ಜೋಷಿ ಉತ್ತರ ಹಾಸ್ಯಾಸ್ಪದ

Update: 2022-12-31 05:22 GMT

‘‘ರಥ ಸಿದ್ಧಪಡಿಸಿದವರು, ರಥದ ಡ್ರೈವರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಸ್ವಾಗತ, ವಂದನಾರ್ಪಣೆ, ನಿರೂಪಣೆ ಮಾಡುವವರೆಲ್ಲ ಸೇರಿ ಒಟ್ಟು 13 ಮುಸ್ಲಿಮರಿಗೆ ಹಾವೇರಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಕೊಟ್ಟಿದ್ದೇವೆ’’ ಎನ್ನುವ ಕಸಾಪ ಅಧ್ಯಕ್ಷ ಮಹೇಶ ಜೋಷಿ ಅವರ ಹಾಸ್ಯಾಸ್ಪದ ಹೇಳಿಕೆಯು ಕನ್ನಡ ಸಾಹಿತ್ಯದ ಕುರಿತ ಅವರ ಅಪಕ್ವ ತಿಳುವಳಿಕೆಯನ್ನು ಎತ್ತಿ ತೋರಿಸಿದೆ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮ್ ಕವಿಗಳು, ಸಾಹಿತಿಗಳು ಎಷ್ಟು ಮಂದಿ ಮುಖ್ಯ ವೇದಿಕೆಯ ವಿಚಾರ ಗೋಷ್ಠಿ, ಕವಿ ಗೋಷ್ಠಿ ಮತ್ತು ಸನ್ಮಾನಿತರ ಪಟ್ಟಿಯಲ್ಲಿ ಇದ್ದಾರೆ... ಎನ್ನುವ ನನ್ನ ಪ್ರಶ್ನೆಗೆ ನೇರವಾದ ಉತ್ತರ ಕೊಡಿ. ಒಬ್ಬರೂ ಇಲ್ಲ ಎನ್ನುವುದು ನಿಮಗೆ ನಾಚಿಕೆ ತಂದಿಲ್ಲದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ.

 ವೇದಿಕೆಗೆ ಶಿಶುನಾಳ ಷರೀಫರ ಹೆಸರು ಮತ್ತು ಆಹ್ವಾನ ಪತ್ರಿಕೆಯಲ್ಲಿ ಸರ್ ಮಿರ್ಝಾ ಇಸ್ಮಾಯೀಲ್ ಅವರ ಭಾವಚಿತ್ರ ಹಾಕಿರುವುದರ ಬಗ್ಗೆ ಜೋಷಿ ಹೇಳಿದ್ದಾರೆ. ಆದರೆ ಕನ್ನಡದಲ್ಲಿ ಬಹುದೊಡ್ಡ ಕಾವ್ಯ ಮತ್ತು ಕಥಾ ಪರಂಪರೆಯನ್ನು ಹುಟ್ಟು ಹಾಕಿರುವ ಹಿರಿಯ ಮುಸ್ಲಿಮ್ ಸಾಹಿತಿಗಳನ್ನು ಸಮ್ಮೇಳನದಿಂದ ದೂರ ಇಡಲಾಗಿದೆ. ಮಾತ್ರವಲ್ಲ ಕಿರಿಯರನ್ನೂ ನಿರ್ಲಕ್ಷಿಸಲಾಗಿದೆ. 2022ರಲ್ಲಿ ಹಲವು ಕಥೆ, ಕಾವ್ಯ ಮತ್ತು ಪುಸ್ತಕ ಬಹುಮಾನಗಳನ್ನು ಗೆದ್ದಿರುವ ಯಾವ ಯುವ ಮುಸ್ಲಿಮ್ ಸಾಹಿತಿಗಳಿಗೂ ಮುಖ್ಯ ವೇದಿಕೆಯ ಗೋಷ್ಠಿಗಳಲ್ಲಿ ಅವಕಾಶ ನೀಡಿಲ್ಲ. ಇತ್ತೀಚೆಗಷ್ಟೆ ತಮ್ಮ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪಡೆದ ದಾದಾಪೀರ್ ಜೈಮನ್ ಅವರ ಹೆಸರೂ ಜೋಷಿಗೆ ನೆನಪಾಗಿಲ್ಲ. ಇದು ಕನ್ನಡದ ಮುಸ್ಲಿಮ್ ಸಾಹಿತಿಗಳ ಕುರಿತ ಅವರ ಅಜ್ಞಾನವನ್ನು ಎತ್ತಿ ತೋರಿಸುತ್ತದೆ.

