯು ಆದಾಯ ತೆರಿಗೆ ಕಾಯ್ದೆಯಡಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಮತ್ತು ಹಲವಾರು ತೊಂದರೆಗಳಿಗೆ ಸಿಲುಕಬೇಕಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಮಾ.30ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಿತ್ತು. ನಿಷ್ಕ್ರಿಯ ಪಾನ್ ಬಳಸಿ ಐಟಿ ರಿಟರ್ನ್ ಸಲ್ಲಿಸಲು ವ್ಯಕ್ತಿಗೆ ಸಾಧ್ಯವಾಗುವುದಿಲ್ಲ, ಬಾಕಿಯಿರುವ ರಿಟರ್ನ್ಗಳು ಸಂಸ್ಕರಿಸಲ್ಪಡುವುದಿಲ್ಲ, ನಿಷ್ಕ್ರಿಯ ಪಾನ್ಗೆ ತೆರಿಗೆ ಮರುಪಾವತಿ ಸಾಧ್ಯವಾಗುವುದಿಲ್ಲ ಮತ್ತು ದೋಷಯುಕ್ತ ರಿಟರ್ನ್ ಗಳ ಪ್ರಕರಣದಲ್ಲಿ ಬಾಕಿಯಿರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಮತ್ತು ಹೆಚ್ಚಿನ ದರದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.

ಅಲ್ಲದೆ ಎಲ್ಲ ರೀತಿಯ ಹಣಕಾಸು ವಹಿವಾಟುಗಳಲ್ಲಿ ಪಾನ್ ಪ್ರಮುಖ ಕೆವೈಸಿ ಮಾನದಂಡಗಳಲ್ಲಿ ಒಂದಾಗಿರುವುದರಿಂದ ತೆರಿಗೆದಾರರು ಬ್ಯಾಂಕುಗಳು ಮತ್ತು ಇತರ ಹಣಕಾಸು ಪೋರ್ಟಲ್ಗಳಂತಹ ವಿವಿಧ ವೇದಿಕೆಗಳಲ್ಲಿ ತೊಂದರೆಯನ್ನು ಎದುರಿಸಬೇಕಾಗಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

Similar News