ಹೆಬ್ರಿ: ಲಾರಿ-ಸ್ಕೂಟರ್ ಢಿಕ್ಕಿ; ಬೈಕ್ ಸವಾರ ಮೃತ್ಯು
Update: 2022-12-29 21:58 IST
ಹೆಬ್ರಿ: ಹೆಬ್ರಿಯ ಚಾರ ಕ್ರಾಸ್ ಬಳಿ ಲಾರಿ ಮತ್ತು ದ್ವಿಚಕ್ರ ವಾಹನ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಹೆರ್ಗಲ್ ಭಾಸ್ಕರ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಭಾಸ್ಕರ ಶೆಟ್ಟಿ ಚಾರ ಸಂತೆ ಮಾರುಕಟ್ಟೆಗೆ ಹೋಗುತ್ತಿರುವಾಗ ಹೆಬ್ರಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಲಾರಿಯ ಮುಂದಿನ ಚಕ್ರ ಎಕ್ಸೆಲ್ ಸವಾರನ ಮೈಮೇಲೆ ಹರಿದಿದೆ. ಅಪಘಾತ ತಪ್ಪಿಸಲು ಲಾರಿ ಚಾಲಕ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಲಾರಿ ಚಾಲಕನಿಗೂ ಕೈಗೆ ಗಾಯಗಳಾಗಿದೆ.
ಸ್ಥಳಕ್ಕೆ ಪೋಲಿಸ್ ವೃತ್ತ ನಿರೀಕ್ಷಕ ನಾಗರಾಜ್, ಹೆಬ್ರಿ ಪಿಎಸ್ಐ ಸುದರ್ಶನ್ ದೊಡ್ಡಮನಿ ಭೇಟಿ ನೀಡಿದ್ದರು.
ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.