ಆಧಾರ್‌ ಕಾರ್ಡ್‌ದಾರರು ಈಗ ಆನ್‌ಲೈನ್‌ ಮೂಲಕ ವಿಳಾಸ ನವೀಕರಿಸಬಹುದು; ಇಲ್ಲಿದೆ ಮಾಹಿತಿ

Update: 2023-01-03 12:49 GMT

ಹೊಸದಿಲ್ಲಿ: ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಈಗ ಭಾರತೀಯ ನಾಗರಿಕರಿಗೆ ಆಧಾರ್‌ ಆನ್‌ಲೈನ್‌ ಮೂಲಕ ಕುಟುಂಬದ ಮುಖ್ಯಸ್ಥರ ಅನುಮತಿಯೊಂದಿಗೆ ತಮ್ಮ ವಿಳಾಸವನ್ನು ನವೀಕರಿಸಲು ಅನುವು ಮಾಡಿಕೊಟ್ಟಿದೆ ಎಂದು ಅಧಿಕೃತ ಹೇಳಿಕೆ ಮೂಲಕ ಇಂದು ತಿಳಿಸಲಾಗಿದೆ.

ಸಂಬಂಧದ ಪುರಾವೆಗಾಗಿ ದಾಖಲೆಗಳಾದ ರೇಷನ್‌ ಕಾರ್ಡ್‌, ಅಂಕಪಟ್ಟಿ, ವಿವಾಹ ಪ್ರಮಾಣಪತ್ರ, ಪಾಸ್‌ಪೋರ್ಟ್‌ ಇತ್ಯಾದಿಗಳನ್ನು ಸಲ್ಲಿಸಬೇಕು, ಅರ್ಜಿದಾರನ ಹೆಸರು, ಕುಟುಂಬ ಮುಖ್ಯಸ್ಥನ ಹೆಸರು ಮತ್ತು ಅವರ ನಡುವಿನ ಸಂಬಂಧವನ್ನು ಅರ್ಜಿಯಲ್ಲಿ ಉಲ್ಲೇಖಿಸಬೇಕಾಗುತ್ತದೆ. ಈ ಪ್ರಕ್ರಿಯೆಗಾಗಿ ಒಟಿಪಿ ಮೂಲಕ ದೃಢೀಕರಣವನ್ನು ಕುಟುಂಬದ ಮುಖ್ಯಸ್ಥರು ಮಾಡಬೇಕಾಗುತ್ತದೆ.

ಅರ್ಜಿದಾರ ಹಾಗೂ ಕುಟುಂಬದ ಮುಖ್ಯಸ್ಥನ ನಡುವಿನ ಸಂಬಂಧವನ್ನು ಪುಷ್ಠೀಕರಿಸುವ ದಾಖಲೆ ಲಭ್ಯವಿಲ್ಲದೇ ಇದ್ದರೆ ಪ್ರಾಧಿಕಾರದ ನಿರ್ದಿಷ್ಟ ಅರ್ಜಿ ನಮೂನೆಯಲ್ಲಿ ಕುಟುಂಬ ಮುಖ್ಯಸ್ಥ ಸ್ವಯಂ ಡಿಕ್ಲರೇಶನ್‌ ಸಲ್ಲಿಸಬೇಕಾಗುತ್ತದೆ.

ವಿವಿಧ ಕಾರಣಗಳಿಗಾಗಿ ಜನರು ತಮ್ಮ ವಾಸಸ್ಥಳಗಳನ್ನು ಬದಲಾಯಿಸುವ ಸಂದರ್ಭದಲ್ಲಿ ಆಧಾರ್‌ನಲ್ಲಿ ವಿಳಾಸ ನವೀಕರಿಸುವ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕ ಸುಲಭವಾಗಿ ಮಾಡಬಹುದಾಗಿದೆ ಎಂದು ಪ್ರಾಧಿಕಾರದ ಹೇಳಿಕೆ ತಿಳಿಸಿದೆ.

