ನನ್ನ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಲು ಬಿಜೆಪಿ ಸರಕಾರ ಯತ್ನ: ರಾಹುಲ್ ಗಾಂಧಿ

Update: 2022-12-31 08:37 GMT

ಹೊಸದಿಲ್ಲಿ: "ನಾನು ಯಾತ್ರೆಯ ಸಮಯದಲ್ಲಿ ಭದ್ರತಾ ಪ್ರೋಟೋಕಾಲ್ ಉಲ್ಲಂಘಿಸಿದ್ದೇನೆ ಎಂದು  ಭದ್ರತಾ ಪಡೆಗಳಿಂದ  ಪದೇ ಪದೇ ಹೇಳಿಕೆ ಕೊಡಿಸುವ ಮೂಲಕ ಬಿಜೆಪಿ ನೇತೃತ್ವದ ಸರಕಾರವು ವಿನಾಕಾರಣ ನನ್ನ ವಿರುದ್ಧ ಪ್ರಕರಣವನ್ನು ದಾಖಲಿಸಲು ಪ್ರಯತ್ನಿಸುತ್ತಿದೆ'' ಎಂದು 'ಭಾರತ್ ಜೋಡೋ ಯಾತ್ರೆ' ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

"ನೀವು ಬುಲೆಟ್ ಪ್ರೂಫ್ ವಾಹನದಲ್ಲಿ ಹೋಗುತ್ತೀರಿ ಎಂದು ಗೃಹ ಸಚಿವಾಲಯ ಹೇಳುತ್ತಿದೆ. ನಾನು ಅದನ್ನು ಹೇಗೆ ಮಾಡಲಿ? ನಾನು ಯಾತ್ರೆಗೆ ಕಾಲ್ನಡಿಗೆಯಲ್ಲಿ ನಡೆಯಬೇಕು.. ಭದ್ರತೆಗಾಗಿ ಏನು ಮಾಡಬೇಕೆಂದು ಅವರಿಗೆ ತಿಳಿದಿದೆ, ಅವರು ಸಮಸ್ಯೆಯನ್ನು ಗುರುತಿಸುತ್ತಿದ್ದಾರೆ," ಎಂದು ರಾಹುಲ್ ಗಾಂಧಿ ಹೇಳಿದರು.

ಯಾತ್ರೆಯು ದ್ವೇಷದ ವಿರುದ್ಧ ರಾಷ್ಟ್ರವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ಪುನರುಚ್ಚರಿಸಿದ ರಾಹುಲ್. "ಇದು ನಮಗೆ ಯಶಸ್ವಿ ಯಾತ್ರೆಯಾಗಿದೆ. ಇದು ಬಹಳಷ್ಟು ಫಲಿತಾಂಶಗಳನ್ನು ಸಾಧಿಸಿದೆ .  ನಿರುದ್ಯೋಗ ಸಮಸ್ಯೆಗಳು ಹಾಗೂ ಬೆಲೆ ಏರಿಕೆಯ ಸಮಸ್ಯೆಗಳು ಜನರಿಂದ ವ್ಯಕ್ತವಾಗಿದೆ.  ದೇಶ "ಹೊಸದಾಗಿ ಯೋಚಿಸುವ ಮಾರ್ಗ ನೀಡಲು ಪ್ರಯತ್ನಿಸುತ್ತಿದ್ದೇನೆ’ ಎಂದರು.

ತಮ್ಮ ಪಾದಯಾತ್ರೆಯಲ್ಲಿ ಬಿಜೆಪಿಯವರ ಗೇಲಿಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಬಿಜೆಪಿ ಬಹಳಷ್ಟು ಪ್ರಚಾರಗಳನ್ನು ಮಾಡುತ್ತದೆ, ಆದರೆ  ಅವರಿಗೆ"ಸತ್ಯದೊಂದಿಗೆ  ಹೋರಾಡಲು ಸಾಧ್ಯವಿಲ್ಲ" ಎಂದು ಹೇಳಿದರು.

"ಅವರ ಬಳಿ ಸಾಕಷ್ಟು ಹಣವಿದೆ.  ಆದರೆ ನೀವು ಏನು ಮಾಡಿದರೂ ನೀವು ಸತ್ಯದೊಂದಿಗೆ ಹೋರಾಡಲು ಸಾಧ್ಯವಿಲ್ಲ.  ಯಾವುದೇ ಪೂರ್ವಭಾವಿ ಕಲ್ಪನೆಯಿಲ್ಲದೆ  ಯಾತ್ರೆ ಆರಂಭಿಸಿದ್ದೇನೆ. ಈ ಪ್ರಯಾಣದಿಂದ ಬಹಳಷ್ಟು ಕಲಿತಿರುವೆ’’ ಎಂದರು.

Similar News