ಹೆದ್ದಾರಿ ದರೋಡೆ ಪ್ರಯತ್ನದಲ್ಲಿ ನಟಿ ಹತ್ಯೆ ಪ್ರಕರಣಕ್ಕೆ ತಿರುವು: ನಟಿ ಪತಿಯ ಬಂಧನ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬುಧವಾರ ನಡೆದ ಹೆದ್ದಾರಿ ದರೋಡೆ ಪ್ರಯತ್ನದಲ್ಲಿ ಝಾರ್ಖಂಡ್ ನಟಿಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದು, ಈ ಸಂಬಂಧ ಚಿತ್ರ ನಿರ್ಮಾಪಕನಾಗಿರುವ ನಟಿಯ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಹೇಳಿಕೆ ನೀಡಿರುವ ಹೌರಾ(ಗ್ರಾಮೀಣ)ದ ಪೊಲೀಸ್ ವರಿಷ್ಠಾಧಿಕಾರಿ ಸ್ವಾತಿ ಭಂಗಾಲಿಯಾ, ಝಾರ್ಖಂಡ್ ಮೂಲದ ನಟಿ ರಿಯಾ ಕುಮಾರಿ ಕುಟುಂಬದ ಸದಸ್ಯರು ಆಕೆಯ ಪತಿ ಪ್ರಕಾಶ್ ಕುಮಾರ್ ಹಾಗೂ ಆತನ ಸಹೋದರರ ವಿರುದ್ಧ ದೂರು ದಾಖಲಿಸಿರುವುದರಿಂದ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ದಂಪತಿಗಳಾದ ನಾವು ರಾಂಚಿಯಿಂದ ಕೋಲ್ಕತ್ತಾಗೆ ನಮ್ಮ ಮೂರು ವರ್ಷದ ಪುತ್ರಿಯೊಂದಿಗೆ ಪ್ರಯಾಣಿಸುವಾಗ ನಮ್ಮನ್ನು ತಡೆದ ಮೂವರು, ನನಗೆ ಸೇರಿದ ವಸ್ತುಗಳನ್ನು ದೋಚಲು ಯತ್ನಿಸಿದರು. ಆ ಸಂದರ್ಭದಲ್ಲಿ ನನ್ನ ಪತ್ನಿ ಪ್ರತಿಭಟಿಸಿದಾಗ ಆಕೆಯನ್ನು ಗುಂಡಿಟ್ಟು ಹತ್ಯೆಗೈದರು ಎಂದು ಕುಮಾರ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯು ಬುಧವಾರ ಬೆಳಗ್ಗೆ ಹೌರಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 16ರಲ್ಲಿ ಜರುಗಿತ್ತು.
ಕುಮಾರ್ ದಂಪತಿಗಳು ಪ್ರಯಾಣಿಸುತ್ತಿದ್ದ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು, ಹತ್ಯೆಯಲ್ಲಿ ಕುಮಾರ್ ಕೈವಾಡವನ್ನು ಶಂಕಿಸಿ, ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಇದಕ್ಕೂ ಮುನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ ಮತ್ತು ಕಿರುಕುಳ ನೀಡಿದ ಪ್ರಕರಣಗಳನ್ನು ಎದುರಿಸುತ್ತಿರುವ ಕುಮಾರ್‌ನನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ವಿಚಾರಣೆಯ ಸಂದರ್ಭದಲ್ಲಿ ದುಷ್ಕರ್ಮಿಗಳು ನನ್ನ ಪತ್ನಿ ಮೇಲೆ ಗುಂಡು ಹಾರಿಸಿದ ನಂತರ ಪರಾರಿಯಾದರು. ನಂತರ ನಾನು ಕಾರನ್ನು ಕೊಂಚ ದೂರದವರೆಗೆ ಚಲಾಯಿಸಿ ಸ್ಥಳೀಯರ ನೆರವು ಪಡೆದೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಮೃತ ಪಟ್ಟಿದ್ದಾಳೆ ಎಂದು ಉಲುಬೆರಿಯಾ ಆಸ್ಪತ್ರೆಯ ವೈದ್ಯರು ಘೋಷಿಸಿದರು ಎಂದು ಕುಮಾರ್ ಹೇಳಿಕೆ ನೀಡಿದ್ದಾನೆ.
ಚಲನಚಿತ್ರಗಳಲ್ಲಿ ಇಶಾ ಆಲಿಯಾ ಎಂದು ಹೆಸರಾಗಿರುವ ರಿಯಾ ಕುಮಾರಿ, ಹಲವಾರು ಪ್ರಾದೇಶಿಕ ಭಾಷೆಗಳ ಆಲ್ಬಂನಲ್ಲಿ ನಟಿಸಿದ್ದಾರೆ.