ಚಹಾದೊಂದಿಗೆ ರಸ್ಕ್ ನಿಮಗೆ ಇಷ್ಟವೇ?: ಅದರ ಅಪಾಯವೂ ನಿಮಗೆ ತಿಳಿದಿರಲಿ

Update: 2023-01-03 16:46 GMT

ಅನೇಕರು ತಮ್ಮ ಚಹಾದೊಂದಿಗೆ ರಸ್ಕ್ ಅನ್ನು ತಿನ್ನಲು ಇಷ್ಟಪಡುತ್ತಾರೆ. ಇನ್ನು ಹಲವರು ಹೊತ್ತಲ್ಲದ ಹೊತ್ತಲ್ಲಿ ಹಸಿವಾದಾಗ ರಸ್ಕ್ ತಿನ್ನಲು ಬಯಸುತ್ತಾರೆ. ಆದರೆ ರಸ್ಕ್ ಆರೋಗ್ಯಕರವೇ? ಆ ಬಗ್ಗೆ ಇಲ್ಲಿದೆ ಮಾಹಿತಿ.....

ನೀವು ಸರಿಯಾಗಿ ಪರಿಶೀಲಿಸಿದರೆ ರಸ್ಕ್ ವಾಸ್ತವದಲ್ಲಿ ಸಂಸ್ಕರಿತ ಹಿಟ್ಟು, ಸಕ್ಕರೆ, ಅಗ್ಗದ ಎಣ್ಣೆಗಳು, ಹೆಚ್ಚುವರಿ ಗ್ಲುಟೆನ್ ಮತ್ತು ಪರಿಮಳ ಅಥವಾ ನೋಟವನ್ನು ಹೆಚ್ಚಿಸಲು ಸೇರಿಸಲಾಗುವ ಒಂದೆರಡು ಆಹಾರ ಸಂಯೋಜಕಗಳ ಬೇಯಿಸಲಾದ ಮಿಶ್ರಣ ಎನ್ನುವುದು ಗೊತ್ತಾಗುತ್ತದೆ. ಈ ಘಟಕಗಳು ರಕ್ತದಲ್ಲಿ ಸಕ್ಕರೆಯ ಮಟ್ಟ ಏರುವಂತೆ ಮಾಡುತ್ತವೆ ಅಥವಾ ಉರಿಯೂತವನ್ನು ಹೆಚ್ಚಿಸುತ್ತವೆ ಅಥವಾ ಎರಡನ್ನೂ ಹೆಚ್ಚಿಸುತ್ತವೆ. ಹೀಗಾಗಿ ಈ ಮಿಶ್ರಣವು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎನ್ನುತ್ತಾರೆ ಪೋಷಕಾಂಶ ತಜ್ಞೆ ಹಾಗೂ ಹೆಲ್ತ್ ಪ್ಯಾಂಟ್ರಿಯ ಸ್ಥಾಪಕಿ ಖುಶ್ಬೂ ಜೈನ್ ತಿಬ್ರೆವಾಲಾ.
 
ದಿನನಿತ್ಯ ಅಥವಾ ಆಗಾಗ್ಗೆ ರಸ್ಕ್ ತಿನ್ನುವದು ಸಕ್ಕರೆ ಮಟ್ಟವನ್ನು ಅಸ್ಥಿರಗೊಳಿಸುತ್ತದೆ (ಇದು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ) ಮತ್ತು ವ್ಯವಸ್ಥಿತ ಉರಿಯೂತ (ಇದು ಶರೀರದಲ್ಲಿ ಚಯಾಪಚಯ ಅಸ್ವಸ್ಥತೆಗೆ ಕಾರಣವಾಗುತ್ತದೆ)ವನ್ನುಂಟು ಮಾಡುತ್ತದೆ. ರಸ್ಕ್ ನಿಮ್ಮ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ, ತನ್ಮೂಲಕ ರೋಗ ನಿರೋಧಕ ಶಕ್ತಿಯ ಕುಸಿತ,ಅಸಮರ್ಪಕ ಪಚನ ಕ್ರಿಯೆ ಮತ್ತು ಪೋಷಕಾಂಶಗಳ ಹೀರುವಿಕೆ ಹಾಗೂ ಅನಗತ್ಯ ಬಾಯಿಚಪಲಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ರಸ್ಕ್ ಸೇವನೆಯಿಂದ ಯಾವುದೇ ಪ್ರಯೋಜನವಿಲ್ಲ. ಅದು ನಿಮ್ಮ ಕರುಳು, ರೋಗ ನಿರೋಧಕ ಶಕ್ತಿ, ಹಾರ್ಮೋನ್ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಕೊಬ್ಬು ಹೆಚ್ಚಲು ಕಾರಣವಾಗುತ್ತದೆ, ಶರೀರದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ, ಆಲಸ್ಯವನ್ನುಂಟು ಮಾಡುತ್ತದೆ, ಬಾಯಿಚಪಲವನ್ನು ಹೆಚ್ಚಿಸುತ್ತದೆ ಇತ್ಯಾದಿ ಇತ್ಯಾದಿ ಎಂದು ತಿಬ್ರೆವಾಲಾ ನುಡಿದರು.

