×
Ad

ಮಲ್ಪೆ ಬೀಚ್‌ನ ತೇಲುವ ಸೇತುವೆ ಪುನರಾರಂಭ

Update: 2022-12-25 21:09 IST

ಮಲ್ಪೆ: ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರದಲ್ಲಿ ಕರ್ನಾಟಕ ರಾಜ್ಯದಲ್ಲೇ ಪ್ರಥಮ ಎಂಬಂತೆ ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ ನಿರ್ಮಿಸಲಾಗಿದ್ದು, ಡಿ.25ರಂದು ಶಾಸಕ ಕೆ. ರಘುಪತಿ ಭಟ್ ಈ ತೇಲುಸೇತುವೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮಧ್ವರಾಜ್, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಮಲ್ಪೆ ಬೀಚ್ ನಿರ್ವಾಹಕರಾದ ಸುದೇಶ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಏಳು ತಿಂಗಳ ಹಿಂದೆ ಮಲ್ಪೆ ಬೀಚ್‌ನಲ್ಲಿ ಆರಂಭಗೊಂಡ ತೇಲುವ ಸೇತುವೆಯು ಮೂರೇ ದಿನದಲ್ಲಿ ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇದೀಗ ಈ ಸೇತುವೆಯನ್ನು ಇನ್ನಷ್ಟು ಹೆಚ್ಚಿನ ಸುರಕ್ಷತೆಯೊಂದಿಗೆ ಪುನಾರಂಭಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಈ ಫ್ಲೋಟಿಂಗ್ ಬ್ರಿಜ್‌ನ್ನು ಮಲ್ಪೆ ಬೀಚ್‌ನಲ್ಲಿ ಆರಂಭಿಸಲಾಗಿತ್ತು. ಇದಕ್ಕೆ ಪ್ರವಾಸಿಗರಿಂದ ಉತ್ತಮ ಸ್ಪಂದನೆಯೂ ದೊರೆಕಿತ್ತು. ಆದರೆ ಚಂಡಮಾರುತದ ಪರಿಣಾಮ ಸಮುದ್ರ ಪ್ರಕ್ಷುಬ್ಧಗೊಂಡು ಸೇತುವೆ ಕೊಚ್ಚಿಕೊಂಡು ಹೋಗಿ ಅಪಾರ ಹಾನಿ ಸಂಭವಿಸಿತ್ತು

ರಾಜ್ಯ ಮತ್ತು ಕೇರಳದ ತಜ್ಞರ ತಂಡ  ಸೇತುವೆಯ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ಪರೀಕ್ಷೆಗೆ ಒಳಪಡಿಸಿ ದೃಢೀಕರಿಸಿದೆ. ಚಂಡಮಾರುತ ದಂತಹ ಪ್ರತಿಕೂಲ ವಾತಾವರಣವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ತಜ್ಞರ ತಂಡ ಸ್ಥಿರತೆಯ ವರದಿಯನ್ನು ಸಲ್ಲಿಸಿದ ನಂತರ ಜಿಲ್ಲಾಡಳಿತ ಸೇತುವೆಗೆ ಅನುಮೋದನೆ ನೀಡಿದೆ.

ಈ ಸೇತುವೆ 120 ಮೀಟರ್ ಉದ್ದ, 3.5 ಮೀಟರ್ ಅಗಲವಾಗಿದ್ದು ಎರಡೂ ಇಕ್ಕೆಲದಲ್ಲಿ ಸುರಕ್ಷೆಗಾಗಿ ರ್ಯಾಲಿಂಗ್ ಸಿಸ್ಟಮ್ ಮಾಡಲಾಗಿದೆ. ಏಕಕಾಲಕ್ಕೆ 100ಕ್ಕೂ ಹೆಚ್ಚು ಮಂದಿ ಇದರಲ್ಲಿ ನಡೆಯಬಹುದಾಗಿದೆ. ಸುರಕ್ಷೆಗಾಗಿ 15ಮಂದಿ ಲೈಫ್ ಗಾರ್ಡ್, ಸೇತುವೆಯ ತುದಿಯಲ್ಲಿ ಒಂದು ಬೋಟನ್ನು ಇರಿಸಲಾಗಿದೆ. ಸೇತುವೆಯಲ್ಲಿ ನಡೆದಾಡುವ ಪ್ರತಿಯೊಬ್ಬರು ಕಡ್ಡಾಯವಾಗಿ ಲೈಪ್ ಜಾಕೆಟ್ ಧರಿಸಬೇಕು ಎಂದು  ಸುದೇಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

Similar News