ಉಪ್ಪಿನಂಗಡಿ | ರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಗೆ ಸಕಲ ಸಿದ್ದತೆ: ಶಾಸಕ ಸಂಜೀವ ಮಟಂದೂರು

Update: 2023-01-01 16:54 GMT

ಉಪ್ಪಿನಂಗಡಿ: ಸರಕಾರಿ ಕಾಲೇಜಿನ ಇತಿಹಾಸದಲ್ಲೇ ಅದರಲ್ಲೂ ಗ್ರಾಮೀಣ ಭಾಗದ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಮಟ್ಟದ  ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್  ಪಂದ್ಯಾಟವು  ಮುಂಬರುವ ಜನವರಿ 13 ರಿಂದ 17 ರ ವರೆಗೆ ನಡೆಯಲಿದ್ದು, ಈ ಬಗ್ಗೆ ಸಕಲ ಸಿದ್ದತೆಗಳೂ  ಭರದಿಂದ ನಡೆಯುತ್ತಿದೆ  ಎಂದು ಪುತ್ತೂರು ಶಾಸಕ ಸಂಜೀವ ಮಟಂದೂರು  ತಿಳಿಸಿದರು. 

ಅವರು ರವಿವಾರದಂದು ಕಾಲೇಜಿನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ  ಮಾತನಾಡುತ್ತಿದ್ದರು.

 ಇಡೀ ಭಾರತ ದೇಶದ ವಿವಿಧ  ವಿಶ್ವವಿದ್ಯಾನಿಲಯಗಳನ್ನು ಪ್ರತಿನಿಧಿಸುವ ಸುಮಾರು 84 ತಂಡಗಳು ಈಗಾಗಲೇ ಹೆಸರನ್ನು ನೋಂದಾಯಿಸಿಕೊಂಡಿದ್ದು, ಮತ್ತಷ್ಟು ಸಮಯಾವಕಾಶವನ್ನು ವಿಸ್ತರಿಸಿರುವುದರಿಂದ ಇನ್ನಷ್ಟು ತಂಡಗಳು ಸೇರ್ಪಡೆಗೊಂಡು ಸುಮಾರು 100 ತಂಡಗಳ ಭಾಗೀಧಾರಿಕೆಯನ್ನು ನಿರೀಕ್ಷಿಸಲಾಗಿದೆ. ಇದರಿಂದಾಗಿ ಸುಮಾರು 1500 ಮಂದಿ ಕ್ರೀಡಾಪಟುಗಳು ಈ ರಾಷ್ಟ್ರೀಯ ಪದ್ಯಾಂಟದಲ್ಲಿ ಭಾಗವಹಿಸಲಿದ್ದಾರೆ. ಆಗಮಿಸುವ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ತತ್ ಸಂಬಂಧಿತ  ಅಧಿಕಾರಿ ವರ್ಗಕ್ಕೆ ವಾಸ್ತವ್ಯ, ಅಭ್ಯಾಸ, ಊಟೋಪಚಾರ  ಸಹಿತ ಸಕಲ  ಆತಿಥ್ಯಕ್ಕೆ ವ್ಯವಸ್ಥೆಯನ್ನು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು. 

