ವಿದ್ಯಾರ್ಥಿಗಳನ್ನು ಬೇಗನೇ ಎಚ್ಚರಗೊಳಿಸಲು ನೆರವಾಗುವಂತೆ ದೇವಸ್ಥಾನ, ಮಸೀದಿಗಳ ಸಹಾಯ ಕೇಳಿದ ಹರ್ಯಾಣ ಸರ್ಕಾರ

Update: 2022-12-25 18:23 GMT

ಚಂಡೀಗಢ: ಹರಿಯಾಣ ಸರ್ಕಾರವು 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳನ್ನು ತಮ್ಮ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ಮಾಡಲು ದೇವಸ್ಥಾನಗಳು, ಮಸೀದಿಗಳು ಮತ್ತು ಗುರುದ್ವಾರಗಳ ಮೊರೆ ಹೋಗಿದೆ.  ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವವರ ಶೇಕಡಾವಾರು ಪ್ರಮಾಣವನ್ನು ಸುಧಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

      ಮಕ್ಕಳ  ಅಧ್ಯಯನಕ್ಕಾಗಿ ಬೆಳಗ್ಗಿನ ಜಾವವನ್ನು ಬಳಸಿಕೊಳ್ಳಲು ಪೋಷಕರನ್ನು ಕೇಳುವಂತೆ ರಾಜ್ಯ ಶಿಕ್ಷಣ ಇಲಾಖೆಯು ಸಂಬಂಧಿಸಿದ ಶಾಲಾ ಅಧಿಕಾರಿಗಳನ್ನು ಕೇಳಿದೆ.

           ಎಲ್ಲಾ ಸರ್ಕಾರಿ ಶಾಲೆಗಳ ಪ್ರಾಂಶುಪಾಲರಿಗೆ ನೀಡಿದ ಸೂಚನೆಯಲ್ಲಿ, ವಿದ್ಯಾರ್ಥಿಗಳು ಸ್ವಯಂ-ಅಧ್ಯಯನಕ್ಕಾಗಿ ಕೆಲವು ಹೆಚ್ಚುವರಿ ಸಮಯವನ್ನು ಪಡೆಯಲು ಪೋಷಕರು ಮತ್ತು ಶಿಕ್ಷಕರು ಜಂಟಿ ಯೋಜನೆಯನ್ನು ಮಾಡಬೇಕೆಂದು ಇಲಾಖೆ ಒತ್ತಿಹೇಳಿದೆ.

            “ಇದಕ್ಕಾಗಿ, ಬೆಳಗಿನ ಸಮಯವು ಹೆಚ್ಚು ಸೂಕ್ತವಾಗಿದೆ. ಆ ಸಮಯದಲ್ಲಿ ಮೈಂಡ್ ಫ್ರೆಶ್ ಆಗಿರುತ್ತದೆ ಮತ್ತು ವಾಹನಗಳ ಸದ್ದು ಇರುವುದಿಲ್ಲ. ಇದಕ್ಕಾಗಿ, ಪ್ರತಿ ತರಗತಿಯ ಶಿಕ್ಷಕರು ತಮ್ಮ ಮಕ್ಕಳನ್ನು ಬೆಳಿಗ್ಗೆ 4:30 ಕ್ಕೆ ಎಬ್ಬಿಸಿ 5:15 ಕ್ಕೆ ಅಧ್ಯಯನಕ್ಕೆ ಕುಳಿತುಕೊಳ್ಳುವಂತೆ ಪೋಷಕರಲ್ಲಿ ವಿನಂತಿಸಬೇಕು.” ಎಂದು ತಿಳಿಸಿದೆ.

         ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ಓದುತ್ತಿದ್ದಾರೋ ಇಲ್ಲವೋ ಎಂಬುದನ್ನೂ ಶಿಕ್ಷಕರು ವಾಟ್ಸಾಪ್ ಗ್ರೂಪ್ ಮೂಲಕ ವಿಚಾರಿಸುತ್ತಾರೆ. ಪೋಷಕರು ಸಹಕರಿಸದಿದ್ದರೆ ಶಾಲಾ ಆಡಳಿತ ಸಮಿತಿಯ ಗಮನಕ್ಕೆ ತರಬೇಕು ಎಂದು ಹೇಳಲಾಗಿದೆ.

ತಮ್ಮ ಗ್ರಾಮಗಳಲ್ಲಿ ಮುಂಜಾನೆ ಸಮಯದಲ್ಲಿ ಅಧ್ಯಯನದ ವಾತಾವರಣ ಇರುವಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆಯು ಪಂಚಾಯತ್ ಸದಸ್ಯರಿಗೆ ತಿಳಿಸಿದೆ.

             “ದೇವಾಲಯಗಳು, ಮಸೀದಿಗಳು ಮತ್ತು ಗುರುದ್ವಾರಗಳನ್ನು ಮುಂಜಾನೆ (ಧ್ವನಿವರ್ಧಕಗಳ ಮೂಲಕ) ಪ್ರಕಟಣೆಗಳಿಗಾಗಿ ಸಂಪರ್ಕಿಸಬೇಕು ಇದರಿಂದ ವಿದ್ಯಾರ್ಥಿಗಳು ಎದ್ದು ಅಧ್ಯಯನವನ್ನು ಪ್ರಾರಂಭಿಸುತ್ತಾರೆ. ಇದರೊಂದಿಗೆ, ಪ್ರತಿ ವಿದ್ಯಾರ್ಥಿಗೆ ಹೆಚ್ಚುವರಿ ಎರಡರಿಂದ ಮೂರು ಗಂಟೆಗಳ (ಅಧ್ಯಯನಕ್ಕಾಗಿ) ಸಿಗುವ ನಿರೀಕ್ಷೆಯಿದೆ” ಎಂದು ನಿರ್ದೇಶಕ (ಮಾಧ್ಯಮಿಕ ಶಿಕ್ಷಣ) ಅನ್ಶಜ್ ಸಿಂಗ್ ಅವರು ಎಲ್ಲಾ ಸರ್ಕಾರಿ ಶಾಲಾ ಮುಖ್ಯಸ್ಥರು ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಪತ್ರದಲ್ಲಿ ತಿಳಿಸಿದ್ದಾರೆ.

             ಪರೀಕ್ಷೆಗೆ ತಯಾರಿ ನಡೆಸಲು ಸೂಕ್ತ ವಾತಾವರಣ ಕಲ್ಪಿಸುವುದು ಇಡೀ ಸಮಾಜದ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಮಕ್ಕಳ ಶಿಕ್ಷಣದಲ್ಲಿ ಬೆಂಬಲ ನೀಡುವ ಸಮಾಜಗಳು ಮಾತ್ರ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುತ್ತವೆ ಎಂದು ಅದು ಹೇಳಿದೆ.

              

Similar News