ಭಾರತ್ ಜೋಡೊ ಯಾತ್ರೆ: ಬಿಜೆಪಿಯ ಸುಳ್ಳುಗಳನ್ನು ಬಯಲಿಗೆಳೆದ ಕಾಂಗ್ರೆಸ್ ನಿಂದ ಕ್ಷಮೆಯಾಚನೆಗೆ ಆಗ್ರಹ

Update: 2022-12-27 15:44 GMT

ಹೊಸದಿಲ್ಲಿ,ಡಿ.27: ಭಾರತ ಜೋಡೊ ಯಾತ್ರೆಗೆ ಎಂಟು ದಿನಗಳ ವಿರಾಮದ ನಡುವೆಯೇ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ(Rahul Gandhi)ಯವರ ವಿದೇಶ ಪ್ರಯಾಣ ಕುರಿತು ಸುಳ್ಳುಗಳನ್ನು ಮತ್ತು ತಪ್ಪುಮಾಹಿತಿಗಳನ್ನು ಹರಡುತ್ತಿರುವುದಕ್ಕಾಗಿ ಬಿಜೆಪಿಯು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ.

ಸೋಮವಾರ ಕಾಂಗ್ರೆಸ್‌ನ ಮಾಧ್ಯಮ ಘಟಕವು ರಾಹುಲ್ ತನ್ನ ತಂದೆ ರಾಜೀವ್ ಗಾಂಧಿ(Rajiv Gandhi) ಸೇರಿದಂತೆ ಮಾಜಿ ಪ್ರಧಾನಿಗಳ ಸ್ಮಾರಕ ಸ್ಥಳಗಳಲ್ಲಿ ಗೌರವಾರ್ಪಣೆ ಮಾಡುತ್ತಿರುವ ಚಿತ್ರಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿತ್ತು. ಬಿಜೆಪಿಯನ್ನು ವ್ಯಂಗ್ಯವಾಡಿದ ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನಾತೆ(Supriya Shrinate) ಅವರು,ಕ್ರಿಸ್ ಮಸ್ ರಜೆಯಲ್ಲಿ ರಾಹುಲ್ ವಿದೇಶಕ್ಕೆ ಪ್ರಯಾಣಿಸಲಿದ್ದಾರೆ ಎಂದು ಬಿಜೆಪಿಯ ಸಚಿವರೋರ್ವರು ಹೇಳಿದ್ದರು. ಆದರೆ ಸಚಿವರು ತೀವ್ರ ಚಳಿಯಲ್ಲಿ ಬ್ಲಾಂಕೆಟ್ ಹೊದ್ದುಕೊಂಡು ದೇಶವನ್ನು ಒಡೆಯುವ ಕೆಲಸದಲ್ಲಿ ವ್ಯಸ್ತರಾಗಿದ್ದರೆ ರಾಹುಲ್ ಅವರು ಮಹಾತ್ಮಾ ಗಾಂಧಿ,ಜವಾಹರಲಾಲ್ ನೆಹರು ಮತ್ತು ಎಲ್ಲ ಮಾಜಿ ಪ್ರಧಾನಿಗಳ ಸ್ಮಾರಕಗಳಲ್ಲಿ ಗೌರವಗಳನ್ನು ಸಲ್ಲಿಸುತ್ತಿದ್ದರು ಎಂದು ಹೇಳಿದರು.

ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಟ್ವೀಟ್ ನ್ನು ಪ್ರಸ್ತಾಪಿಸಿದ್ದರು. ‘ರಜೆಗಾಗಿ ತಮ್ಮ ಯಾತ್ರೆಗೆ ವಿರಾಮ ನೀಡುವ ಮತ್ತು ಒಂದು ದಿನವೂ ಅಧಿವೇಶನಕ್ಕೆ ಹಾಜರಾಗದ ಜನರು ಸಂಸತ್ತಿನ ಕಾರ್ಯ ನಿರ್ವಹಣೆಯ ಬಗ್ಗೆ ಮಾತನಾಡುತ್ತಿರುವುದು ಅಚ್ಚರಿಯ ವಿಷಯವಾಗಿದೆ ’ ಎಂದು ಜೋಶಿ ಟ್ವೀಟಿಸಿದ್ದರು.

