ಉಡುಪಿ ರಥಕ್ಕೆ ಚಾಲನೆ: 25 ದಿನಗಳ ಕಾಲ ಉಡುಪಿ, ದ.ಕ, ಉ.ಕ ಜಿಲ್ಲೆಯಲ್ಲಿ ಸಂಚಾರ

Update: 2022-12-31 15:04 GMT

ಉಡುಪಿ: ಉಡುಪಿ ದೇವಾಲಯಗಳ ನಾಡೆಂದು  ಖ್ಯಾತಿ ಪಡೆದಿದ್ದು, ಇದನ್ನು ಪ್ರವಾಸೋದ್ಯಮದಲ್ಲೂ ಮುಂಚೂಣಿಯ ಜಿಲ್ಲೆಯಾಗಿ ಅಭಿವೃದ್ಧಿ ಪಡಿಸಬೇಕಿದೆ. ಅವಿಭಜಿತ ದ.ಕ ಜಿಲ್ಲೆ ಈಗಾಗಲೇ ಸಹಕಾರಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದು, ಪ್ರವಾಸೋದ್ಯಮದ ಜೊತೆಗೆ ಕೈಗಾರಿಕೆಗಳೂ ಸ್ಥಾಪನೆಯಾದರೆ ಜಿಲ್ಲೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸದೃಢವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಉಡುಪಿ ಜಿಲ್ಲೆ ರಜತ ಮಹೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ‘ಉಡುಪಿ ರಜತ ಮಹೋತ್ಸವ ರಥ’ಕ್ಕೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. 

ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಉಡುಪಿ ಯಾವುದೇ ಉತ್ಸವ ಕೇವಲ ಆಚರಣೆಗೆ ಸೀಮಿತವಾಗದೆ ಪ್ರವಾಸೋದ್ಯಮ ಬೆಳೆಯಲು ಪೂರಕ ವಾತಾವರಣ ಸೃಷ್ಟಿ ಮಾಡಲು ಚಿಂತನೆ ನಡೆಸಲಾಗಿದೆ. ಉಡುಪಿ ಜಿಲ್ಲೆ ಆರಂಭಗೊಂಡು 25 ವರ್ಷಗಳು ಪೂರ್ಣಗೊಂಡಿದ್ದು, ರಜತಮಹೋತ್ಸವದ ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಸಂಸ್ಕೃತಿ, ಕಲೆ, ಪ್ರವಾಸೋಧ್ಯಮಸಹಿತ ವಿವಿಧತೆಯನ್ನು  ಪ್ರಚುರಪಡಿಸುವ ಸ್ತಬ್ಧಚಿತ್ರದ ಈ ರಥವು ಜನವರಿ ಕೊನೆವಾರ ನಡೆಯಲಿರುವ ಸಮಾರೋಪದ ತನಕ 25 ದಿನಗಳ ಕಾಲ ಕರಾವಳಿ ಮೂರು ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್,  ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೆಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮೈಸೂರು ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಉದಯ್ ಕುಮಾರ ಶೆಟ್ಟಿ, ಉಡುಪಿ, ದ.ಕ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಉಪಸ್ಥಿತರಿದ್ದರು.

ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.


 
ರಜತೋತ್ಸವ ರಥ:  ಆಕರ್ಷಕವಾದ ಉಡುಪಿ ರಜತೋತ್ಸವ ರಥದಲ್ಲಿ ಎದುರು ಉಡುಪಿ ಕೃಷ್ಣನ ಮೂರ್ತಿಯಿದೆ. ಜಿಲ್ಲೆಯ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ, ಹುಲಿವೇಷ, ಕಂಬಳ, ಆನೆ ಮೇಲೆ ಕುಳಿತ ಧೂಮಾವತಿ ದೈವ, ಮಟ್ಟುಗುಳ್ಳ, ಮೆಕ್ಕೆಕಟ್ಟೆ ಉರು ಸಹಿತ ಜಿಲ್ಲೆಯ ವಿಚಾರಗಳನ್ನು ಸಾರಲಾಗುತ್ತದೆ. 

ಇಂದಿನಿಂದ 25 ದಿನಗಳ ಕಾಲ ಉಡುಪಿ, ದ.ಕ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಈ ರಥ ಸಂಚಾರ ಮಾಡಿ ಜಿಲ್ಲೆಯ ಕಲೆ, ಪ್ರವಾಸೋದ್ಯಮದ ಬಗ್ಗೆ ಪ್ರಚಾರ ಮಾಡಲಿದೆ. ಜನ ಸೇರುವ ಸ್ಥಳಗಳಲ್ಲಿ ನಿಲ್ಲಿಸಿ ವಾಹನದಲ್ಲಿರುವ ಎಲ್.ಸಿ.ಡಿ ಸ್ಕ್ರೀನ್ ಮೂಲಕ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ವಿಡಿಯೋ ಪ್ರಸಾರ ಮಾಡುವ ವ್ಯವಸ್ಥೆ ಸಹ ಇದೆ. 


ಸಹಕಾರಿ ರಂಗದ ಸಹಕಾರ ರಜತೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಪ್ರವಾಸೋದ್ಯಮ ರಥ ವಿಶಿಷ್ಟ ಯೋಜನೆ. ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಕ್ಕೆ ಕಾರ್ಯಕ್ರಮ ಸೀಮಿತವಾಗದೇ ಪ್ರತಿ ಗ್ರಾಮ ಸಹಿತ ಹಳ್ಳಿಗಳಿಗೆ ಕಾರ್ಯಕ್ರಮ ತಲುಪಿಸುವ ಗುರಿ. ರಥಕ್ಕಾಗಿ ಆರ್ಥಿಕ ಮೂಲವನ್ನು ಸಹಕಾರಿ ಕ್ಷೇತ್ರವಾದ ಎಸ್‌ಸಿಡಿಸಿಸಿ ಒದಗಿಸಿಕೊಟ್ಟಿದ್ದು ಸಹಕಾರಿ ರಂಗ ನೀಡಿದ ಸಹಕಾರ ನಿಜಕ್ಕೂ ಮಾದರಿ. ಕರಾವಳಿ ಪ್ರಾಂತದಲ್ಲಿ ಈ ರಥ ಸಂಚರಿಸಿ ಜಿಲ್ಲೆಯ ಕ್ರೀಡೆ, ಕಲೆ, ದೈವ ದೇವರು, ಹಳ್ಳಿಗಾಡಿನ ಪ್ರವಾಸಿ ತಾಣಗಳನ್ನು ಪರಿಚಯಿಸುವ ಉದ್ದೇಶ. ಉಡುಪಿ ಪ್ರವಾಸೋದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆಂಬುದು ನಮ್ಮ ಗುರಿ.

ಕೂರ್ಮಾರಾವ್ ಎಂ, ಉಡುಪಿ ಜಿಲ್ಲಾಧಿಕಾರಿ

Similar News