×
Ad

ಉಡುಪಿ ನಗರಸಭೆಯ ಸಾಮಾನ್ಯ ಸಭೆ: ಕುಡ್ಸೆಂಪ್‌ನ ವಾರಾಹಿ ಕಾಮಗಾರಿ ನಿರ್ವಹಣೆಗೆ ಸದಸ್ಯರ ತೀವ್ರ ಅಸಮಾಧಾನ

Update: 2022-12-31 19:54 IST

ಉಡುಪಿ: ಕುಡ್ಸೆಂಪ್ ನಿರ್ವಹಿಸುತ್ತಿರುವ ವಾರಾಹಿ ಕಾಮಗಾರಿ  ಕಾರ್ಯನಿರ್ವಹಣೆ ಕುರಿತಂತೆ ಶಾಸಕ ಕೆ.ರಘುಪತಿ ಭಟ್ ಸೇರಿದಂತೆ ನಗರಸಭೆಯ ಸದಸ್ಯರು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ವಾರ್ಡಿಗೆ ನೀರಿನ ಸಂಪರ್ಕ ಕಲ್ಪಿಸಿ ಹಲವು ತಿಂಗಳು ಕಳೆದರೂ ಇನ್ನೂ ನೀರು ಪೂರೈಕೆ ಪ್ರಾರಂಭಗೊಂಡಿಲ್ಲ ಎಂದು ಈ ಸಂದರ್ಭದಲ್ಲಿ ಅನೇಕ ಸದಸ್ಯರು ದೂರಿದರು.

ಸುಮಿತ್ರಾ ಆರ್. ನಾಯಕ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಉಡುಪಿ ನಗರಸಭೆಯ ವರ್ಷದ ಕೊನೆಯ  ಸಾಮಾನ್ಯ ಸಭೆಯಲ್ಲಿ ವಾರಾಹಿ ಸೇರಿದಂತೆ ಅನೇಕ ವಿಷಯಗಳ ಕುರಿತು ಸದಸ್ಯರು ಪ್ರಸ್ತಾಪಿಸಿದರು.

ಸದಸ್ಯ ಸುಂದರ್ ಕಲ್ಮಾಡಿ ವಿಷಯ ಪ್ರಸ್ತಾವಿಸಿ, ನಮ್ಮ ವಾರ್ಡ್ ವ್ಯಾಪ್ತಿ ಯಲ್ಲಿ ನಾಗರಿಕರಿಗೆ ನೀರಿನ ಸಂಪರ್ಕ ಕಲ್ಪಿಸಿ ಹಲವು ತಿಂಗಳು ಕಳೆದರೂ ಇನ್ನೂ ನೀರು ಪೂರೈಕೆಯಾಗುತ್ತಿಲ್ಲ ಎಂದು ದೂರಿದರು. ಅಶೋಕ್ ನಾಯ್ಕ್ ಮಂಚಿಕೆರೆ ಮಾತನಾಡಿ ಇಂದ್ರಾಳಿಯ ಓವರ್‌ಹೆಡ್ ಟ್ಯಾಂಕ್ ಸೋರುತ್ತಿದೆ ಎಂದು ದೂರಿದರು. 

ಇವುಗಳಿಗೆ ಪ್ರತಿಕ್ರಿಯಿಸಿದ ಶಾಸಕ ಭಟ್, ವಾರಾಹಿ ಕಾಮಗಾರಿ ಸಂಬಂಧಿಸಿ ಪ್ರತ್ಯೇಕ ಸಮಿತಿಯಿಂದ ಪರಿಶೀಲನೆಯಾಗಲಿ. ಟ್ಯಾಂಕ್, ಮೀಟರ್ ಸಂಪರ್ಕದ ಬಗ್ಗೆ ಎಂಐಟಿ ಎಂಜಿನಿಯರಿಂಗ್ ವಿಭಾಗ ಮತ್ತು ನಗರಸಭೆ ಎಇಇ ಅವರನ್ನು ಒಳಗೊಂಡು ಸಮಿತಿ ಪರಿಶೀಲನೆ ನಡೆಸಿ ವರದಿ ಕೊಡಬೇಕು ಎಂದರು.

