ಹೆಚ್ಚಿನ ಭದ್ರತೆ ಕೇಳಿದ್ದಕ್ಕೆ ಸಿಕ್ಕಿದ್ದು ಉಲ್ಲಂಘನೆಯ ಲೆಕ್ಕ!

Update: 2022-12-31 09:21 GMT

ರಾಹುಲ್ ಗಾಂಧಿಯವರು ನಡೆಸುತ್ತಿರುವ ‘ಭಾರತ್ ಜೋಡೊ’ ಯಾತ್ರೆ ದಿಲ್ಲಿ ಮುಟ್ಟಿದೆ. ಅಲ್ಪವಿಶ್ರಾಂತಿಯ ಬಳಿಕ ಅದು ಮತ್ತೆ ಶುರುವಾಗಲಿದ್ದು, ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಆದರೆ, ಈ ನಡುವೆಯೇ ಕೊರೋನ ನೆಪ ಹೇಳಿ ‘‘ಕೊರೋನ ಮಾರ್ಗದರ್ಶಿ ಸೂತ್ರ ಅನುಸರಿಸಲಾಗದಿದ್ದರೆ ಯಾತ್ರೆ ನಿಲ್ಲಿಸಿ’’ ಎಂದು ಕೇಂದ್ರ ಸೂಚಿಸಿದ್ದ ಬೆನ್ನಲ್ಲೇ ಮತ್ತೊಂದು ನೆಪವನ್ನೂ ತೆಗೆಯಲಾಗಿದೆ. ಅದೆಂದರೆ, ಅದೆಷ್ಟೋ ಬಾರಿ ರಾಹುಲ್ ಗಾಂಧಿ ಭದ್ರತಾ ಮಾರ್ಗಸೂಚಿ ಉಲ್ಲೇಖಿಸಿದ್ದಾರೆ ಎಂಬ ಆರೋಪ.

ಇದೆಲ್ಲ ಶುರುವಾಗಿರುವುದು, ಭದ್ರತಾ ಲೋಪಗಳನ್ನು ಉಲ್ಲೇಖಿಸಿ, ರಾಹುಲ್ ಗಾಂಧಿಗೆ ಹೆಚ್ಚಿನ ರಕ್ಷಣೆಯನ್ನು ಕಾಂಗ್ರೆಸ್ ಕೋರಿದ ಬೆನ್ನಲ್ಲೇ. ಭಾರತ್ ಜೋಡೊ ಯಾತ್ರೆಗೆ ಮಾಡಲಾದ ವ್ಯವಸ್ಥೆಗಳ ಬಗ್ಗೆ ಸಿಆರ್‌ಪಿಎಫ್ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದು, ಅದೇ ಹೊತ್ತಲ್ಲಿ, ರಾಹುಲ್ ಗಾಂಧಿಯವರಿಂದ ಭದ್ರತಾ ಮಾರ್ಗಸೂಚಿ ಉಲ್ಲಂಘನೆಯ ಬಗ್ಗೆಯೂ ಪ್ರಸ್ತಾಪಿಸಿದೆ.

ಭಾರತ್ ಜೋಡೊ ಯಾತ್ರೆ ಶನಿವಾರ ದಿಲ್ಲಿ ಪ್ರವೇಶಿಸಿದಾಗಿನಿಂದ ಹಲವಾರು ಬಾರಿ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿತ್ತು. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುವ ದಿಲ್ಲಿ ಪೊಲೀಸ್ ವಿಭಾಗವು, ಝೆಡ್ ಪ್ಲಸ್ ಭದ್ರತೆಯನ್ನು ನಿಯೋಜಿಸಲಾಗಿರುವ ರಾಹುಲ್ ಗಾಂಧಿ ಅವರ ಸುತ್ತಲಿನ ಪರಿಮಿತಿಯಲ್ಲಿ ಹೆಚ್ಚಿದ ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪತ್ರದಲ್ಲಿ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದರು.