ಗ್ರಾಮೀಣ ಭಾಗದಲ್ಲಿ ನಡೆಯುವ ಈ ಕ್ರೀಡಾಕೂಟದಿಂದ ಈ ಊರಿಗೂ  ಒಂದು ಪ್ರಯೋಜನ ಲಭಿಸಲಿದ್ದು, ಈಗಾಗಲೇ ಕ್ರೀಡಾಕೂಟದ ನೆಲೆಯಲ್ಲಿ  ನಿರ್ಮಾಣವಾಗುತ್ತಿರುವ ವಿಶಾಲವಾದ ಕ್ರೀಡಾಂಗಣದಲ್ಲಿ  ಎಲ್ಲಾ ಬಗೆಯ ಕ್ರೀಡೆಗಳಿಗೆ ಅವಕಾಶ ಒದಗಿಸಿದಂತಾಗುತ್ತದೆ. ಮಾತ್ರವಲ್ಲದೆ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಈ ಭಾಗದಲ್ಲೂ ಯುವ ಪತ್ರಿಭೆಗಳು  ಮೂಡಿ ಬರಲು ಈ ಕ್ರೀಡಾಕೂಟ ಪ್ರೇರಣಾದಾಯಿಯಾಗಲಿದೆ. ಅದಕ್ಕಾಗಿಯೇ ಈ ಕ್ರೀಡಾಕೂಟವನ್ನು ವೀಕ್ಷಿಸಲು ಸಾರ್ವಜನಿಕರಿಗೆ  ಮುಕ್ತ ಅವಕಾಶ ನೀಡಲಾಗಿದೆ ಎಂದರು. 

ಭರದಿಂದ ನಡೆಯುತ್ತಿದೆ  ಕ್ರೀಡಾಂಗಣದ  ನಿರ್ಮಾಣ ಕಾರ್ಯ: 

ಕಾಲೇಜು ಆವರಣದಿಂದ ನೇತ್ರಾವತಿ ನದಿ ವರೆಗಿರುವ ಪ್ರದೇಶದಲ್ಲಿ ವಿಶಾಲವಾದ ಕ್ರೀಡಾಂಣಣವನ್ನು ನಿರ್ಮಿಸಲು ಕಳೆದ 2 ತಿಂಗಳಿಂದ ಸತತ ಪ್ರಯತ್ನಗಳು ನಡೆಯುತ್ತಿದ್ದು, ಶೇಕಡಾ 90 ರಷ್ಟು ಕಾರ್ಯಗಳು ಪೂರ್ಣಗೊಂಡಿದೆ. ಯೋಜನೆಯಂತೆ ಕ್ರೀಡಾಂಗಣ ವಿಶಾಲಗೊಂಡರೆ 400 ಮೀಟರ್ ಟ್ಯ್ರಾಕ್ ನಿರ್ಮಿಸಬಹುದಾಗಿದೆ ಎಂದರು.

ಕಾಲೇಜಿನ ಕ್ರೀಡಾ ನಿರ್ದೇಶಕ ಪ್ರವೀಣ ಕುಮಾರ್  ಹಾಗೂ ಇಂಟರ್ಶಿಫ್ ಆಧರಿತ ಕಾರ್ಯನಿರ್ವಹಿಸುತ್ತಿರುವ ವಿಜೇತ್ ಜೈನ್  ರವರ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶ್ರಮದಲ್ಲಿ ಕ್ರೀಡಾಂಗಣ ಅತ್ಯುತ್ತಮ ರೀತಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ  ಸುಬ್ಬಪ್ಪ ಕೈಕಂಬ, ಗ್ರಾಮ ಪಂಚಾಯತ್  ಅಧ್ಯಕ್ಷೆ ಉಷಾ ಮುಳಿಯ, ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕ ಪ್ರವೀಣ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿಯ ಹಾಗೂ ಸ್ವಾಗತ ಸಮಿತಿಯ ಸದಸ್ಯರಾದ ಸುದರ್ಶನ್,  ಸುನಿಲ್ ದಡ್ಡು, ಮಹಾಲಿಂಗೇಶ್ವರ ಭಟ್, ಗಂಗಾಧರ್, ಕೃಷ್ಣರಾಜ,  ಧನಂಜಯ, ಪ್ರಸಾದ್ ಭಂಡಾರಿ, ಕರ್ನಾಟಕ ಕ್ರೀಡಾ ರತ್ನ  ಪ್ರಶಸ್ತಿ ಪುರಸ್ಕೃತೆ ಜಯಲಕ್ಷ್ಮಿ ಉಪಸ್ಥಿತರಿದ್ದರು. 

Similar News