‘‘ತಮಗೆ ಅವಕಾಶ ಸಿಕ್ಕಿಲ್ಲವೆಂದು ಪ್ರತಿಭಟನೆಗಾಗಿ ಜನ ಸಾಹಿತ್ಯ ಸಮ್ಮೇಳನ ಯೋಜಿಸಿದ್ದಾರೆ’’ ಎಂಬ ಮಹೇಶ್ ಜೋಷಿಯವರ ಹೇಳಿಕೆಯೂ ಹಾಸ್ಯಾಸ್ಪದ. ಜನ ಸಾಹಿತ್ಯ ಸಮ್ಮೇಳನಕ್ಕೂ ನನಗೂ ಸಂಬಂಧವಿಲ್ಲ. ನಾನು ಅದರಲ್ಲಿ ಭಾಗವಹಿಸುತ್ತಲೂ ಇಲ್ಲ. ಅದನ್ನು ಯೋಜಿಸಿದವರು ತಮ್ಮ ಹೆಸರುಗಳನ್ನು ಬಹಿರಂಗವಾಗಿಯೇ ಪ್ರಕಟಿಸಿದ್ದಾರೆ. ಮಾಧ್ಯಮರಂಗದಲ್ಲಿ ಭಾರೀ ದೊಡ್ಡ ಹುದ್ದೆ ನಿರ್ವಹಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಜೋಷಿಯವರು ಫ್ಯಾಕ್ಟ್ ಚೆಕ್ ಮಾಡಿಕೊಳ್ಳಲಿ. ಈ ಬಗ್ಗೆ ತಪ್ಪುಅಥವಾ ಸುಳ್ಳು ಮಾಹಿತಿ ಹರಡುವುದು ಬೇಡ.

ಕನ್ನಡ ಸಾಹಿತ್ಯ ಪರಿಷತ್ತು ಹಲವು ಪ್ರಾತಃಸ್ಮರಣೀಯ ಹಿರಿಯರ ಶ್ರಮದಿಂದ ಕಟ್ಟಿದ ಸಂಸ್ಥೆ. ನಾನು ಹಿಂದೆಯೂ ಕಸಾಪ ಸಮ್ಮೇಳನಗಳ ವೇದಿಕೆಯಲ್ಲಿ ಭಾಗವಹಿಸಿದ್ದೇನೆ. ಗಂಗಾವತಿ ಸಮ್ಮೇಳನದಲ್ಲಿ ನನಗೆ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆಗಾಗಿ ಸನ್ಮಾನವನ್ನೂ ಮಾಡಲಾಗಿದೆ. ಹಿಂದಿನ ಬಹುತೇಕ ಸಮ್ಮೇಳನಗಳಲ್ಲಿ ವೇದಿಕೆಯಲ್ಲಿ ಅವಕಾಶ ಇಲ್ಲದಿದ್ದರೂ ಸಭಿಕನಾಗಿಯೂ ನಾನು ಭಾಗವಹಿಸಿದ್ದೇನೆ. 38 ವರ್ಷಗಳ ಕಾಲ ಕನ್ನಡ ಪತ್ರಕರ್ತನಾಗಿ ಕೆಲಸ ಮಾಡಿರುವ ನಾನು ಜೋಷಿಯವರಿಂದ ಕನ್ನಡ ಪ್ರೇಮ ಕಲಿತುಕೊಳ್ಳಬೇಕಿಲ್ಲ. ಮುಸ್ಲಿಮರು, ದಲಿತರು ಮತ್ತು ಮಹಿಳೆಯರನ್ನು ಕಡೆಗಣಿಸಿರುವ ಮಹೇಶ್ ಜೋಷಿ ಹಾವೇರಿ ಸಮ್ಮೇಳನವನ್ನು ಕೋಮುವಾದೀಕರಣಗೊಳಿಸಿದ್ದಾರೆ. ಇದರ ವಿರುದ್ಧ ನನ್ನ ಪ್ರತಿಭಟನೆ ದಾಖಲಿಸಿದ್ದೇನೆಯೇ ಹೊರತು ಇನ್ಯಾವ ವೈಯಕ್ತಿಕ ದ್ವೇಷವೂ ನನ್ನದಲ್ಲ.

ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಿರ್ಝಾ ಇಸ್ಮಾಯೀಲ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಮಧ್ಯೆ ಚಾಮರಾಜಪೇಟೆ ಗಣಪತಿ ಗಲಭೆಯ ಮೂಲಕ ಬತ್ತಿ ಇಡಲು ಹಿಂದೊಮ್ಮೆ ಕೆಲವರು ಯತ್ನಿಸಿದ್ದರು. ಆದರೆ ಒಡೆಯರ್ ಅವರು ಆ ಪಿತೂರಿಗೆ ಬಲಿ ಬೀಳಲಿಲ್ಲ. ಈಗ ಮಹೇಶ ಜೋಶಿ ಕಸಾಪವನ್ನು ಕೋಮುವಾದೀಕರಣ ಗೊಳಿಸುವ ನಿಟ್ಟಿನಲ್ಲಿ ಅದೇ ರೀತಿಯ ಹೆಜ್ಜೆ ಇಟ್ಟಿದ್ದಾರೆ. ಪ್ರಾಜ್ಞ ಕನ್ನಡಿಗರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ನನ್ನದು.

Similar News