×
Ad

ಪ್ರಧಾನಿ ಮೋದಿ ತಾಯಿ ಹೀರಾಬೆನ್ ನಿಧನ

Update: 2022-12-30 07:50 IST

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಶುಕ್ರವಾರ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು.

ಎರಡು ದಿನ ಮುನ್ನ ಅವರನ್ನು ಅಹ್ಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. "ಎ ಗ್ಲೋರಿಯಸ್ ಸೆಂಚುರಿ ರೆಸ್ಟ್ಸ್ ಅಟ್ ದ ಫೀಟ್ ಆಫ್ ಗಾಡ್" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ತಾಯಿಯ ಚಿತ್ರವನ್ನು ಷೇರ್ ಮಾಡಿರುವ ಅವರು, "ತಾಯಿಯಲ್ಲಿ ನಾನು ಸದಾ ಮೂರು ಗುಣಗಳನ್ನು ಕಾಣುತ್ತಿದ್ದೆ. ಸಾದ್ವಿಯ ಪಯಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾದ ಜೀವನ" ಎಂದು ಬಣ್ಣಿಸಿದ್ದಾರೆ.

"ನೂರನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದಾಗ, ಬುದ್ಧಿವಂತನಾಗಿ ಕೆಲಸ ಮಾಡು ಹಾಗೂ ಪರಿಶುದ್ಧ ಜೀವನ ನಡೆಸು ಎಂದು ಸಲಹೆ ಮಾಡಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.

ಕಳೆದ ಜೂನ್‌ನಲ್ಲಿ 99 ವರ್ಷ ಪೂರ್ಣಗೊಳಿಸಿದ ಹೀರಾಬೆನ್ ಕಳೆದ ಬುಧವಾರ ಅಹ್ಮದಾಬಾದ್‌ನ ಮೆಹ್ತಾ ಹಾಸ್ಪಿಟಲ್‌ಗೆ ದಾಖಲಿಸಲಾಗಿತ್ತು. ಅನಾರೋಗ್ಯಪೀಡಿತ ತಾಯಿಯ ಭೇಟಿಗೆ ಪ್ರಧಾನಿ ಮೋದಿ ಕೂಡಾ ಆಗಮಿಸಿದ್ದರು.

1923ರ ಜೂನ್ 18ರಂದು ವಾದನಗರದಲ್ಲಿ ಜನಿಸಿದ ಹೀರಾಬೆನ್ ಅವರಿಗೆ ನರೇಂದ್ರ ಮೋದಿ ಸೇರಿದಂತೆ ಐವರು ಪುತ್ರರು ಮತ್ತು ಪುತ್ರಿ ಇದ್ದಾರೆ. ಪಂಕಜ್ ಮೋದಿ, ಸೋಮಾ ಮೋದಿ, ಅಮೃತ್ ಮೋದಿ ಮತ್ತು ಪ್ರಹ್ಲಾದ್ ಮೋದಿ ಇತರ ಪುತ್ರರು. ವಸಂತಿಬೆನ್ ಹಸ್ಮುಖಲಾಳ್ ಮೋದಿ ಪುತ್ರಿ. ಹೀರಾಬೆನ್ ಅವರು ಪಂಕಜ್ ಮೋದಿಯವರ ಜತೆ ಗಾಂಧಿನಗರ ಸಮೀಪದ ರಾಯ್ಸನ್‌ನಲ್ಲಿ ವಾಸವಿದ್ದರು.

ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಮಂದಿ ಗಣ್ಯರು ಹೀಬಾಬೆನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Similar News