40 ವರ್ಷಗಳಿಂದ ಸ್ವಚ್ಛತಾ ಕಾರ್ಮಿಕಳಾಗಿ ಕೆಲಸ ಮಾಡಿದ್ದ ಚಿಂತಾದೇವಿ ಗಯಾದ ಉಪ ಮೇಯರ್ ಆಗಿ ಆಯ್ಕೆ

Update: 2022-12-31 09:56 GMT

ಪಾಟ್ನಾ: ಕಳೆದ 40 ವರ್ಷಗಳಿಂದ ಸ್ವಚ್ಛತಾ ಕಾರ್ಮಿಕಳಾಗಿ ಕೆಲಸ ಮಾಡಿದ್ದ ಚಿಂತಾದೇವಿ ಅವರು ಇತ್ತೀಚೆಗೆ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ  ಗಯಾದ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಹಾರದ ಗಯಾ ಇತಿಹಾಸ ನಿರ್ಮಿಸಿದೆ.

ಆದಾಗ್ಯೂ, ಗಯಾಗೆ ಇಂತಹ ಮೈಲಿಗಲ್ಲು ಹೊಸದಲ್ಲ. ವೃತ್ತಿಯಲ್ಲಿ ಕಲ್ಲು ಪುಡಿ ಮಾಡುವ ಕೆಲಸ ಮಾಡುವ   ಅತ್ಯಂತ ಅಂಚಿನಲ್ಲಿರುವ ಮುಸಾಹರ್ ಸಮುದಾಯದ ಮಹಿಳೆ ಭಗವತಿ ದೇವಿ ಅವರು 1996 ರಲ್ಲಿ ಗಯಾ ಕ್ಷೇತ್ರದಿಂದ ನಿತೀಶ್ ಕುಮಾರ್ ಅವರ ಜನತಾ ದಳ (ಸಂಯುಕ್ತ) ದಿಂದ ಲೋಕಸಭೆಗೆ ಚುನಾಯಿತರಾಗಿದ್ದರು.

"ಗಯಾ ಜನರು ಜ್ಞಾನೋದಯವನ್ನು ಬಯಸುವ ಸ್ಥಳವಾಗಿದೆ ಹಾಗೂ  ಇದು ಮುಸಾಹರ್ ಮಹಿಳೆ ಲೋಕಸಭೆಗೆ ಕಳುಹಿಸಿರುವ ಸ್ಥಳವಾಗಿದೆ. ಈ ಬಾರಿ ಇಲ್ಲಿನ ಜನರು ಚಿಂತಾದೇವಿಯನ್ನು ಆಯ್ಕೆ ಮಾಡುವ ಮೂಲಕ ಬಹುಶಃ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಚಿಂತಾದೇವಿ ಇಲ್ಲಿ ಕೆಲವು ಶೌಚಾಲಯಗಳಿದ್ದಾಗ ಸ್ವಚ್ಛತಾ  ಸಿಬ್ಬಂದಿಯಾಗಿ ತಲೆಯ ಮೇಲೆ ಮಾನವ ಮಲವನ್ನು ಹೊತ್ತುಕೊಂಡು ಹೋಗಿದ್ದರು.  ಈ ಆಯ್ಕೆಯು ಐತಿಹಾಸಿಕವಾಗಿದೆ " ಎಂದು ಗಯಾದ ಮೇಯರ್ ಆಗಿ ಆಯ್ಕೆಯಾದ ಗಣೇಶ್ ಪಾಸ್ವಾನ್ ಹೇಳಿದ್ದಾರೆ.

ಚಿಂತಾದೇವಿ ಅವರು ಸ್ವಚ್ಛತಾ  ಕಾರ್ಯಕರ್ತೆಯಾಗಿ ಹಾಗೂ  ತರಕಾರಿ ಮಾರಾಟಗಾರರಾಗಿಯೂ ಕೆಲಸ ಮಾಡಿದ್ದಾರೆ.

ಚಿಂತಾ ದೇವಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ನಗರದ ಜನತೆ ದೀನದಲಿತರನ್ನು ಬೆಂಬಲಿಸಿ, ಸಮಾಜದಲ್ಲಿ ಮುಂದೆ ಕೊಂಡೊಯ್ಯುವ ಕೆಲಸ ಮಾಡುತ್ತಾರೆ ಎಂದು ಮಾಜಿ ಉಪ ಮೇಯರ್ ಮೋಹನ್ ಶ್ರೀವಾಸ್ತವ ಹೇಳಿದ್ದಾರೆ.

Similar News