13 ರಾಜ್ಯಗಳಲ್ಲಿ ಪಯಣಿಸಿ ಒಡಿಶಾಕ್ಕೆ ವಾಪಸಾದ ಹಾಕಿ ವಿಶ್ವಕಪ್ ಟ್ರೋಫಿ

Update: 2022-12-25 18:27 GMT

ಭುವನೇಶ್ವರ, ಡಿ.25: ಸುಮಾರು 13 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಾದ್ಯಂತ ಪ್ರಯಾಣಿಸಿದ ಬಳಿಕ ಪುರುಷರ ಹಾಕಿ ವಿಶ್ವಕಪ್ ಟ್ರೋಫಿಯು ರವಿವಾರ ಒಡಿಶಾಕ್ಕೆ ವಾಪಸಾಗಿದೆ. ಈ ರಾಜ್ಯದಲ್ಲಿ ಮುಂದಿನ ತಿಂಗಳು ವಿಶ್ವಕಪ್ ಟೂರ್ನಿ ನಡೆಯಲಿದೆ.

ಬಿಜು ಪಟ್ನಾಯಕ್ ಇಂಟರ್ನ್ಯಾಶನಲ್ ಏರ್ಪೋರ್ಟ್ನಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು  ಮಾಡಲಾಗಿದ್ದು, ಬೆಳಗ್ಗೆ 11:30ರ ಸುಮಾರಿಗೆ ಅಧಿಕಾರಿಗಳು ಹಾಕಿ ವಿಶ್ವಕಪ್ನೊಂದಿಗೆ ಆಗಮಿಸಿದರು. ಆಗ ವಿಮಾನ ನಿಲ್ದಾಣದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದ್ದು, ಸಾಂಪ್ರದಾಯಿಕ ಸೀರೆ ಧರಿಸಿದ್ದ ಮಹಿಳೆಯರು ಹಾಗೂ ಮಕ್ಕಳು ಸಂಗೀತ ವಾದ್ಯಕ್ಕೆ ತಕ್ಕಂತೆ ನೃತ್ಯ ಮಾಡಿದರು. 

ಜನರು ಏರ್ಪೋರ್ಟ್ ಹೊರಗಿನ ರಸ್ತೆಗಳ ಬದಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಏರ್ಪೋರ್ಟ್ನಿಂದ ಟ್ರೋಫಿಯನ್ನು ಹೊರಗೆ ತಂದ ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕಿ ಅದನ್ನು ರಾಜ್ಯ ಕ್ರೀಡಾ ಸಚಿವ ತುಷಾರ್ಕಾಂತಿ ಬೆಹೆರಾರಿಗೆ ಹಸ್ತಾಂತರಿಸಿದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯದ ಜನತೆಯು ಟ್ರೋಫಿಯನ್ನು ಅದ್ದೂರಿಯಾಗಿ ಸ್ವಾಗತಿಸಬೇಕೆಂದು ಟ್ವಿಟರ್ನ ಮೂಲಕ ವಿನಂತಿಸಿದ್ದರು.

‘‘ಇದು ನಿಜವಾಗಿಯೂ ಒಡಿಶಾಕ್ಕೆ ಹೆಮ್ಮೆಯ ಕ್ಷಣ. ನಾವು ಸತತ ಎರಡನೇ ಬಾರಿ ಪುರುಷರ ಹಾಕಿ ವಿಶ್ವಕಪ್ ಆಯೋಜಿಸುತ್ತಿದ್ದೇವೆ. ಒಡಿಶಾದ ಪ್ರತೀ ಜಿಲ್ಲೆಗಳು ಸೇರಿದಂತೆ ರಾಜ್ಯ ವ್ಯಾಪಿ ಟ್ರೋಫಿ ತೆಗೆದುಕೊಂಡು ಹೋಗಲು ಯೋಜಿಸಲಾಗಿದ್ದು, ಎಲ್ಲರೂ ಇದರೊಂದಿಗೆ ಕೈಜೋಡಿಸಬೇಕು’’ ಎಂದು ಪಟ್ನಾಯಕ್ ಟ್ವೀಟಿಸಿದ್ದಾರೆ.

ಒಡಿಶಾ 2018ರ ಬಳಿಕ ಸತತ ಎರಡನೇ ಬಾರಿ ಪ್ರತಿಷ್ಠಿತ ಕ್ರೀಡಾ ಪಂದ್ಯಾವಳಿಯ ಆತಿಥ್ಯವಹಿಸಿಕೊಂಡಿದೆ. ಹಾಕಿ ಪಂದ್ಯಗಳು  ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣ ಹಾಗೂ ರೂರ್ಕೆಲಾದ ಬಿರ್ಸಾ ಮುಂಡಾ ಇಂಟರ್ನ್ಯಾಶನಲ್ ಹಾಕಿ ಸ್ಟೇಡಿಯಮ್ಗಳಲ್ಲಿ ಜನವರಿ 13ರಿಂದ 29ರ ತನಕ ನಡೆಯಲಿದೆ.

Similar News