ಸಭೆಯಲ್ಲಿ ಸಮಿತಿ ನೇಮಕಕ್ಕೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

 ಸತತವಾಗಿ ಆಗ್ರಹಿಸುತಿದ್ದರೂ ಅಂಬಾಗಿಲು- ಗುಂಡಿಬೈಲು- ಕಲ್ಸಂಕ ಮಾರ್ಗದಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಆರ್‌ಟಿಓ ಅವರು ಇದಕ್ಕೆ ಉತ್ತರ ನೀಡುವಂತೆ ಆಗ್ರಹಿಸಿದರು. ಕುಂದಾಪುರ, ಬ್ರಹ್ಮಾವರ, ಕಲ್ಯಾಣಪುರ ಕಡೆಯಿಂದ ಬರುವ ಸರ್ವಿಸ್ ಬಸ್‌ಗಳು ಅಂಬಾಗಿಲು- ಗುಂಡಿಬೈಲ್ ಮೂಲಕ ಸಂಚರಿಸುವಂತೆ ಸರ್ವಿಸ್ ಬಸ್‌ಗಳಿಗೆ ಸೂಚನೆ ನೀಡಿದರೂ, ಅಲ್ಲಿ ಪ್ರಯಾಣಿಕರಿರುವುದಿಲ್ಲ ಎಂದು  ನೇರವಾಗಿ ಹೆದ್ದಾರಿಯಲ್ಲೇ ತೆರಳುತ್ತಿವೆ ಎಂದರು.

ಈ ಕುರಿತು ಆರ್‌ಟಿಓ ಪ್ರತಿಕ್ರಿಯಿಸಿದ ಆರ್‌ಟಿಓ, ಇದಕ್ಕೆ ಸಂಬಂಧಿಸಿದಂತೆ  ವಾರದ ಕೆಳಗೆ ನೋಟೀಸು ನೀಡಿದ್ದೇನೆ. ಅವರದಕ್ಕೆ ಯಾವುದೇ ಸ್ಪಂದನೆ ನೀಡಿಲ್ಲ. ಇದೀಗ ಶೋಕಾಸ್ ನೋಟೀಸ್ ನೀಡಿ ಒಂದು ವಾರದಲ್ಲಿ ಸಮರ್ಪಕ ಉತ್ತರ ಬಾರದಿದ್ದರೆ ಆರು ತಿಂಗಳಿಗೆ ಅವುಗಳ ಪರವಾನಿಗೆಯನ್ನು ರದ್ದುಪಡಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಅವರಿಗೆ ಇಂಥ ರೂಟ್‌ಗಳಲ್ಲಿ ಹೋಗಿ ಎಂದು ನಾವು ಬಲವಂತ ಪಡಿಸುವಂತಿಲ್ಲ. ನಮಗೆ ಅರ್ಜಿ ಹಾಕಿದ ವಾಹನಗಳಿಗೆ ಕೇವಲ ಪರವಾನಿಗೆ ನೀಡುವ ಅಧಿಕಾರ ಮಾತ್ರವಿದೆ ಎಂದರು. ಹೊಸ ಪರ್ಮಿಟ್ ನೀಡುವಾಗ ಹಾಗೂ ನರ್ಮ್ ಬಸ್‌ಗಳಿಗೆ ಪರವಾನಿಗೆಗೆ ಬಂದಾಗ ಗುಂಡಿಬೈಲ್- ಅಂಬಾಗಿಲು ರೂಟ್‌ನಲಿ ಓಡಿಸಲು ಸೂಚಿಸಿ ಎಂದು ಶಾಸಕರು ಸಲಹೆ ನೀಡಿದರು.

ನಗರ ಭಾಗದಲ್ಲಿ ಒಳರೂಟ್‌ಗಳಿಗೆ ಸೂಕ್ತ ಬಸ್ ಸೌಕರ್ಯ ಕಲ್ಪಿಸುವಂತೆ ನಗರಸಭೆ ಸರ್ವ ಸದಸ್ಯರು ಆಗ್ರಹಿಸಿದ್ದು, ಬಸ್ ಸಂಚಾರ ಇಲ್ಲದ ಒಳರೂಟ್‌ನಲ್ಲಿ ನರ್ಮ್ ಬಸ್ ಸಂಚಾರ ಮಾಡಲು ಆರ್‌ಟಿಒ ಮತ್ತು ಕೆಎಸ್‌ಆರ್‌ಟಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಸೂಚಿಸಿದರು.

ಸದಸ್ಯ ಪ್ರಭಾಕರ ಪೂಜಾರಿ ಮಾತನಾಡಿ, ಕಲ್ಸಂಕ-ಅಂಬಾಗಿಲು  ಕಡೆಗೆ ಸಂಚರಿಸುವ ಸಿಟಿ ಬಸ್‌ಗಳು ಒಳ ರಸ್ತೆಗೆ ಬರುವುದಿಲ್ಲ ಮತ್ತು ಬಹುತೇಕ ಬಸ್‌ಗಳು ಟ್ರಿಪ್‌ಗಳನ್ನು ಕಡಿತಗೊಳಿಸಿ ಈ ಭಾಗದಲ್ಲಿ ಓಡಾಟವನ್ನೇ ನಿಲ್ಲಿಸಿವೆ ಎಂದರು. ಈಗಾಗಲೇ ಬಸ್ ಮಾಲಕರಿಗೆ ಎಚ್ಚರಿಕೆ ಸೂಚನೆ ನೀಡಿದ್ದು, ಬಸ್‌ಗಳು ರೂಟ್ ನಿಯಮಾವಳಿ ಉಲ್ಲಂಘಿಸಿದ್ದನ್ನು ಪರಿಶೀಲಿಸಿ ನೋಟಿಸ್‌ನ್ನು ಕೊಟ್ಟಿದ್ದೇವೆ. ಇದಕ್ಕೂ ಸೂಕ್ತವಾಗಿ ಸ್ಪಂದಿಸದೇ ಹೋದಲ್ಲಿ ಶೋಕಾಸ್ ನೋಟಿಸ್ ನೀಡುವುದಾಗಿ ಆರ್‌ಟಿಓ ಅಧಿಕಾರಿ ತಿಳಿಸಿದರು. 