ಭದ್ರತಾ ಉಲ್ಲಂಘನೆಯ ಅಪಾಯಕಾರಿ ಸನ್ನಿವೇಶದಿಂದಾಗಿ ರಾಹುಲ್ ಗಾಂಧಿ ಅವರೊಂದಿಗೆ ನಡೆಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಭಾರತ್ ಯಾತ್ರಿಕರು ತಾವೇ ಭದ್ರತಾ ವಲಯ ಸೃಷ್ಟಿ ಮಾಡುವಂತಾಗಿತ್ತು. ಆಗಲೂ ದಿಲ್ಲಿ ಪೊಲೀಸರು ‘ಮೂಕ ಪ್ರೇಕ್ಷಕ’ರಾಗಿದ್ದರು ಎಂದು ವೇಣುಗೋಪಾಲ್ ದೂರಿದ್ದರು. ಅಷ್ಟೇ ಅಲ್ಲದೆ, ಯಾತ್ರೆಯಲ್ಲಿ ಭಾಗವಹಿಸಿದ ಜನರನ್ನು ಗುಪ್ತಚರ ಸಂಸ್ಥೆ ವಿಚಾರಣೆಗೆ ಒಳಪಡಿಸಿದೆ ಎಂದು ಕೂಡ ಪತ್ರದಲ್ಲಿ ಅವರು ಆರೋಪಿಸಿದ್ದರು. ಹರ್ಯಾಣ ರಾಜ್ಯ ಗುಪ್ತಚರ ವಿಭಾಗಕ್ಕೆ ಸೇರಿದ ‘ಅಪರಿಚಿತ ದುಷ್ಕರ್ಮಿಗಳು’ ಭಾರತ್ ಜೋಡೊ ಯಾತ್ರೆಯ ಕಂಟೇನರ್‌ಗಳಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಹರ್ಯಾಣದ ಗುರ್ಗಾಂವ್‌ನಲ್ಲಿ ಪೊಲೀಸರಿಗೆ ಕಾಂಗ್ರೆಸ್ ದೂರು ನೀಡಿದ್ದುದನ್ನು ಕೂಡ ಅವರು ಉಲ್ಲೇಖಿಸಿದ್ದರು. ಭಾರತದ ಎಲ್ಲ ಪ್ರದೇಶಗಳುದ್ದಕ್ಕೂ ಓಡಾಡುವ ಸಾಂವಿಧಾನಿಕ ಹಕ್ಕನ್ನು ಪ್ರತೀ ಪ್ರಜೆಯೂ ಹೊಂದಿದ್ದಾನೆ. ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ತರುವ ಸಲುವಾಗಿ ಭಾರತ್ ಜೋಡೊ ಯಾತ್ರೆ ನಡೆಯುತ್ತಿದೆ. ಸರಕಾರವು ಪ್ರತೀಕಾರದ ರಾಜಕೀಯದಲ್ಲಿ ತೊಡಗಬಾರದು. ಕಾಂಗ್ರೆಸ್ ನಾಯಕರ ಸುರಕ್ಷತೆ ಹಾಗೂ ಭದ್ರತೆಯನ್ನು ಖಾತರಿಪಡಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದರು.

ದೇಶದ ಏಕತೆಗಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ತ್ಯಾಗ ಮಾಡಿದ್ದಾರೆ ಎಂದು ಹೇಳಿರುವ ವೇಣುಗೋಪಾಲ್, ಯಾತ್ರೆ ಮತ್ತು ರಾಹುಲ್ ಗಾಂಧಿ ಅವರು ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದಾಗ ಉತ್ತಮ ಭದ್ರತೆ ಕಲ್ಪಿಸಬೇಕು ಎಂದು ಕೋರಿದ್ದಾರೆ. ಜನವರಿ 3ರಿಂದ ಆರಂಭವಾಗುವ ಭಾರತ್ ಜೋಡೊ ಯಾತ್ರೆಯ ಮುಂದಿನ ಹಂತದಲ್ಲಿ ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮ ರಾಜ್ಯಗಳನ್ನು ಪ್ರವೇಶಿಸುತ್ತದೆ. ಈ ಸಂಬಂಧ, ಝೆಡ್ ಪ್ಲಸ್ ಭದ್ರತೆಯಿರುವ ರಾಹುಲ್ ಗಾಂಧಿ ಅವರ ಸುರಕ್ಷತೆ ಹಾಗೂ ಭದ್ರತೆಯನ್ನು ಖಾತರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆಯೂ ಅವರು ಮನವಿ ಮಾಡಿದ್ದರು.

