ಒಡಿಶಾದಲ್ಲಿ ಮತ್ತೊಬ್ಬ ರಶ್ಯನ್ ಪ್ರಜೆಯ ಮೃತದೇಹ ಪತ್ತೆ; ಎರಡು ವಾರಗಳ ಅಂತರದಲ್ಲಿ ಮೂವರ ನಿಗೂಢ ಸಾವು

Update: 2023-01-03 07:11 GMT

ಭುವನೇಶ್ವರ: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಟೀಕಾಕಾರ ಪಾವೆಲ್ ಆಂಟೋವ್ ಹಾಗೂ ಅವರ ಸ್ನೇಹಿತ ವ್ಲಾದಿಮಿರ್ ಬೈಡನೋವ್ ಅವರು ಒಡಿಶಾದ (Odisha) ರಾಯಗಢ ಹೋಟೆಲ್‌ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬೆನ್ನಿಗೇ ಮತ್ತೊಬ್ಬ ರಶ್ಯನ್ (Russian) ಪ್ರಜೆ ಜಗತ್‌ಸಿಂಗ್‌ಪುರ್ ಜಿಲ್ಲೆಯ ಪರಾದೀಪ್ ಬಂದರು ಬಳಿ ಸರಕು ಹಡಗಿನಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ಇದರಿಂದ ಎರಡು ವಾರಗಳ ಅಂತರದಲ್ಲಿ ಮೂವರು ರಶ್ಯನ್ ಪ್ರಜೆಗಳು ನಿಗೂಢ ಸಾವಿಗೀಡಾದಂತಾಗಿದೆ.

ಸಾವಿಗೀಡಾಗಿರುವ ವ್ಯಕ್ತಿಯನ್ನು ಸೆರ್ಗಿ ಮಿಲ್ಯಕೋವ್ (51) ಎಂದು ಗುರುತಿಸಿರುವ ಪೊಲೀಸರು, ಆತ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಗತ್‌ಸಿಂಗ್‌ಪುರ್ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ವರ್ ಸಿಂಗ್, "ಸರಕು ಹಡಗಿನಲ್ಲಿದ್ದ ಪ್ರಯಾಣಿಕರ ಪೈಕಿ ಮೃತ ವ್ಯಕ್ತಿಯೂ ಸೇರಿದ್ದ ಎಂಬ ಸಂಗತಿ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೆ ಸಾವಿನ ಕಾರಣ ತಿಳಿಯಲಿದೆ. ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಹಡಗಿನಲ್ಲಿ ಪ್ರಯಾಣಿಸುವಾಗ ಆತ ದಿಢೀರ್ ಕುಸಿದು ಬಿದ್ದಿದ್ದಾನೆ. ಬಹುಶಃ ಆತ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರಬಹುದು" ಎಂದು ತಿಳಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ಮಿಲ್ಯಾಕೋವ್‌ರ ಮರಣೋತ್ತರ ಪರೀಕ್ಷೆಯನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗುವುದು ಮತ್ತು ಅವರ ದೇಹವನ್ನಲ್ಲದೆ ಕರುಳಿನ ಮಾದರಿಯನ್ನೂ ಸಂಗ್ರಹಿಸಿಟ್ಟುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಇದಕ್ಕೂ ಮುನ್ನ ಸಾವಿಗೀಡಾಗಿದ್ದ ಪಾವೆಲ್ ಅವರ ಕರುಳಿನ ಮಾದರಿ ಸಂಗ್ರಹವನ್ನಾಗಲಿ ಅಥವಾ ಮರಣೋತ್ತರ ಪರೀಕ್ಷೆಯ ವಿಡಿಯೊ ಚಿತ್ರೀಕರಣವನ್ನಾಗಲಿ ಮಾಡದೆ ಇದ್ದುದರಿಂದ ಒಡಿಶಾ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ಪಾವೆಲ್ ಮತ್ತು ಬ್ಯಾಡನೋವ್ ಮೃತ ದೇಹಗಳ ಅಂತ್ಯಕ್ರಿಯೆಯನ್ನು ಪೊಲೀಸರೇ ನೆರವೇರಿಸಿದ್ದರು.

ಇದನ್ನೂ ಓದಿ: 3000 ಕಿ.ಮೀ. ಕ್ರಮಿಸಿದ 'ಭಾರತ್ ಜೋಡೋ ಯಾತ್ರೆ'

Similar News