ರೂಟ್ ನಿಯಮ ಉಲ್ಲಂಘಿಸುವ ಬಸ್‌ಗಳ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಿ ಎಂದು ಆರ್‌ಟಿಒಗೆ ಸೂಚಿಸಿದ ಶಾಸಕರು ಬಸ್ ಸೌಕರ್ಯ ಇಲ್ಲದ ಭಾಗಕ್ಕೆ ಕೂಡಲೆ ಸರಕಾರಿ ನರ್ಮ್ ಬಸ್ ಓಡಿಸುವ ಬಗ್ಗೆ ಆರ್‌ಟಿಎ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಿದರು.

ನಗರದ ಬೀದಿ ದೀಪ ವ್ಯವಸ್ಥೆ, ಖಾಲಿ ಬಿದ್ದ ಸೈಟುಗಳು ಕಸದ ಕೊಂಪೆಯಾಗಿರುವುದು, ಬೀದಿ ನಾಯಿಗಳ ಕಾಟದ ಬಗ್ಗೆ ಪ್ರತೀಭಾರಿಯೂ ಚರ್ಚೆಯಾಗುತ್ತದೆ. ನಗರಸಭೆ ಆಡಳಿತ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯೆ ಅಮೃತಾ ಕೃಷ್ಣಮೂರ್ತಿ ದೂರಿದರು. ನಗರಾಭಿವೃದ್ಧಿ ಪ್ರಾಧಿಕಾರ ಅರ್ಜಿಗಳ ಸಮರ್ಪಕ ವಿಲೇವಾರಿ ಮಾಡದೇ ಜನರನ್ನು ಹಿಂಸಿಸುತ್ತಿದೆ ಎಂದು ಪ್ರಭಾಕರ್ ಪೂಜಾರಿ ಪ್ರಾಧಿಕಾರದ ಅಧಿಕಾರಿಗಳು, ಸಿಬಂದಿ ವಿರುದ್ದ ಹರಿಹಾಯ್ದರು. 

ಸರಕಾದ ವಿವಿಧ ಎಸ್ಸಿಎಸ್ಟಿ ಯೋಜನೆಗಳಿಗೆ ನಗರೋತ್ಥಾನಕ್ಕೆ ಸಂಬಂಧಿಸಿದ ಸೌಕರ್ಯಗಳ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸವಂತೆ ನಗರಸಭೆ ಸದಸ್ಯ ರಾಜು ವಿನಂತಿಸಿ, ಡಿ.31 ಇದಕ್ಕೆ ಕೊನೆಯ ದಿನಾಂಕವಾಗಿದ್ದು, ಬಹುತೇಕರು ಅರ್ಜಿ ಸಲ್ಲಿಸಿಲ್ಲ ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅವರು 10 ದಿನಗಳ ಕಾಲ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಪ್ರಾರಂಭದಲ್ಲಿ ನಗರದ ಮನೆಗಳ ಕೊಳಚೆ ನೀರಿನ ಸಂಸ್ಕರಣೆ ಹಾಗೂ ಇಂಗುಗುಂಡಿ ಕಾರ್ಯನಿರ್ವಹಣೆಯ ಕುರಿತಂತೆ ಜಿಪಂನ ವೀಣಾ ಪ್ರಭು ಪ್ರಾತ್ಯಕ್ಷಿಕೆ ನೀಡಿದರು. ಮನೆಯ ತ್ಯಾಜ್ಯದ ಬೂದು ನೀರು ಹಾಗೂ ಕಪ್ಪು ನೀರಿನ ನಿರ್ವಹಣೆ ಹೇಗೆ ಎಂಬ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿದರು.

ಉಡುಪಿ ನಗರಸಭೆಯ ಸ್ವಚ್ಛತಾ ರಾಯಭಾರಿಯಾಗಿ ಜೊಸೆಫ್ ರೆಬೆಲ್ಲೊರನ್ನು ನೇಮಿಸಲಾಗಿದೆ ಎಂದು ಅಧ್ಯಕ್ಷೆ ಸುಮಿತ್ರಾ ನಾಯಕ್ ಪ್ರಕಟಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಪೌರಾಯುಕ್ತ ಡಾ.ಉದಯ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Similar News