ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಡಿ.27ರಂದು ದೇಶಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ

Update: 2022-12-25 17:16 GMT

ಹೊಸದಿಲ್ಲಿ, ಡಿ.25: ಅನೇಕ ದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕವು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಡಿ.27ರಂದು ದೇಶಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆಗಳನ್ನು ನಡೆಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿರ್ಧರಿಸಿದೆ.

ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಆಮ್ಲಜನಕ ಪೂರೈಕೆ ಮತ್ತು ಐಸಿಯು ಹಾಸಿಗೆಗಳ ಲಭ್ಯತೆಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ ಭೂಷಣ ಅವರು ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಕೋವಿಡ್ ನಿರ್ವಹಣೆಗಾಗಿ ಈ ಆಸ್ಪತ್ರೆಗಳಲ್ಲಿ ಕಾರ್ಯಾಚರಣೆ ಸನ್ನದ್ಧತೆಯನ್ನು ಖಚಿತಪಡಿಸಲು ಈ ಅಣಕು ಕಾರ್ಯಾಚರಣೆಯನ್ನು ನಡೆಸಲಾಗುವುದು. ಕಾರ್ಯಾಚರಣೆ ಸಂದರ್ಭದಲ್ಲಿ ಪ್ರತ್ಯೇಕ ವಾರ್ಡ್, ಆಮ್ಲಜನಕ ಬೆಂಬಲಿತ, ಐಸಿಯು ಮತ್ತು ವೆಂಟಿಲೇಟರ್ ಬೆಂಬಲಿತ ಹಾಸಿಗೆಗಳು ಸೇರಿದಂತೆ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುವುದು. ವೈದ್ಯರು, ದಾದಿಯರು, ಪ್ಯಾರಾಮೆಡಿಕ್ಗಳು, ಆಯುಷ್ ವೈದ್ಯರು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇತ್ಯಾದಿ ಸೇರಿದಂತೆ ಮಾನವ ಸಂಪನ್ಮೂಲದ ಗರಿಷ್ಠ ಲಭ್ಯತೆಯ ಮೇಲೂ ಗಮನವನ್ನು ಕೇಂದ್ರೀಕರಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ರೆಫರಲ್ ಸೇವೆಗಳಿಗೆ ಸಂಬಂಧಿಸಿದಂತೆ ಜೀವರಕ್ಷಕ ಉಪಕರಣಗಳನ್ನು ಹೊಂದಿರುವ ಆ್ಯಂಬುಲೆನ್ಸ್ಗಳು,ಇತರ ಆ್ಯಂಬುಲೆನ್ಸ್ಗಳು,ಕ್ರಿಯಾತ್ಮಕ ಆ್ಯಂಬುಲೆನ್ಸ್ ಕಾಲ್ ಸೆಂಟರ್ಗಳ ಲಭ್ಯತೆಯ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುವುದು. ತಪಾಸಣೆ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಮತ್ತು ಆರ್ಟಿ-ಪಿಸಿಆರ್ ಕಿಟ್ಗಳು, ಪರೀಕ್ಷಾ ಉಪಕರಣಗಳು ಇತ್ಯಾದಿಗಳು, ಲಾಜಿಸ್ಟಿಕ್ಸ್ ಮತ್ತು ಅಗತ್ಯ ಔಷಧಿಗಳು, ವೆಂಟಿಲೇಟರ್ಗಳು, ಬೈಲೆವೆಲ್ ಪಾಸಿಟಿವ್ ಏರ್ ಪ್ರೆಷರ್ (ಬಿಐಪಿಎಪಿ), ಎಸ್ಪಿಒ2 ವ್ಯವಸ್ಥೆಗಳು, ಪಿಪಿಇ ಕಿಟ್ಗಳು, ಎನ್-95 ಮಾಸ್ಕ್ಗಳ ಲಭ್ಯತೆಗಳ ಬಗ್ಗೆಯೂ ಹೆಚ್ಚಿನ ಗಮನವನ್ನು ವಹಿಸಲಾಗುವುದು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಿಕಟ ಸಮಾಲೋಚನೆಗಳನ್ನು ನಡೆಸಿ ಆಯಾ ಜಿಲ್ಲಾಧಿಕಾರಿಗಳು,ಜಿಲ್ಲಾ ದಂಡಾಧಿಕಾರಿಗಳ ಮಾರ್ಗದರ್ಶನದಡಿ ಅಣಕು ಕಾರ್ಯಾಚರಣೆಗಳನ್ನು ನಡೆಸಬಹುದಾಗಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

Similar News