×
Ad

ಅಟಲ್ ಸುರಂಗದ ಎರಡೂ ಬದಿ ಸಿಕ್ಕಿಹಾಕಿಕೊಂಡ ಸಾವಿರಾರು ಪ್ರವಾಸಿಗಳು: ಕಾರಣ ಏನು ಗೊತ್ತೇ?

Update: 2022-12-30 09:03 IST

ಮನಾಲಿ: ವ್ಯಾಪಕ ಹಿಮಪಾತದಿಂದ ರಸ್ತೆ ಮೇಲೆ ಹಿಮ ಶೇಖರಣೆಯಾಗಿ ರಸ್ತೆ ಜಾರುತ್ತಿದ್ದ ಹಿನ್ನೆಲೆಯಲ್ಲಿ ಅಟಲ್ ಸುರಂಗದ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದ ನೂರಾರು ವಾಹನಗಳು ಸಿಕ್ಕಿಹಾಕಿಕೊಂಡ ಘಟನೆ ಗುರುವಾರ ನಡೆದಿದೆ.

ವ್ಯಾಪಕ ಹಿಮಪಾತ ಮತ್ತು ದಟ್ಟ ಮಂಜನ್ನು ನೋಡುವ ಸಲುವಾಗಿ ಸಾವಿರಾರು ಪ್ರವಾಸಿಗರು ಅಟಲ್ ಸುರಂಗವನ್ನು ದಾಟಿದರು. ರಸ್ತೆಯ ಮೇಲ್ಮೈಯಲ್ಲಿ ಹಿಮ ಶೇಖರಣೆಯಾದ ಹಿನ್ನೆಲೆಯಲ್ಲಿ ವಾಹನಗಳು ಸ್ಕಿಡ್ ಆಗಲು ಆರಂಭವಾಯಿತು. ಸಂಜೆಯ ವೇಳೆಗೆ ವಾಹನಗಳನ್ನು ಚಲಾಯಿಸುವುದು ಕಷ್ಟಸಾಧ್ಯವಾಯಿತು. ಬಹುತೇಕ ಟ್ಯಾಕ್ಸಿ ಚಾಲಕರು ಸೇರಿದಂತೆ ಕೆಲ ವ್ಯಕ್ತಿಗಳು ಸುರಂಗ ಹಾಗೂ ಧುಂಡಿ ನಾಲಾ ನಡುವಿನ ತಿರುವುಗಳನ್ನು ಕಷ್ಟದಿಂದ ದಾಟಿದರೆ, ನೂರಾರು ವಾಹನಗಳು ಸಿಕ್ಕಿಹಾಕಿಕೊಂಡು ವಾಹನ ದಟ್ಟಣೆಗೆ ಕಾರಣವಾಯಿತು.

ಅಟಲ್ ಸುರಂಗದ ಕಡೆಗೆ ತೆರಳುವ ವಾಹನಗಳನ್ನು ಅಧಿಕಾರಿಗಳು ತಡೆದರೂ, ಅದು ತೀರಾ ವಿಳಂಬವಾಯಿತು. ಹಲುಲ್-ಸ್ಪಿಟಿ ಪೊಲೀಸರು ವಾಹನಗಳನ್ನು ಲಹೂಲ್‌ನಿಂದ ಮನಾಲಿ ಕಡೆಗೆ ಕಳುಹಿಸಿದರು. ಆದರೆ ಅಟಲ್ ಸುರಂಗದ ದಕ್ಷಿಣ ತುದಿಯಲ್ಲಿ ವಾಹನ ದಟ್ಟಣೆಯಿಂದಾಗಿ ಅವು ಸಂಚರಿಸಲು ಸಾಧ್ಯವಾಗಲಿಲ್ಲ. ವಾಹನಗಳು ಪರಸ್ಪರ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಂದೊಂದೇ ವಾಹನಗಳನ್ನು ಸರದಿಯಲ್ಲಿ ಬಿಡಲಾಯಿತು.

ರಾತ್ರಿ 8.45ರ ವೇಳೆಗೆ 100ಕ್ಕೂ ಹೆಚ್ಚು ವಾಹನಗಳು ಉತ್ತರ ತುದಿಯಲ್ಲಿ ಸಿಲುಕಿ ಹಾಕಿಕೊಂಡಿವೆ ಎಂದು ಎಸ್ಪಿ ಮಾನವ್ ವರ್ಮಾ ಹೇಳಿದ್ದಾರೆ. ರಾತ್ರಿ 9 ಗಂಟೆಯ ವೇಳೆಗೆ ಸುರಂಗ ಮತ್ತು ಧುಂಡಿ ನಾಲಾ ನಡುವೆ 250ಕ್ಕೂ ಹೆಚ್ಚು ವಾಹನಗಳು ಸಿಕ್ಕಿಹಾಕಿಕೊಂಡಿವೆ ಎಂದು ಮನಾಲಿ ಎಸ್‌ಡಿಎಂ ಸುಂದರ್ ಠಾಕೂರ್ ಹೇಳಿದ್ದಾರೆ.

Similar News