ಗಾಯಕ ಅರಿಜಿತ್ ಸಿಂಗ್‌ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆಗೆ 'ಕೇಸರಿ' ಬಣ್ಣ ಬಳಿದ ಬಿಜೆಪಿ !

Update: 2022-12-29 11:56 GMT

ಕೊಲ್ಕತ್ತಾ: ಕೊಲ್ಕತ್ತಾದಲ್ಲಿ ಫೆಬ್ರವರಿ 18 ರಂದು ನಡೆಸಲುದ್ದೇಶಿಸಲಾಗಿದ್ದ ಖ್ಯಾತ ಗಾಯಕ ಅರಿಜಿತ್ ಸಿಂಗ್‌ ಅವರ ಸಂಗೀತ ಕಾರ್ಯಕ್ರಮ ರದ್ದಾಗಿರುವುದು ಮತ್ತೆ ಕೇಸರಿ ಕುರಿತ ವಿವಾದಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮ ನಡೆಸಲುದ್ದೇಶಿಸಲಾದ ಸ್ಥಳದ ಅಸುಪಾಸಿನಲ್ಲಿಯೇ ಜಿ-20 ಕಾರ್ಯಕ್ರಮವೂ ನಡೆಯಲಿರುವುದರಿಂದ ಅದಕ್ಕೆ ಪಶ್ಚಿಮ ಬಂಗಾಳ ಸರಕಾರ ಅನುಮತಿ ನಿರಾಕರಿಸಿದೆ  ಎಂದು ಹೇಳಲಾಗಿದೆ.

ಆದರೆ ಬಿಜೆಪಿಯ ಅಮಿತ್‌ ಮಾಲವಿಯಾ ಅದಕ್ಕೆ ಬೇರೆಯೇ ತಿರುವು ನೀಡಿದ್ದಾರೆ. ಅರಿಜಿತ್ ಸಿಂಗ್‌ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ 'ರಂಗ್‌ ದೇ ತು ಮೊಹೆ ಗೆರುವಾ' (ನನಗೆ ಕೇಸರಿ ಬಣ್ಣ ಹಚ್ಚಿ) ಎಂಬ ಹಾಡು ಹಾಡಿರುವುದೇ ಇದಕ್ಕೆ ಕಾರಣ ಎಂದು ಮಾಲವಿಯಾ ಹೇಳಿದ್ದಾರೆ.

ಈ ಹಾಡಿನ ಒಂದೆರಡು ಸಾಲುಗಳನ್ನು ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅರಿಜಿತ್ ಸಿಂಗ್‌ ಹಾಡಿ ಶಾರುಖ್‌ ಖಾನ್‌ ಅವರ 'ದಿಲ್ವಾಲೆ' ಚಿತ್ರದಲ್ಲಿ ಈ ಹಾಡು ಇದ್ದುದರಿಂದ ಅದನ್ನು ಶಾರುಖ್‌ ಅವರಿಗೆ ಸಮರ್ಪಿಸಿದ್ದರು. ಈ ಕಾರ್ಯಕ್ರಮದಲ್ಲಿ ಅರಿಜಿತ್ ಇತರ ಹಾಡುಗಳನ್ನೂ ಹಾಡಿದ್ದರು.

ಇನ್ನೊಂದೆಡೆ ಕಾರ್ಯಕ್ರಮ ರದ್ದುಗೊಳಿಸಿದ ಕ್ರಮದ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಸಚಿವ ಫಿರ್ಹದ್‌ ಹಕೀಂ, "ಭಾರತದ ಜಿ-20 ಅಧ್ಯಕ್ಷತೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಯಲಿರುವ ಸಭಾಂಗಣವು ಅರಿಜಿತ್ ಸಿಂಗ್‌ ಅವರ ಕಾರ್ಯಕ್ರಮ ನಡೆಯಲಿದ್ದ ಇಕೋ ಪಾರ್ಕ್‌ನ ಎದುರುಗಡೆ ಇದೆ. ಜಿ-20 ಕಾರ್ಯಕ್ರಮದಲ್ಲಿ ಹಲವು ವಿದೇಶಿ ಗಣ್ಯರು ಭಾಗವಹಿಸಲಿದ್ದಾರೆ. ಅರಿಜಿತ್ ಕಾರ್ಯಕ್ರಮಕ್ಕೆ ಬಹಳಷ್ಟು ಜನ ಬರುವುದರಿಂದ ಜನಜಂಗುಳಿ ನಿಭಾಯಿಸುವುದು ಕಷ್ಟಕರವಾಗಿ ಕಾನೂನು ಸಮಸ್ಯೆ ಸೃಷ್ಟಿಯಾಗಬಹುದೆಂದು ಪೊಲೀಸರ ಅಭಿಪ್ರಾಯವಾಗಿತ್ತು," ಎಂದು ಸಚಿವರು ತಿಳಿಸಿದ್ದಾರೆ.

Similar News