×
Ad

ಕಪ್ಪುಹಣ ನಿಯಂತ್ರಿಸಲು ನೋಟು ನಿಷೇಧ ಮಾಡುವ ಸಲಹೆಯನ್ನು ಆರ್ಬಿಐ 2016ರ ಮಾರ್ಚ್ ನಲ್ಲೇ ತಿರಸ್ಕರಿಸಿತ್ತು !

Update: 2022-12-30 20:25 IST

ಹೊಸದಿಲ್ಲಿ,ಡಿ.30: ನರೇಂದ್ರ ಮೋದಿ ಸರಕಾರವು 2016, ನ. 8 ರಂದು ನೋಟು ನಿಷೇಧವನ್ನು ಘೋಷಿಸುವ ತಿಂಗಳುಗಳ ಮೊದಲೇ ಆರ್ಬಿಐ ಅದನ್ನು ಬಲವಾಗಿ ವಿರೋಧಿಸಿತ್ತು. ಕರ್ನಾಟಕದ ಭ್ರಷ್ಟಾಚಾರ ವಿರೋಧಿ ಸಮಿತಿಯೊಂದು 2016,ಮಾ.15ರಂದು ಪ್ರಧಾನಿ, ವಿತ್ತಸಚಿವ ಮತ್ತು ಆರ್ಬಿಐ ಗವರ್ನರ್ ಗೆ  ಬರೆದಿದ್ದ ಪತ್ರದಲ್ಲಿ ಕಪ್ಪುಹಣವನ್ನು ನಿಯಂತ್ರಿಸಲು 500 ಮತ್ತು 1,000 ರೂ.ಗಳ ನೋಟುಗಳನ್ನು ನಿಷೇಧಿಸುವಂತೆ ಸಲಹೆ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಆರ್ಬಿಐ ,500 ಮತ್ತು 1,000 ರೂ. ಮುಖಬೆಲೆಯ ನೋಟುಗಳು ಹಾಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯದ ಶೇ.85ರಷ್ಟಿದ್ದು, ಸಾರ್ವಜನಿಕರ ನಗದು ಹಣದ ಅಗತ್ಯವನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ 500 ಮತ್ತು 1,000 ರೂ.ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದು ಪ್ರಸ್ತುತ ಕಾರ್ಯಸಾಧ್ಯವಲ್ಲ ಎಂದು ತಿಳಿಸಿತ್ತು.

ರಘುರಾಮ ರಾಜನ್ ಅವರು ಗವರ್ನರ್  ಆಗಿದ್ದಾಗ  ಆರ್ಬಿಐ  ಕೇಂದ್ರ ಸರಕಾರದ ನೋಟು ನಿಷೇಧ ಕ್ರಮವನ್ನು ತಿರಸ್ಕರಿಸಿತ್ತು. ಆದರೆ ರಘುರಾಮ ರಾಜನ್ 2016,ಸೆ.4ರಂದು ತನ್ನ ಹುದ್ದೆಗೆ ರಾಜೀನಾಮೆ ನೀಡಿದ ಎರಡೇ ತಿಂಗಳಲ್ಲಿ ಕೇಂದ್ರವು ನೋಟು ನಿಷೇಧವನ್ನು ಘೋಷಿಸಿತ್ತು. ಆ ಸಂದರ್ಭದಲ್ಲಿ ಊರ್ಜಿತ ಪಟೇಲ್ ಅವರು ಆರ್ಬಿಐ ಗವರ್ನರ್ ಆಗಿದ್ದರು.

ಕೇಂದ್ರ ಸರಕಾರವು ಕಳೆದ ತಿಂಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಆರ್ಬಿಐ ಕೇಂದ್ರೀಯ ಮಂಡಳಿಯ ನಿರ್ದಿಷ್ಟ ಶಿಫಾರಸಿನ ಮೇರೆಗೆ ನೋಟು ನಿಷೇಧವನ್ನು ಜಾರಿಗೊಳಿಸಲಾಗಿತ್ತು ಎಂದು ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯವು ನೋಟು ನಿಷೇಧ ಕ್ರಮವನ್ನು ಪ್ರಶ್ನಿಸಿರುವ 58 ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ. ಆರ್ಬಿಐ ಶಿಫಾರಸಿನ ಅನುಷ್ಠಾನಕ್ಕಾಗಿ ಕರಡು ಯೋಜನೆಯೊಂದನ್ನೂ ಪ್ರಸ್ತಾವಿಸಿತ್ತು. ಆರ್ಬಿಐ ಶಿಫಾರಸು ಮತ್ತು ಕರಡು ಯೋಜನೆಯನ್ನು ಕೇಂದ್ರ ಸರಕಾರವು ಪರಿಗಣಿಸಿತ್ತು ಮತ್ತು ಅದರ ಆಧಾರದಲ್ಲಿ ನೋಟು ನಿಷೇಧವನ್ನು ಘೋಷಿಸಿ ಗೆಝೆಟ್ ಅಧಿಸೂಚನೆಯನ್ನು ಪ್ರಕಟಿಸಿತ್ತು ಎಂದೂ ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ಆದರೆ ಪ್ರಧಾನಿ ನರೇಂದ್ರ ಮೋದಿಯವರು 2016,ನ.8ರಂದು ನೋಟು ನಿಷೇಧದ ನಿರ್ಧಾರವನ್ನು ಪ್ರಕಟಿಸುವ ಕೆಲವೇ ಗಂಟೆಗಳ ಮೊದಲು ನಡೆದಿದ್ದ ಆರ್ಬಿಐ ಕೇಂದ್ರ ಮಂಡಳಿಯ ಸಭೆಯ ನಡಾವಳಿಗಳು ಬೇರೆಯದನ್ನೇ ಹೇಳುತ್ತಿವೆ.