ಸುಳ್ಳುಗಳಿಗಾಗಿ ಬಿಜೆಪಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ ಶ್ರೀನಾತೆ,ಸಚಿವರ ಹೇಳಿಕೆಗಳು ಸುಳ್ಳು ಎಂದು ಸಾಬೀತಾದರೆ ಕ್ಷಮೆ ಯಾಚಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಈಗಾಗಲೇ ಅವರಿಗೆ ತಿಳಿಸಿದ್ದಾರೆ. ಇಂದು ಮತ್ತೊಮ್ಮೆ ಸುಳ್ಳು ಹೇಳುವಾಗ ಅವರು ಸಿಕ್ಕಿಬಿದ್ದಿದ್ದಾರೆ. ಮಾಫಿವೀರರ ಸೇನೆಯು ಕ್ಷಮೆಯನ್ನು ಯಾಚಿಸುವುದೇ? ಕ್ಷಮೆ ಯಾಚಿಸುವುದು ಅವರ ಹಳೆಯ ಅಭ್ಯಾಸವಾಗಿದೆ,ಹೀಗಾಗಿ ಅದು ಸಮಸ್ಯೆಯಾಗಬಾರದು ಎಂದು ಕುಟುಕಿದರು.

ಭಾರತ ಜೋಡೊ ಯಾತ್ರೆಯ ಕುರಿತು ಬಿಜೆಪಿಯು ಹರಡಿರುವ ಸುಳ್ಳುಗಳನ್ನು ತಿರಸ್ಕರಿಸಿದ ಶ್ರೀನಾತೆ,ಐಟಿ ಕೋಶ ಮತ್ತು ಬಿಜೆಪಿ ಸಚಿವರು ರಾಹುಲ್ ಕುರಿತು ತಪ್ಪು ಮಾಹಿತಿಗಳನ್ನು ಹರಡುವ ಕೆಲಸವನ್ನು ವಹಿಸಿಕೊಂಡಿದ್ದಾರೆ ಎಂದರು.

ಯಾತ್ರೆಯಲ್ಲಿ ರಾಹುಲ್ ಬಳಸುತ್ತಿರುವ ಕಂಟೇನರ್ ಪಂಚತಾರಾ ಹೋಟೆಲ್ ನಂತಿದೆ ಎನ್ನುವುದು ಮೊದಲ ಸುಳ್ಳಾಗಿದೆ. ಟ್ರಕ್ ಗಳ ಮೇಲೆ ನಿರ್ಮಿಸಲಾಗಿರುವ ಈ ಕಂಟೇನರ್ ಗಳು ಅಂತಹ ಯಾವುದೇ ಸೌಲಭ್ಯಗಳನ್ನು ಹೊಂದಿಲ್ಲ. ಬಿಜೆಪಿ ನಾಯಕರು ಬಂದು ಈ ಕಂಟೇನರ್ ಗಳಲ್ಲಿ ನಾಲ್ಕು ತಿಂಗಳು ಉಳಿದುಕೊಳ್ಳಬೇಕು ಎಂದು ಶ್ರೀನಾತೆ ಹೇಳಿದರು.

ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿಲ್ಲ ಎಂದು ಈ ಹಿಂದೆ ಕೇಂದ್ರ ಸಚಿವೆ ಸ್ಮತಿ ಇರಾನಿ ಆರೋಪಿಸಿದ್ದರು. ಆದರೆ ಕಾಂಗ್ರೆಸ್ ರಾಹುಲ್ ವಿವೇಕಾನಂದರ ಪ್ರತಿಮೆಯ ಎದುರು ತಲೆ ಬಾಗಿ ನಮಿಸುತ್ತಿರುವ ವೀಡಿಯೋಗಳನ್ನು ಶೇರ್ ಮಾಡಿಕೊಂಡಿತ್ತು.

ದಕ್ಷಿಣ ಭಾರತದಲ್ಲಿ ರಾಹುಲ್ ಚರ್ಚ್ ಗಳಿಗೆ ಮಾತ್ರ ಭೇಟಿ ನೀಡಿದ್ದರು ಎಂಬ ಇನ್ನೊಂದು ದೊಡ್ಡ ಸುಳ್ಳನ್ನು ಹೇಳಲಾಗಿತ್ತು. ಭಾರತ ಜೋಡೊ ಯಾತ್ರೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗಿದ ಬಗ್ಗೆಯೂ ಸುಳ್ಳು ಹರಡಲಾಗಿತ್ತು ಮತ್ತು ಅದನ್ನೂ ಬಯಲಿಗೆಳೆಯಲಾಗಿತ್ತು ಎಂದು ಶ್ರೀನಾತೆ ಹೇಳಿದರು.

Similar News