ಇನ್ನೊಂದೆಡೆ, ಮಾಧ್ಯಮಗಳ ಜತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಯಾತ್ರೆಯನ್ನು ನಿಲ್ಲಿಸಲು ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದರು. ‘‘ಯಾತ್ರೆಗೆ ಕಳಂಕ ಅಂಟಿಸುವ ಪ್ರಯತ್ನಗಳು ನಡೆಯುತ್ತಿವೆ. ಅದನ್ನು ಹಾಳುಗೆಡವಲು ತಮ್ಮ ಪೊಲೀಸರ ಮೂಲಕ ಪ್ರಯತ್ನಿಸುತ್ತಿದ್ದಾರೆ. ಅವರು ಸಫಲರಾಗುವುದಿಲ್ಲ’’ ಎಂದು ಖೇರಾ ಹೇಳಿದ್ದಾರೆ.

ಆನಂತರ ನಂತರ ಸಿಆರ್‌ಪಿಎಫ್ ಕಡೆಯಿಂದ, ಭದ್ರತಾ ಮಾರ್ಗಸೂಚಿ ಉಲ್ಲಂಘನೆ ಬಗೆಗಿನ ಮಾಹಿತಿ ಹೊರಬಿದ್ದಿದೆ. ಅದು ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದು, ಮಾರ್ಗಸೂಚಿಗಳ ಪ್ರಕಾರ ರಾಹುಲ್ ಗಾಂಧಿಗೆ ಸಂಪೂರ್ಣ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ದಿಲ್ಲಿಯಲ್ಲಿ ಭಾರತ್ ಜೋಡೊ ಯಾತ್ರೆಯ ಮಾರ್ಗಸೂಚಿಗಳನ್ನು ಕಾಂಗ್ರೆಸ್ ನಾಯಕ ಉಲ್ಲಂಘಿಸಿದ್ದಾರೆ ಎಂದಿದೆ.

ಭಾರತ್ ಜೋಡೊ ಯಾತ್ರೆ ಶನಿವಾರ ದಿಲ್ಲಿ ಪ್ರವೇಶಿಸಿದಾಗಿನಿಂದ ಹಲವಾರು ಬಾರಿ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂಬುದು ಕಾಂಗ್ರೆಸ್ ಆರೋಪವಾಗಿತ್ತು. ಆದರೆ, ಕಾಂಗ್ರೆಸ್ ಯಾತ್ರೆಯು ದಿಲ್ಲಿ ಪ್ರವೇಶಿಸುವ ಎರಡು ದಿನಗಳ ಮೊದಲು ಸಮಾಲೋಚಿಸಿ ಎಲ್ಲಾ ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ ಮತ್ತು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾಗಿ ಸಿಆರ್‌ಪಿಎಫ್ ಹೇಳಿದೆ.

ಮಾರ್ಗಸೂಚಿಗಳ ಪ್ರಕಾರ ರಾಹುಲ್ ಗಾಂಧಿಗೆ ಭದ್ರತಾ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಮಾಡಲಾಗಿದೆ. ಆದರೆ ಹಲವಾರು ಸಂದರ್ಭಗಳಲ್ಲಿ, ರಾಹುಲ್ ಗಾಂಧಿಯವರ ಕಡೆಯಿಂದ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆಯಾಗಿದೆ. ಮತ್ತು ಅದರ ಬಗ್ಗೆ ಕಾಲಕಾಲಕ್ಕೆ ಅವರಿಗೆ ತಿಳಿಸಲಾಗಿತ್ತು ಎಂದು ಸಿಆರ್‌ಪಿಎಫ್ ಹೇಳಿದೆ. 2020ರಿಂದ 113 ಭಾರಿ ಭದ್ರತಾ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂಬುದು ಸಿಆರ್‌ಪಿಎಫ್ ಆರೋಪ.

ಡಿಸೆಂಬರ್ 24ರಂದು ದಿಲ್ಲಿಯನ್ನು ಪ್ರವೇಶಿಸಿದಾಗಿನಿಂದ ಯಾತ್ರೆಯ ಭದ್ರತೆಯಲ್ಲಿ ಹಲವಾರು ಬಾರಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ದಿಲ್ಲಿ ಪೊಲೀಸರು ಹೆಚ್ಚು ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಮತ್ತು ರಾಹುಲ್ ಗಾಂಧಿಯವರ ಸುತ್ತ ಪರಿಧಿಯನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಹೇಳಿದ್ದರೆ, ಈಗ ಸಿಆರ್‌ಪಿಎಫ್ ರಾಹುಲ್ ಅವರಿಂದಲೇ ಬಹಳ ಸಲ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂದು ತಿರುಗಿ ಹೇಳಿದೆ.

Similar News