ನಾಪತ್ತೆಯಾಗಿದ್ದ ಆರ್ ಟಿಐ ಕಾರ್ಯಕರ್ತನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ

Update: 2022-12-25 02:14 GMT

ರಾಯಪುರ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಾಹಿತಿ ಹಕ್ಕು ಹೋರಾಟಗಾರರ ಸುಟ್ಟ ಮೃತದೇಹದ ಅಸ್ಥಿಪಂಜರ ಛತ್ತೀಸ್‍ಗಢದ ಕಬೀರ್‍ಧಾಮ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಆರ್‍ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಆರೋಪಿಗಳು ಆರ್‍ಟಿಐ ಕಾರ್ಯಕರ್ತನ ಬೈಕ್ ಕೂಡಾ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳೀಯ ಪತ್ರಿಕೆಯಲ್ಲಿ ಪತ್ರಕರ್ತನಾಗಿದ್ದ ಆರ್‍ಟಿಐ ಕಾರ್ಯಕರ್ತ ವಿವೇಕ್ ಚೌಬೆ (32) ನವೆಂಬರ್ 12ರಂದು ಕವರ್ಧ ಪಟ್ಟಣದಲ್ಲಿದ್ದ ತಮ್ಮ ಮನೆಯಿಂದ ಹೊರಟವರು ಮರಳಲಿಲ್ಲ. ನವೆಂಬರ್ 16ರಂದು ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು ಎಂದು ಕಬೀರ್‍ಧಾಮ್ ಎಸ್ಪಿ ಲಾಳ್ ಉಮೇದ್ ಸಿಂಗ್ ಹೇಳಿದ್ದಾರೆ.

ಚೌಬೆ ಕೊನೆಗೆ ಕುಂದಪಾನಿ ಗ್ರಾಮದತ್ತ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಇವರ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನವನ್ನೂ ಘೋಷಿಸಲಾಗಿತ್ತು. ಈ ಪ್ರದೇಶ ಮಧ್ಯಪ್ರದೇಶ ಹಾಗೂ ಛತ್ತೀಸ್‍ಗಢ ಗಡಿಯ ನಕ್ಸಲ್‍ಪೀಡಿತ ಪ್ರದೇಶಕ್ಕೆ ಸನಿಹವಾಗಿತ್ತು.

ಈ ಸಂದರ್ಭದಲ್ಲಿ ಬೊಕ್ಕಾರಖರ್ ಗ್ರಾಮದ ಸರಪಂಚ ಕೂಡಾ ಚೌಬೆ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ಘೋಷಿಸಿದ್ದರು. ಇದು ಪೊಲೀಸರ ಸಂಶಯಕ್ಕೆ ಕಾರಣವಾಗಿತ್ತು. ಈಗ ಸರಪಂಚ ಕೂಡಾ ಆರೋಪಿಯಾಗಿದ್ದಾನೆ. ಆ ಬಳಿಕ ಲಭ್ಯವಾದ ಸುಳಿವಿನ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಸುಟ್ಟುಹೋದ ಶವ ಪತ್ತೆಯಾಗಿತ್ತು. ವಿಧಿವಿಜ್ಞಾನ ಪರೀಕ್ಷೆಯಿಂದ ಈ ಶವ ವಯಸ್ಕರದ್ದು ಎನ್ನುವುದು ಕಂಡುಬಂದಿತ್ತು. ವಿಚಾರಣೆ ವೇಳೆ ಸರಪಂಚ ಹಾಗೂ ಅವರ ಅನುಯಾಯಿಗಳು ತಪ್ಪೊಪ್ಪಿಕೊಂಡರು ಎಂದು ಪೊಲೀಸರು ವಿವರಿಸಿದ್ದಾರೆ.

Similar News