ಆರ್ಟಿಐ ಅರ್ಜಿಯ ಮೂಲಕ ಮಂಡಳಿಯ 561ನೇ ಸಭೆಯ ನಡಾವಳಿಯನ್ನು ಪಡೆದುಕೊಂಡಿರುವ ಆರ್ಟಿಐ ಕಾರ್ಯಕರ್ತ ವೆಂಕಟೇಶ ನಾಯಕರ ಪ್ರಕಾರ,'ನೋಟು ನಿಷೇಧ ವಿಷಯದ ಕುರಿತು ಆರ್ಬಿಐ ಡೆಪ್ಯೂಟಿ ಗವರ್ನರ್ ಸಭೆಯಲ್ಲಿ ಜ್ಞಾಪಕ ಪತ್ರವನ್ನು ಮಂಡಿಸುವ ಮುನ್ನ ಸರಕಾರದ ಯೋಜನೆಯ ಬಗ್ಗೆ ಕೇಂದ್ರ ಮಂಡಳಿಗೆ ತಿಳಿದೇ ಇರಲಿಲ್ಲ ಎನ್ನುವುದನ್ನು ನಡಾವಳಿಗಳ 4.4 ಪ್ಯಾರಾದಲ್ಲಿ ಬಳಕೆಯಾಗಿರುವ ಭಾಷೆಯು ಸೂಚಿಸುತ್ತಿರುವಂತೆ ಕಾಣುತ್ತಿದೆ.

ನೋಟು ನಿಷೇಧ ವಿಷಯದ ಕುರಿತು ಕೇಂದ್ರ ಸರಕಾರ ಮತ್ತು ಆರ್ಬಿಐ ಕಳೆದ ಆರು ತಿಂಗಳುಗಳಿಂದಲೂ ಚರ್ಚಿಸುತ್ತಿವೆ ಎಂದಷ್ಟೇ ಕೇಂದ್ರ ಮಂಡಳಿಗೆ ಭರವಸೆ ನೀಡಲಾಗಿತ್ತು ಎಂದು ನಡಾವಳಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ನೋಟು ನಿಷೇಧವು ಸ್ವತಃ ಪರಿಣಾಮಕಾರಿ ಕ್ರಮವಾಗಿತ್ತು ಹಾಗೂ ನಕಲಿ ನೋಟು, ಭಯೋತ್ಪಾದನೆಗೆ ಆರ್ಥಿಕ ನೆರವು,ಕಪ್ಪುಹಣ ಮತ್ತು ತೆರಿಗೆ ವಂಚನೆಯ ಪಿಡುಗಿನ ವಿರುದ್ಧ ಹೋರಾಟದ ವ್ಯಾಪಕ ಕಾರ್ಯತಂತ್ರದ ಭಾಗವಾಗಿತ್ತು,ಆದರೆ ಅಷ್ಟಕ್ಕೇ ಸೀಮಿತವಾಗಿರಲಿಲ್ಲ ಎಂದೂ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಬೆಂಗಳೂರಿನ ಭೂ ಕಬಳಿಕೆ ವಿರೋಧಿ ಕ್ರಿಯಾಸಮಿತಿಯು 2016,ಜ.12ರಂದು ಪ್ರಧಾನ ಮಂತ್ರಿಯವರಿಗೆ ಬರೆದಿದ್ದ ಪತ್ರದಲ್ಲಿ ಹೆಚ್ಚುಕಡಿಮೆ ಇವೇ ಕಳವಳಗಳನ್ನು ವ್ಯಕ್ತಪಡಿಸಿದ್ದು ಆಸಕ್ತಿಪೂರ್ಣವಾಗಿದೆ. ಕಪ್ಪುಹಣವು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಯಾಗಿದೆ ಎಂದು ಪತ್ರದಲ್ಲಿ ಬರೆದಿದ್ದ ಮಾಜಿ ಶಾಸಕ ಹಾಗೂ ಸಮಿತಿಯ ಸಂಚಾಲಕ ಎ.ಕೆ.ರಾಮಸ್ವಾಮಿಯವರು, ಭಾರತದಲ್ಲಿ ಚಲಾವಣೆಯಲ್ಲಿರುವ ಕಪ್ಪುಹಣದ ಕುರಿತು 'ಗಾಢ ವೌನ 'ವನ್ನು ಬೆಟ್ಟು ಮಾಡಿದ್ದರು.

 ಪ್ರಧಾನಿ,ಅವರ ಕಚೇರಿ ಅಥವಾ ವಿತ್ತಸಚಿವರು ಸಮಿತಿಯ ಪತ್ರಕ್ಕೆ ಉತ್ತರಿಸಿರಲಿಲ್ಲ, ಆದರೆ ಆರ್ಬಿಐ 2016,ಮಾ.15ರ ಪತ್ರದಲ್ಲಿ ನೋಟು ನಿಷೇಧವು ಪ್ರಸ್ತುತ ಕಾರ್ಯಸಾಧ್ಯವಲ್ಲ ಎಂದು ತಿಳಿಸಿತ್ತು.

Similar News