ಬಡವರ ದುಡಿಮೆಗೆ ಬೆಲೆಯಿಲ್ಲವೇ?

Update: 2022-12-30 18:38 GMT

 ಮಾನ್ಯರೇ,
ಕೇಂದ್ರ ಸರಕಾರವು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ನರೇಗಾ)ಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 8,305 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಬಾಕಿಯಿರಿಸಿದೆ ಎಂದು ಬುಧವಾರ ಸರಕಾರದ ಅಂಕಿ ಅಂಶಗಳು ತೋರಿಸಿವೆ (ವಾ.ಭಾ. ಡಿ.29) ಎಂಬ ಸಮಾಚಾರವು ಕೇಂದ್ರ ಸರಕಾರದ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಬಡವರ ಹಾಗೂ ಬಹುಪಾಲು ಹಳ್ಳಿಗಾಡಿನ ಪ್ರದೇಶದ ಶ್ರಮಜೀವಿಗಳ ದುಡಿಮೆಯ ಹಣವನ್ನು ತಕ್ಷಣವೇ ಪಾವತಿಸದೆ ತಡೆಹಿಡಿದಿರುವುದು ಊಳಿಗಮಾನ್ಯ ಧೋರಣೆಯಾಗಿದೆ; ಮನುವಾದಿ ಲಕ್ಷಣದ ಕುರುಹಾಗಿದೆ. ಮನುಸ್ಮತಿಯಲ್ಲಿ 'ಶೂದ್ರಂ ತು ಕಾರಯೇತ್ ದಾಸ್ಯಂ ಕ್ರೀತಂ ಅಕ್ರೀತಮೇವ ವಾ' ಎಂಬ ಮಾತಿದೆ. ಅಂದರೆ ಕೂಲಿ(ಬೆಲೆ) ಕೊಡದಿದ್ದರೂ ಸರಿಯೇ, ಶೂದ್ರನಿಂದ ಕೆಲಸ ಮಾಡಿಸಬೇಕು ಎಂದು ಅರ್ಥ. ಈ ಪರಂಪರೆಯನ್ನು ನಾವು ಹೀಗೂ ಕಾಪಾಡಿಕೊಂಡು ಬರಬೇಕಾಗಿದೆಯೆ?!

ದೇವರ ದಾಸಿಮಯ್ಯನವರ ವಚನದಲ್ಲಿ ಹೇಳಲ್ಪಟ್ಟ, ''ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದೊಡೆ ವಿಷವೇರಿತ್ತಯ್ಯ ಆಪಾದಮಸ್ತಕಕ್ಕೆ ಹಸಿವಿಗನ್ನವನಿಕ್ಕಿ ವಿಷವನಿಳುಹಲು ಬಲ್ಲೊಡೆ ಅವನೆ ಗಾರುಡಿಗ ಕಾಣಾ ರಾಮನಾಥ'' ಎಂಬ ಮಾತಿನಲ್ಲಿ ಅಡಗಿರುವ ನೈಜ ಮಾನವೀಯತೆಯನ್ನು ನಮ್ಮನ್ನಾಳುವ ಮಂದಿಗೆ ತಿಳಿಸುವವರಾರು? ಹಸಿದವನಿಗೆ ಮೊದಲು ರೊಟ್ಟಿ ಕೊಡಿ. ನಂತರ ವೇದಾಂತವನ್ನು ಬೋಧಿಸಿ ಎಂಬ ವಿವೇಕಾನಂದರ ಅಂತಃಕರಣ 'ಮನ್ ಕಿ ಬಾತ್' ನಲ್ಲಿ ಮಿಡಿದು ಕಾರ್ಯಗತಗೊಳ್ಳಬೇಕಿತ್ತಲ್ಲವೆ? ಬಂಡವಾಳಿಗರ ತಾಳಕ್ಕೆ ಕುಣಿಯುವ ಮನಸ್ಸು ಬಡವರ ಹಸಿವಿಗೆ ಸ್ಪಂದಿಸುವುದೇ ಇಲ್ಲ ಯಾಕೆ? ಕುರ್‌ಆನ್‌ನಲ್ಲಿ ಉಕ್ತವಾಗಿರುವ, ''ಕೂಲಿಯವನ ಮೈಮೇಲಿನ ಬೆವರು ಆರುವ ಮೊದಲೇ ಅವನ ಕೂಲಿಯನ್ನು ಕೊಟ್ಟುಬಿಡಬೇಕು'' ಎಂಬ ಹೃದಯಾಂತರಾಳದಿಂದೊಗೆದ ಅದ್ಭುತ ಮಾತಿನ ಹಿನ್ನೆಲೆಯಲ್ಲಿ ಯೋಚಿಸಿದಾಗ ನಾವು ಎಂತಹ ಕಟುಕರಾಗಿಬಿಟ್ಟಿದ್ದೇವೆ ಎಂದೆನಿಸುವುದಿಲ್ಲವೆ?! ''ಇನ್ನಿನಿಸು ಮಹಾತ್ಮಾ ನೀ ಬದುಕಬೇಕಿತ್ತು...'' ಎಂಬ ಮಂಜೇಶ್ವರ ಗೋವಿಂದ ಪೈಗಳ ಕವನದ ಸಾಲು ಮನದಂಗಣದಲ್ಲಿ ರಿಂಗಣಗೊಳ್ಳುತ್ತದೆ!!!
 

Similar News