ಶಾಸಕರ ಖರೀದಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ಹೈಕೋರ್ಟ್: ಕೆಸಿಆರ್ ಗೆ ಭಾರೀ ಹಿನ್ನಡೆ
ಹೈದರಾಬಾದ್, ಡಿ. 26: ಶಾಸಕರ ಖರೀದಿ ಪ್ರಕರಣವನ್ನು ಉಚ್ಚ ನ್ಯಾಯಾಲಯ ಸೋಮವಾರ ಸಿಬಿಐ(CBI)ಗೆ ವರ್ಗಾಯಿಸಿದೆ. ಇದರೊಂದಿಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್(K. Chandrasekhar Rao) ಹಾಗೂ ಅವರ ಪಕ್ಷ ಭಾರತ್ ರಾಷ್ಟ್ರ ಸಮಿತಿ (BRS)ಗೆ ತೀವ್ರ ಹಿನ್ನಡೆ ಉಂಟಾಗಿದೆ. ಇದಲ್ಲದೆ, ಉಚ್ಚ ನ್ಯಾಯಾಲಯ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT)ವನ್ನು ವಿಸರ್ಜಿಸಿದೆ.
ಆಡಳಿತಾರೂಢ ಬಿಆರ್ಎಸ್ನ ಹಲವು ಶಾಸಕರಿಗೆ ಪಕ್ಷ ತ್ಯಜಿಸಿ ಬಿಜೆಪಿ ಸೇರಲು ಆಮಿಷ ಒಡ್ಡಲಾಗಿತ್ತು ಎಂದು ತೆಲಂಗಾಣ ಸರಕಾರ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಉಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಬಿಆರ್ಎಸ್ ಸಾಮಾಜಿಕ ಮಾಧ್ಯಮದ ಸಂಚಾಲಕ ಕೃಶಾಂಕ್, ಉಚ್ಚ ನ್ಯಾಯಾಲಯದ ಆದೇಶ ‘ಅಡಗಿಕೊಂಡ ಇಲಿ’ಗೆ ಸಮಾಧಾನ ನೀಡಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಆದರೆ, ಅವರು ಯಾವುದೇ ವಿವರ ನೀಡಿಲ್ಲ. ಪಾರದರ್ಶಕ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಉಚ್ಚ ನ್ಯಾಯಾಲಯಕ್ಕೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಕಳೆದ ಅಕ್ಟೋಬರ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ತೆಲಂಗಾಣದ ಮೊಯಿನಾಬಾದ್ ನಲ್ಲಿರುವ ತೋಟದ ಮನೆಯ ಮೇಲೆ ಸೈಬರಾಬಾದ್ ಪೊಲೀಸರು ದಾಳಿ ನಡೆಸಿದ್ದರು. ತಲಾ 100 ಕೋ.ರೂ.ಗೆ ಶಾಸಕರನ್ನು ಖರೀದಿಸುವ ಮೂಲಕ ಬಿಆರ್ಎಸ್ ಸರಕಾರವನ್ನು ಉರುಳಿಸಲು ಅಲ್ಲಿ ಪಿತೂರಿ ನಡೆಯುತ್ತಿತ್ತು ಎಂದು ಪ್ರತಿಪಾದಿಸಲಾಗಿತ್ತು. ನಾಲ್ವರು ಬಿಆರ್ಎಸ್ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು.
ಭಾರತೀಯ ದಂಡ ಸಂಹಿತೆಯ ಅಡಿಯ ಕ್ರಿಮಿನಲ್ ಪಿತೂರಿ ಹಾಗೂ ಇತರ ಸೆಕ್ಷನ್ಗಳ ಅಡಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 8ರ ಅಡಿ ಎಫ್ಐಆರ್ ದಾಖಲಿಸಲಾಗಿತ್ತು.