×
Ad

​ಜ.8ರಿಂದ ತುಳುಕೂಟದ 21ನೇ ಕೆಮ್ತೂರು ತುಳು ನಾಟಕ ಪರ್ಬ

Update: 2023-01-03 20:41 IST

ಉಡುಪಿ: ತುಳು ರಂಗಭೂಮಿಯಲ್ಲಿ ಸೃಜನಶೀಲ ಆಧುನಿಕ ರಂಗಪ್ರಜ್ಞೆಯ ಪ್ರಯೋಗಗಳು ಬರಬೇಕೆಂಬ ಸುದುದ್ದೇಶದಿಂದ 20 ವರ್ಷಗಳ ಹಿಂದೆ ಉಡುಪಿ ತುಳುಕೂಟದಿಂದ ಪ್ರಾರಂಭಗೊಂಡ ಕೆಮ್ತೂರು ದೊಡ್ಡಣಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆ ಈ ಬಾರಿ ಜ.8ರಿಂದ 14ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಒಟ್ಟು 14 ತುಳು ಹವ್ಯಾಸಿ ನಾಟಕ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದರೂ, ವೈವಿದ್ಯತೆಯ ಏಳು ತುಳು ನಾಟಕಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದರು.

ಜ.8ರಂದು ಸಂಜೆ 5:00ಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೆಮ್ತೂರು ತುಳು ನಾಟಕ ಸ್ಪರ್ಧೆಯನ್ನು ಉದ್ಘಾಟಿಸುವರು. ಜಯಕರ ಶೆಟ್ಟಿ ಇಂದ್ರಾಳಿ ಅವರ ಅಧ್ಯಕ್ಷತೆಯಲ್ಲಿ ಉದ್ಯಮಿಗಳಾದ ಯಶ್ಪಾಲ್ ಸುವರ್ಣ, ಪ್ರಸಾದ್‌ರಾಜ್ ಕಾಂಚನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಜ.8ರಂದು ಮೊದಲ ದಿನ ರಂಗ ಸಿಂಧೂರ ಪೆರ್ಡೂರು ತಂಡದಿಂದ ರಮೇಶ್ ಆಚಾರ್ ನಿರ್ದೇಶನದಲ್ಲಿ ‘ಬಯ್ಯಮಲ್ಲಿಗೆ’ ನಾಟಕ ಪ್ರದರ್ಶನ ಗೊಂಡರೆ, ನಂತರದ ದಿನಗಳಲ್ಲಿ ಕ್ರಮವಾಗಿ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲದಿಂದ ಸಂತೋಷ್‌ನಾಯಕ್ ಪಟ್ಲ ನಿರ್ದೇಶನದಲ್ಲಿ ‘ಹೇರಾಮ್’, ಮಲ್ಪೆಯ ಬಿಲ್ಲವ ಮಹಿಳಾ ಘಟಕದಿಂದ ನಾಗರಾಜ ವರ್ಕಾಡಿ ನಿರ್ದೇಶನ ದಲ್ಲಿ ‘ಮಹಿಮೆದ ಸಿರಿಕುಲು’ ನಾಟಕ ಪ್ರದರ್ಶನಗೊಳ್ಳಲಿದೆ.

ಜ.11ರಂದು ಕೊಡವೂರು ನವಸುಮ ರಂಗಮಂಚದಿಂದ ಬಾಲಕೃಷ್ಣ ಕೊಡವೂರು ನಿರ್ದೇಶನದಲ್ಲಿ ‘ಸಮ್ಗಾರನ ಸೆಡಕ್ದ ಬುಡೆದಿ’, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ರಾಜೇಶ್ ಭಟ್ ಪಣಿಯಾಡಿ ನಿರ್ದೇಶನದಲ್ಲಿ ‘ ಅಣ್ಣಯ್ಯನ ಕಥೆ ಕೇಣ್ದರಾ’, ಅಮೋಘ ಹಿರಿಯಡ್ಕ ಇವರಿಂದ ಪ್ರದೀಪ್‌ಚಂದ್ರ ಕುತ್ಪಾಡಿ ನಿರ್ದೇಶನದಲ್ಲಿ ‘ರೈಲು ಭೂತ’ ಹಾಗೂ ಸುಮನಸಾ ಕೊಡವೂರು ಇವರಿಂದ ಜೋಸೆಫ್ ನೀನಾಸಂ ನಿರ್ದೇಶನದ ನಾಟಕ ‘ಸುಳಿ ಸುರುಳಿ’ ಪ್ರದರ್ಶನಗೊಳ್ಳಲಿದೆ.

ನಾಟಕ ಸ್ಪರ್ಧೆಯಲ್ಲಿ ಮೊದಲ ಮೂರು ಅಗ್ರ ಪ್ರಶಸ್ತಿ ವಿಜೇತ ತಂಡಗಳಿಗೆ ಕ್ರಮವಾಗಿ 20 ಸಾವಿರ, 15 ಸಾವಿರ ಹಾಗೂ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಇದಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ,ನಟಿ ಮುಂತಾದ ವೈಯಕ್ತಿಕ ವಿಭಾಗಗಳಲ್ಲೂ ಮೂರು ಪ್ರಶಸ್ತಿ ನೀಡಲಾಗುತ್ತದೆ. ಫೆಬ್ರವರಿ ತಿಂಗಳಲ್ಲಿ ಬಹಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ತುಳು ಭಾವಗೀತ ಗಾಯನ: ಇದರೊಂದಿಗೆ ಜ.8ರಂದು ಬೆಳಗ್ಗೆ 9:00 ಗಂಟೆಗೆ ತುಳುಕೂಟದ ವತಿಯಿಂದ ನಿಟ್ಟೂರು ಸಂಜೀವ ಭಂಡಾರಿ ಸ್ಮಾರಕ ತುಳು ಭಾವಗೀತೆ ಗಾಯನ ಸ್ಪರ್ಧೆ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ತುಳು ಭಾವಗೀತ ಗಾಯನವನ್ನು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉದ್ಘಾಟಿಸಲಿದ್ದಾರೆ. ಜೀವನ್‌ಕುಮಾರ್, ಬಿ.ಕೆ.ಗಣೇಶ ರೈ, ಹರೀಶ್ ಶ್ರೀಯಾನ್, ವಿದ್ಯಾ ಸರಸ್ವತಿ, ರಾಮ್ ವಿ.ಕುಂದರ್ ಹಾಗೂ ರೂಪೇಶ್ ಕಲ್ಮಾಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಉಪಾಧ್ಯಕ್ಷ ದಿವಾಕರ ಸನಿಲ್, ಸ್ಪರ್ಧಾ ಸಂಚಾಲಕರಾದ ಬಿ.ಪ್ರಭಾಕರ ಭಂಡಾರಿ ಹಾಗೂ ಪ್ರಕಾಶ್ ಸುವರ್ಣ ಕಟಪಾಡಿ ಉಪಸ್ಥಿತರಿದ್ದರು.

Similar News