ಒಡಿಶಾದಲ್ಲಿ ಇಬ್ಬರು ರಶ್ಯನ್‌ ಪ್ರಜೆಗಳ ನಿಗೂಢ ಸಾವಿನ ಬೆನ್ನಲ್ಲೇ ಇನ್ನೋರ್ವ ಪ್ರಜೆ ನಾಪತ್ತೆ

Update: 2022-12-31 08:52 GMT

ಭುಬನೇಶ್ವರ್: ಇತ್ತೀಚೆಗೆ ಒಡಿಶಾದ ರಾಯಗಢ ಜಿಲ್ಲೆಯ ಹೋಟೆಲ್‌ ಒಂದರಲ್ಲಿ ಇಬ್ಬರು ರಶ್ಯನ್‌ ಪ್ರಜೆಗಳ ನಿಗೂಢ ಸಾವಿನ ಬೆನ್ನಲ್ಲೇ ರಾಜ್ಯದಲ್ಲಿ ಇನ್ನೋರ್ವ ರಶ್ಯನ್‌ ಪ್ರಜೆ ನಾಪತ್ತೆಯಾಗಿರುವ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ.

ತಾವು ಉಕ್ರೇನ್‌ ಮೇಲೆ ರಷ್ಯಾದ ಯುದ್ಧದ ವಿರುದ್ಧ ಹಾಗೂ ತನಗೆ ಸಹಾಯ ಬೇಕಿದೆ ಎಂಬ ಪೋಸ್ಟರ್‌ ಕೈಯ್ಯಲ್ಲಿ ಹಿಡಿದುಕೊಂಡು ಕಾಣಿಸಿಕೊಂಡಿದ್ದ ರಷ್ಯನ್‌ ಪ್ರಜೆಯೊಬ್ಬ ನಂತರ ಭುಬನೇಶ್ವರ ರೈಲು ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆಂದು ಎಂದು timesofindia ವರದಿ ಮಾಡಿದೆ.

"ನಾನೊಬ್ಬ ರಶ್ಯನ್ ನಿರಾಶ್ರಿತ. ನಾನು ಯುದ್ಧ ಹಾಗೂ ಪುಟಿನ್‌ ವಿರುದ್ಧ. ನಾನು ನಿರ್ಗತಿಕ, ದಯವಿಟ್ಟು ಸಹಾಯ ಮಾಡಿ," ಎಂದು ರಶ್ಯಾದ ಪಾಸ್‌ಪೋರ್ಟ್‌ ಹೊಂದಿದ್ದ ಸುಮಾರು 60 ವರ್ಷದ ವ್ಯಕ್ತಿಯೊಬ್ಬ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದ.

ಆದರೆ ಪೊಲೀಸರು ಸ್ಥಳಕ್ಕಾಗಮಿಸಿದಾಗ ಆತ ಅಲ್ಲಿರಲಿಲ್ಲ. ಕೆಲವರು ಅದಾಗಲೇ ಆತನ ಫೋಟೋ ಕ್ಲಿಕ್ಕಿಸಿದ್ದರಿಂದ ಪೊಲೀಸರು ಈಗ ಆತನಿಗಾಗಿ ಶೋಧಿಸುತ್ತಿದ್ದಾರೆ.

ಆತನ ಕುರಿತು ಸ್ಥಳೀಯ ಹೋಟೆಲ್‌ಗಳಲ್ಲಿ ಪರಿಶೀಲಿಸಿ ಆತನನ್ನು ಪತ್ತೆಹಚ್ಚಲು ಯತ್ನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆತನಲ್ಲಿದ್ದ ಪಾಸ್‌ಪೋರ್ಟ್‌ ಮತ್ತು ವೀಸಾ ಮಾನ್ಯವಾಗಿದೆ. ಕೆಲ ಸಮಯದ ಹಿಂದೆಯೂ ಆತ ಇದೇ ರೀತಿ ಕಾಣಿಸಿಕೊಂಡಾಗ ಪರಿಶೀಲಿಸಲಾಗಿತ್ತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಡಿಶಾದ  ರಾಯಗಢ ಪ್ರಾಂತ್ಯದ ಹೋಟೆಲ್ ಒಂದರ ಮೂರನೇ ಮಹಡಿಯ ಕಿಟಿಕಿಯಿಂದ ನಿಗೂಢವಾಗಿ ಕೆಳಕ್ಕೆ ಬಿದ್ದು ಇತ್ತೀಚೆಗೆ ರಷ್ಯಾದ ನಾಗರಿಕ ಪವೆಲ್ ಅಂಟೋವ್ (65) ಎಂಬವರು ಮೃತಪಟ್ಟಿರುವ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವೊದಗಿಸಿತ್ತು. ತಮ್ಮ 66ನೇ ಹುಟ್ಟುಹಬ್ಬ ಆಚರಣೆಗೆಂದು ಪವೆಲ್ ಅಲ್ಲಿಗೆ ಆಗಮಿಸಿದ್ದರು. ಡಿಸೆಂಬರ್ 22 ರಂದು ಅದೇ ಹೋಟೆಲ್‌ನಲ್ಲಿದ್ದ ಹಾಗೂ ಅಂಟೊವ್ ಜೊತೆ ಪ್ರವಾಸದಲ್ಲಿದ್ದ ವ್ಲಾದಿಮಿರ್ ಬಿಡೆನೊವ್ (62) ಮೃತಪಟ್ಟಿದ್ದರು.

ಇದನ್ನೂ ಓದಿ: ಕೆಎಂಎಫ್-ಅಮುಲ್‌ ಒಂದಾಗುವ ಸುಳಿವು ಕೊಟ್ಟ ಅಮಿತ್‌ ಶಾ: 'ನಂದಿನಿ‌ ಉಳಿಸಿ' ಅಭಿಯಾನ ಆರಂಭಿಸಿದ ಕನ್ನಡಿಗರು

Similar News