ವಿಳಾಸ ನವೀಕರಿಸುವ ಈ ಹೊಸ ಆಯ್ಕೆಯು ಈಗ ಇರುವ ಮಾನ್ಯವಾದ ವಿಳಾಸ ಸಂಬಂಧಿ ದಾಖಲೆ ಬಳಸಿ ವಿಳಾಸ ನವೀಕರಣ ಸವಲತ್ತಿಗೆ ಹೊರತಾಗಿದೆ. "ಈಗ ಒದಗಿಸಲಾಗಿರುವ ಹೊಸ ಆಯ್ಕೆಯಾಗಿ 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕ ಕುಟುಂಬ ಮುಖ್ಯಸ್ಥನಾಗಿ ತನ್ನ  ವಿಳಾಸವನ್ನು  ಆತ ಅಥವಾ ಆಕೆಯ ಸಂಬಂಧಿಗಳೊಂದಿಗೆ ಈ ಪ್ರಕ್ರಿಯೆ ಮೂಲಕ ಹಂಚಿಕೊಳ್ಳಬಹುದಾಗಿದೆ," ಎಂದು ಹೇಳಿಕೆ ತಿಳಿಸಿದೆ.

ಆನ್‌ಲೈನ್‌ ಮೂಲಕ ವಿಳಾಸ ನವೀಕರಣ ಮಾಡಲು ಬಯಸುವವರು ಮೈ ಆಧಾರ್‌ ವೆಬ್‌ ತಾಣಕ್ಕೆ ಭೇಟಿ ನೀಡಬಹುದಾಗಿದೆ.

ಈ ಸೇವೆ ಪಡೆದುಕೊಳ್ಳಬಯಸುವವರು ರೂ. 50 ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ. ಹಣ ಪಾವತಿ ನಂತರ ಸರ್ವಿಸ್‌ ರಿಕ್ವೆಸ್ಟ್‌ ನಂಬರ್‌ ಅವರಿಗೆ ದೊರೆಯುತ್ತದೆ ಹಾಗೂ ಕುಟುಂಬ ಮುಖ್ಯಸ್ಥನಿಗೆ ವಿಳಾಸ ನವೀಕರಣ ವಿನಂತಿ ಕುರಿತ ಎಸ್ಸೆಮ್ಮೆಸ್‌ ಕಳುಹಿಸಲಾಗುವುದು. ಈ ವಿನಂತಿಯನ್ನು ಆತ ಅಥವಾ ಆಕೆ  ಆಧಾರ್‌ ಪೋರ್ಟಲ್‌ಗೆ ಲಾಗಿನ್‌ ಮಾಡಿ 30 ದಿನಗಳೊಳಗೆ ಅನುಮತಿಸಬೇಕು. ಈ ಅವಧಿಯೊಳಗೆ ಒಪ್ಪಿಕೊಳ್ಳದೇ ಇದ್ದರೆ ಅಥವಾ ನಿರಾಕರಿಸದೇ ಇದ್ದರೆ, ವಿನಂತಿಯನ್ನು ಮುಚ್ಚಲಾಗುವುದು. ವಿಳಾಸ ನವೀಕರಣ ಅರ್ಜಿ ಸಲ್ಲಿಸಿದವರಿಗೆ ಅವರ ಅರ್ಜಿಗೆ ದೊರೆತ ಒಪ್ಪಿಗೆ, ನಿರಾಕರಣೆ ಅಥವಾ ವಿನಂತಿ ಮುಚ್ಚುಗಡೆ ಕುರಿತು ಎಸ್ಸೆಮ್ಮೆಸ್‌ ಮೂಲಕ ಮಾಹಿತಿ ನೀಡಲಾಗುವುದು.

ಇದನ್ನೂ ಓದಿ: 200 ವರ್ಷಗಳ ನಂತರ ಪ್ರಥಮ ಬಾರಿಗೆ ಶ್ರೀ ವರದರಾಜ ಪೆರುಮಾಳ್ ದೇವಸ್ಥಾನವನ್ನು ಪ್ರವೇಶಿಸಿದ ದಲಿತರು

Similar News