ಮಹಿಳೆಯರಿಗೆ ಬೆಂಬಲ ಸೂಚಿಸಿ ತರಗತಿ ಬಹಿಷ್ಕರಿಸಿದ ಅಫ್ಘಾನ್ ವಿದ್ಯಾರ್ಥಿಗಳು

Update: 2022-12-25 17:48 GMT

ಕಾಬೂಲ್, ಡಿ.25: ಶೈಕ್ಷಣಿಕ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಅವಕಾಶ ನಿರಾಕರಿಸಿದ ತಾಲಿಬಾನ್ ಕ್ರಮವನ್ನು ವಿರೋಧಿಸಿ ಹಲವು ಪುರುಷ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿರುವುದಾಗಿ ವರದಿಯಾಗಿದೆ.

ಇದಕ್ಕೂ ಮುನ್ನ ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ನಿರಾಕರಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಅಫ್ಘಾನ್‌ನ ಶಿಕ್ಷಣ ಸಚಿವ ನಿದಾ ಮುಹಮ್ಮದ್ ನದೀಮ್ ‘ಸರಿಯಾದ ಹಿಜಾಬ್ ಧರಿಸುವಂತೆ ಹುಡುಗಿಯರಿಗೆ ಹೇಳಿದ್ದೆವು. ಆದರೆ ಅವರು ಮದುವೆ ಸಮಾರಂಭಕ್ಕೆ ಹೋಗುವಂತೆ ಬಟ್ಟೆ ಧರಿಸುತ್ತಾರೆ. ಹುಡುಗಿಯರು ಕಲಿಯುವುದು ಕೃಷಿ ಮತ್ತು ಇಂಜಿನಿಯರಿಂಗ್ ಪದವಿಯನ್ನು. ಅದು ಅಫ್ಘಾನ್‌ನ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ.ಹುಡುಗಿಯರು ಕಲಿಯಬೇಕು, ಆದರೆ ಇಸ್ಲಾಮ್ ಮತ್ತು ಅಫ್ಘಾನ್‌ನ ಗೌರವಕ್ಕೆ ಕುಂದು ತರುವ ರೀತಿಯಲ್ಲಿ ಅಲ್ಲ. ವಿಶ್ವವಿದ್ಯಾಲಯದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಇರುವುದನ್ನು ತಡೆಯುವ ಅಗತ್ಯವಿದೆ’ ಎಂದು ಹೇಳಿದ್ದಾರೆ.

 ಈ ಮಧ್ಯೆ, ವಿದ್ಯಾರ್ಥಿಗಳ ಪ್ರತಿಭಟನೆಯನ್ನು ತಡೆಯಲು ಸಶಸ್ತ್ರಧಾರಿ ಯೋಧರನ್ನು ತಾಲಿಬಾನ್ ಆಡಳಿತ ಉನ್ನತ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ನಿಯೋಜಿಸಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ದೇಶದಾದ್ಯಂತದ ವಿವಿಗಳಲ್ಲಿನ ಸುಮಾರು 60 ಪ್ರೊಫೆಸರ್‌ಗಳು ತಾಲಿಬಾನ್ ಆದೇಶದ ಬಳಿಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ‘ದಿ ಇಂಡಿಪೆಂಡೆಂಟ್’ ವರದಿ ಮಾಡಿದೆ.

ಅಫ್ಘಾನ್‌ನಲ್ಲಿ ವಿದೇಶಿ ನೆರವು ಸಂಸ್ಥೆಗಳಿಂದ ಕೆಲಸ ಸ್ಥಗಿತ:

ಮಹಿಳೆಯರು ಅಂತರಾಷ್ಟ್ರೀಯ ಮತ್ತು ಸ್ಥಳೀಯ ಸರಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವುನ್ನು ನಿಷೇಧಿಸಿದ ತಾಲಿಬಾನ್ ಕ್ರಮವನ್ನು ವಿರೋಧಿಸಿ 3 ವಿದೇಶಿ ನೆರವು ಸಂಸ್ಥೆಗಳು ಅಫ್ಘಾನ್‌ನಲ್ಲಿನ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳಾ ಸಿಬಂದಿಯಿಲ್ಲದೆ ನೆರವಿನ ತುರ್ತು ಅಗತ್ಯವಿರುವ ಮಕ್ಕಳು, ಮಹಿಳೆಯರು ಹಾಗೂ ಪುರುಷರನ್ನು ತಲುಪಲು ಸಾಧ್ಯವಿಲ್ಲ ಎಂದು ಹೇಳಿರುವ ‘ಸೇವ್ ದಿ ಚಿಲ್ಡ್ರನ್, ನಾರ್ವೆಜಿಯನ್ ರೆಫ್ಯುಜಿ ಕೌನ್ಸಿಲ್, ಹಾಗೂ ‘ಕೇರ್’ ಸಂಘಟನೆಗಳು ಅಫ್ಘಾನ್‌ನಲ್ಲಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

Similar News