ತಮ್ಮ ಪ್ರಥಮ ಭಾರತ ಭೇಟಿಯಲ್ಲಿ ಫುಟ್‌ಬಾಲ್ ಅಭಿಮಾನಿಗಳನ್ನು ರೋಮಾಂಚಿತಗೊಳಿಸಿದ್ದ ಪೀಲೆ

Update: 2022-12-30 07:23 GMT

ಸಾವೊ ಪೌಲೊ: ಕ್ಯಾನ್ಸರ್‌ ಪೀಡಿತರಾಗಿದ್ದ ಫುಟ್‌ಬಾಲ್ ದಂತಕಥೆ ಮತ್ತು ಬ್ರೆಝಿಲ್‌ನ ಫುಟ್‌ಬಾಲ್ ತಾರೆ ಪೀಲೆ (82) ಗುರುವಾರ ಸಾವೊ ಪೌಲ್‌ನ ಆಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕೋಲ್ಕತ್ತಾದ ಫುಟ್‌ಬಾಲ್ ಅಭಿಮಾನಿಗಳು ಶೋಕತಪ್ತರಾಗಿದ್ದಾರೆ.

ಪೀಲೆ ಸೆ. 25, 1977ರಲ್ಲಿ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ನೇಹಪೂರ್ವಕ ಪಂದ್ಯದಲ್ಲಿ ಕೋಲ್ಕತ್ತಾದ ಪ್ರಖ್ಯಾತ ಫುಟ್‌ಬಾಲ್ ತಂಡವಾದ ಮೋಹನ್ ಬಾಗನ್ ವಿರುದ್ಧ ಆಟವಾಡಿ, ತಮ್ಮ ಕಾಲ್ಚಳಕ ಪ್ರದರ್ಶಿಸಿದ್ದರು. ಪೀಲೆಯ ಕಾಲ್ಚಳಕವನ್ನು ಕಣ್ತುಂಬಿಕೊಳ್ಳುವ ಸುಮಾರು 80,000 ಫುಟ್‌ಬಾಲ್ ಪ್ರೇಮಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಫುಟ್‌ಬಾಲ್ ಅಭಿಮಾನಿಗಳು ಅಂದು ಪೀಲೆ ಆಟಕ್ಕೆ ಸಾಕ್ಷಿಯಾಗಿದ್ದರು.

ಸೆಪ್ಟೆಂಬರ್ 24, 1977ರಂದು ಆಯೋಜನೆಗೊಂಡಿದ್ದ ಸ್ನೇಹಪೂರ್ವಕ ಪಂದ್ಯದಲ್ಲಿ ಪಾಲ್ಗೊಳ್ಳಲು ಪೀಲೆ ಕೋಲ್ಕತ್ತಾಗೆ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ಲಕ್ಷಾಂತರ ಫುಟ್‌ಬಾಲ್ ಅಭಿಮಾನಿಗಳು ಜಮಾಯಿಸಿ ಅವರಿಗೆ ಅದ್ದೂರಿ ಸ್ವಾಗತ ಕೋರಿದ್ದರು. ಅಂದು ಕೋಲ್ಕತ್ತಾದಲ್ಲಿ ದುರ್ಗಾಪೂಜೆಯ ದಿನವಾಗಿರದಿದ್ದರೂ ನಗರದ ತುಂಬಾ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಉತ್ತರ ಅಮೆರಿಕಾ ಸಾಕರ್ ಲೀಗ್‌ನ ಭಾಗವಾಗಿದ್ದ, ತಾರಾ ಫುಟ್‌ಬಾಲ್ ಪಟುಗಳನ್ನು ಹೊಂದಿದ್ದ ನ್ಯೂಯಾರ್ಕ್ ಕಾಸ್ಮೋಸ್ ತಂಡದ ಪರವಾಗಿ ಆಡಲು ಅವರು ಕೋಲ್ಕತ್ತಾಗೆ ಪ್ರಥಮ ಬಾರಿಗೆ ಆಗಮಿಸಿದ್ದರು.

"Barefoots to boots" ಎಂಬ ಕೃತಿ ರಚಿಸಿರುವ ಇತಿಹಾಸಕಾರ ನೋವಿ ಕಪಾಡಿಯಾ, ಅಂದು ಕೋಲ್ಕತ್ತಾದಲ್ಲಿ ಮನೆ ಮಾಡಿದ್ದ ಸಂಭ್ರಮವನ್ನು ವಿವರವಾಗಿ ನಮೂದಿಸಿದ್ದಾರೆ. ಅವರ ಪ್ರಕಾರ, ಐತಿಹಾಸಿಕ ಪಂದ್ಯ ನಡೆಯುತ್ತಿದ್ದ ಈಡನ್ ಗಾರ್ಡನ್ ಕ್ರೀಡಾಂಗಣಕ್ಕೆ ಪೀಲೆ ಆಗಮಿಸುವ ಮುನ್ನವೆ, ಸಾವಿರಾರು ಫುಟ್‌ಬಾಲ್ ಅಭಿಮಾನಿಗಳು ಅವರು ಉಳಿದುಕೊಂಡಿದ್ದ ಹೋಟೆಲ್ ಎದುರು ನೆರೆದಿದ್ದರು ಎನ್ನುತ್ತಾರೆ.

ಪೀಲೆ ಬಡತನದಿಂದ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರನಾಗಿ ಬೆಳೆದು ನಿಂತವರು. ಅವರು ಎಲ್ಲಿಗೇ ಪ್ರಯಾಣಿಸಿದರೂ ಜನಸಮೂಹದ ಪ್ರೀತಿಗೆ ಪಾತ್ರರಾಗುತ್ತಿದ್ದರು. ಕೋಲ್ಕತ್ತಾ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ವಿನಯ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದ ಪೀಲೆ ಎಲ್ಲೇ ಹೋದರೂ ತಮ್ಮ ಮುಖದಲ್ಲಿ ಮಂದಹಾಸ ತುಂಬಿಕೊಂಡಿರುತ್ತಿದ್ದರು. 

Similar News