ಈ ಆರು ದೇಶಗಳಿಂದ ಬರುವ ಯಾತ್ರಿಕರಿಗೆ ಆರ್‌ಟಿ-ಪಿಸಿಆರ್ ನೆಗೆಟಿವ್ ಕಡ್ಡಾಯ

Update: 2022-12-30 02:07 GMT

ಹೊಸದಿಲ್ಲಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಜನವರಿ 1ರಿಂದೀಚೆಗೆ ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಥಾಯ್ಲೆಂಡ್‌ನಿಂದ ಆಗಮಿಸುವವರು ತಮ್ಮ ಪ್ರಯಾಣ ಆರಂಭಕ್ಕೆ ಮುನ್ನ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿ ಸಲ್ಲಿಸುವುದು ಕಡ್ಡಾಯ ಮಾಡಿದೆ. ಪ್ರಯಾಣ ಆರಂಭಕ್ಕೆ 72 ಗಂಟೆಯ ಒಳಗಾಗಿ ಈ ಪರೀಕ್ಷೆ ಮಾಡಿಸಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ಈ ಬಗ್ಗೆ ಟ್ವೀಟ್ ಮಾಡಿದ್ದು, "ಅವರು ಪ್ರಯಾಣ ಆರಂಭಕ್ಕೆ ಮುನ್ನ ತಮ್ಮ ವರದಿಗಳನ್ನು ಏರ್ ಸುವಿಧಾ ಪೋರ್ಟೆಲ್‌ನಲ್ಲಿ ಅಪ್‌ಲೋಡ್ ಮಾಡಬೇಕು" ಎಂದು ಸ್ಪಷ್ಟಪಡಿಸಿದ್ದಾರೆ.

ಈ ಆರು ದೇಶಗಳಲ್ಲಿ ಕೋವಿಡ್-19 ಸೋಂಕು ನಿರಂತರವಾಗಿ ಮತ್ತು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ದಿನಗಳ ಸಮಾಲೋಚನೆ ಬಳಿಕ ಪ್ರಯಾಣ ಆರಂಭಕ್ಕೆ ಮುನ್ನ ಕಡ್ಡಾಯ ಕೋವಿಡ್ ಟೆಸ್ಟ್ ವರದಿ ಸಲ್ಲಿಕೆ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಮೂಲಗಳು ಹೇಳಿವೆ.

ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಶೇಕಡ 2ರಷ್ಟು ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಮೂರು ದಿನಗಳಿಂದ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, 40 ಮಂದಿ ವಿದೇಶಿ ಪ್ರಯಾಣಿಕರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

Similar News