RSS ಕುರಿತು ತನ್ನ ಪತ್ನಿಗಿರುವ ಜ್ಞಾನವನ್ನು ಹೊಗಳಿ ಟ್ರೋಲ್‌ಗೀಡಾದ ರವೀಂದ್ರ ಜಡೇಜ

Update: 2022-12-29 12:20 GMT

ಅಹಮದಾಬಾದ್: ಆರೆಸ್ಸೆಸ್ ಕುರಿತ ತನ್ನ ಪತ್ನಿಯ ಜ್ಞಾನವನ್ನು ಹೊಗಳಿರುವ ಕ್ರಿಕೆಟರ್ ರವೀಂದ್ರ ಜಡೇಜಾರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ರಾಷ್ಟ್ರೀಯ ಧ್ವಜದೊಂದಿಗೆ ತಾವಿರುವ ಭಾವಚಿತ್ರಕ್ಕೆ 'ಭಾರತೀಯ' ಎಂಬ ಅಡಿ ಬರಹ ನೀಡಿ ಅದನ್ನು ಹಂಚಿಕೊಂಡಿದ್ದರು.

ಡಿಸೆಂಬರ್ 24ರಂದು ಆರೆಸ್ಸೆಸ್ ಕುರಿತು ಪ್ರತಿಕ್ರಿಯಿಸುವಂತೆ ತಮ್ಮ ಪತ್ನಿಯನ್ನು ಪ್ರಶ್ನಿಸಿರುವ ವಿಡಿಯೊವನ್ನು ಜಡೇಜಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇತ್ತೀಚಿಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ಅವರ ಪತ್ನಿ ರಿವಾಬಾ ಜಡೇಜಾ, ಅದರಲ್ಲಿ ಆರೆಸ್ಸೆಸ್ ನ ದೇಶಪ್ರೇಮ, ರಾಷ್ಟ್ರೀಯತೆ, ತ್ಯಾಗ ಮತ್ತು ಒಗ್ಗಟ್ಟಿನ ಕುರಿತು ಶ್ಲಾಘಿಸಿದ್ದರು.

ಆ ವೀಡಿಯೊವನ್ನು ಹಂಚಿಕೊಂಡಿದ್ದ ರವೀಂದ್ರ ಜಡೇಜಾ, "ಆರೆಸ್ಸೆಸ್ ಕುರಿತ ನಿನ್ನ ಜ್ಞಾನ ಕಂಡು ಸಂತೋಷವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ನಮ್ಮ ಸಮಾಜದ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿರುವ ಸಂಘಟನೆಯೊಂದರ ಕುರಿತ ನಿನ್ನ ಜ್ಞಾನ ಮತ್ತು ಕಠಿಣ ಪರಿಶ್ರಮ ನಿನ್ನನ್ನು ಇತರಿರಿಗಿಂತ ಭಿನ್ನವಾಗಿಸಿದೆ‌. ಹೀಗೆಯೇ ಮುಂದುವರಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು, "ನೀವೇನಾದರೂ ರಾಜಕೀಯಕ್ಕೆ ಸೇರ್ಪಡೆಯಾದಿರಾ ಮತ್ತು ಬಿಸಿಸಿಐ ಏನಾದರೂ ಬಿಜೆಪಿ ಮತ್ತು ಆರೆಸ್ಸೆಸ್ ಎದುರು ಮಂಡಿಯೂರಿತೆ?" ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸುದ್ದಿ ವಾಹಿನಿಯೊಂದರಲ್ಲಿ ಆಯೋಜಿಸಲಾಗಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ, "ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ದಾಳಿಗೆ ಹೆದರಿರುವ ಕ್ರೀಡಾಪಟುಗಳು, ಕಲಾವಿದರು ಎಲ್ಲರೂ ಬಿಜೆಪಿಯನ್ನು ಸಂತೋಷ ಪಡಿಸಲು ಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಆದರೆ, ಜಡೇಜಾರ ನಿಲುವನ್ನು ಸಮರ್ಥಿಸಿರುವ ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ, ಅವರ ಒಂದೇ ತಪ್ಪೆಂದರೆ ಅವರು ತಮ್ಮ ಪತ್ನಿಯ ಬೆಂಬಲಕ್ಕೆ ನಿಂತು ಆಕೆಯನ್ನು ಶ್ಲಾಘಿಸಿರುವುದು. ಅವರು ಆರೆಸ್ಸೆಸ್ ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ ಎಂಬ ಸತ್ಯದ ಬೆಂಬಲಕ್ಕೆ ನಿಂತಿದ್ದಾರೆ. ಆರೆಸ್ಸೆಸ್ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯ ವ್ಯವಸ್ಥೆಯನ್ನು ಪ್ರತಿನಿಧಿಸುವ ಸಂಘಟನೆಯಾಗಿದೆ. ವ್ಯಗ್ರಗೊಂಡಿರುವ ಹುಸಿ ಉದಾರವಾದಿ ಜಾತ್ಯತೀತವಾದಿಗಳ ಸುತ್ತಲಿನ ಒಟ್ಟಾರೆ ಪರಿಸರ ಹೀಗೆಯೇ ಇದ್ದು, ಕಾಂಗ್ರೆಸ್ ಪಕ್ಷದ ರಶೀದ್ ಅಲ್ವಿ ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ಜಡೇಜಾರನ್ನು ಖಂಡಿಸುತ್ತಾರೆ. ಆರೆಸ್ಸೆಸ್ ಬಗ್ಗೆ ಮಾತನಾಡುವುದು ಅಪರಾಧವೇ?" ಎಂದು ಪ್ರಶ್ನಿಸಿದ್ದಾರೆ.

Similar News