ಉಕ್ರೇನ್ ವಿರುದ್ಧದ ಗೆಲುವು ಅನಿವಾರ್ಯ: ರಶ್ಯ

Update: 2022-12-31 16:55 GMT

ಮಾಸ್ಕೊ, ಡಿ.31: ಉಕ್ರೇನ್ ವಿರುದ್ಧದ ಗೆಲುವು ರಶ್ಯಕ್ಕೆ ಅನಿವಾರ್ಯವಾಗಿದೆ ಎಂದು ರಶ್ಯದ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು ಹೇಳಿದ್ದಾರೆ.

ಉಕ್ರೇನ್ ವಿರುದ್ಧದ ಹೋರಾಟದಲ್ಲಿ ರಶ್ಯ ಯೋಧರ ಸಾಹಸ ಶ್ಲಾಘನೀಯ ಎಂದವರು ಹೊಸ ವರ್ಷದ ಸಂದರ್ಭ ಯೋಧರಿಗೆ ಕಳುಹಿಸಿದ ಸಂದೇಶದಲ್ಲಿ ಹೇಳಿದ್ದಾರೆ.

10 ತಿಂಗಳಿಂದ ನಡೆಯುತ್ತಿರುವ ಕಾರ್ಯಾಚರಣೆಯ ಸಮಯದಲ್ಲಿ ಯುದ್ಧಭೂಮಿ ವೈಫಲ್ಯಕ್ಕಾಗಿ ಯುದ್ಧದ ಪರ ಧ್ವನಿ ಎತ್ತಿದ ವರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಶೊಯಿಗು, ಮುಂಚೂಣಿಯಲ್ಲಿನ ಪರಿಸ್ಥಿತಿ ಅತ್ಯಂತ ಕಷ್ಟಕರವಾಗಿದೆ ಎಂದಿದ್ದಾರೆ. ಉಕ್ರೇನ್ ಮತ್ತು ಪಶ್ಚಿಮದ ದೇಶಗಳು ರಶ್ಯವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ನಾವು ಹೊಸ ವರ್ಷವನ್ನು  ಕಷ್ಟಕರ ಮಿಲಿಟರಿ-ರಾಜಕೀಯ ಪರಿಸ್ಥಿತಿಯಲ್ಲಿ ಸ್ವಾಗತಿಸುತ್ತಿದ್ದೇವೆ.

ನಮ್ಮ ಅದ್ಭುತ ಇತಿಹಾಸ ಮತ್ತು ಮಹಾನ್ ಸಾಧನೆಗಳನ್ನು ಅಳಿಸಿ ಹಾಕಲು ಪ್ರಯತ್ನ ನಡೆಯುತ್ತಿದೆ. ಫ್ಯಾಸಿಸಂ ಮೇಲಿನ ವಿಜಯಶಾಲಿಗಳ ಸ್ಮಾರಕವನ್ನು ಕೆಡವಲು, ಯುದ್ಧಾಪರಾಧಿಗಳನ್ನು ಪೀಠದಲ್ಲಿ ಪ್ರತಿಷ್ಟಾಪಿಸಲು, ರಶ್ಯಕ್ಕೆ ಸಂಬಂಧಿಸಿದ ಎಲ್ಲವನ್ನೂ ನಾಶಗೊಳಿಸಲು ಪ್ರಯತ್ನ ನಡೆಯುತ್ತಿರುವ ಈ ಸಮಯದಲ್ಲಿ ನಮಗೆ ಗೆಲುವು ಅನಿವಾರ್ಯವಾಗಿದೆ ಎಂದವರು ಹೇಳಿದ್ದಾರೆ.

Similar News