ಹಾರ್ಮೋನ್ ತಜ್ಞೆ, ಪೋಷಕಾಂಶ ತಜ್ಞೆ ಶಿಖಾ ಗುಪ್ತಾ ಅವರು ರಸ್ಕ್‌ನಲ್ಲಿಯ ಬಿಡಿ ಘಟಕಗಳುಂಟು ಮಾಡುವ ಕೆಡುಕುಗಳನ್ನು ವಿವರಿಸಿದ್ದಾರೆ.

ರಸ್ಕ್ ತಯಾರಿಕೆಯಲ್ಲಿ ಬಳಸುವ ಗೋದಿ ಹಿಟ್ಟು/ಮೈದಾದಲ್ಲಿ ಯಾವುದೇ ನಾರಿನ ಅಂಶವಿಲ್ಲ. ಸಕ್ಕರೆ ನಿಮ್ಮ ಶರೀರದಲ್ಲಿ ಕ್ಯಾಲರಿಗಳ ಒಳಹರಿವನ್ನು ಹೆಚ್ಚಿಸುತ್ತದೆ ಅಷ್ಟೇ, ನೀವು ಕೇವಲ ಎರಡು ರಸ್ಕ್‌ಗಳನ್ನು ತಿಂದರೂ ಅದರಿಂದ ನಿಮ್ಮ ಸಕ್ಕರೆ ಸೇವನೆಯ ದೈನಂದಿನ ಮಿತಿಯು ದಾಟುತ್ತದೆ. ಸಂಸ್ಕರಿತ ಸಸ್ಯಜನ್ಯ ಎಣ್ಣೆಯು ಶರೀರದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ರವೆ/ಸೂಜಿ ಸಹ ಯಾವುದೇ ನಾರು ಅಥವಾ ಪೌಷ್ಟಿಕಾಂಶಗಳನ್ನು ಒಳಗೊಂಡಿರುವುದಿಲ್ಲ. ಪ್ರಿಸರ್ವೇಟಿವ್‌ಗಳು, ಆಹಾರ ಸಂಯೋಜಕ, ಇತ್ಯಾದಿಗಳು ಉತ್ಪನ್ನದ ಜೀವಿತಾವಧಿಯನ್ನು ಹೆಚ್ಚಿಸುತ್ತವೆ ಹೊರತು ಆರೋಗ್ಯಕ್ಕೆ ಯಾವುದೇ ಲಾಭವಿಲ್ಲ.

ರಸ್ಕ್‌ಗೆ ಕಂದು ಬಣ್ಣವನ್ನು ನೀಡಲು ಕ್ಯಾರಮೆಲ್ ಕಲರ್ ಅಥವಾ ಕಂದು ಆಹಾರ ಬಣ್ಣವನ್ನು ಬಳಸಲಾಗುತ್ತದೆ ಮತ್ತು ಈ ಬಣ್ಣವು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಲ್ಲದು ಎಂದು ಆರೋಗ್ಯ ತರಬೇತುದಾರ ದಿಗ್ವಿಜಯ ಸಿಂಗ್ ತಿಳಿಸಿದರು.

ಚಹಾದ ಜೊತೆಗೆ ಹುರಿದ ನೆಲಗಡಲೆ ಅಥವಾ ಕಡಲೆಯನ್ನು ತಿನ್ನಬಹುದು, ಆದರೂ ನೀವು ರಸ್ಕ್‌ನ್ನು ಇಷ್ಟ ಪಡುತ್ತೀರಾದರೆ ಇದನ್ನು ಗಮನದಲ್ಲಿಟ್ಟುಕೊಳ್ಳಿ. ಬಹುಧಾನ್ಯಗಳ ರಸ್ಕ್ ಕೂಡ ಮೈದಾವನ್ನು ಒಳಗೊಂಡಿರುತ್ತದೆ, ಹೀಗಾಗಿ ಯಾವಾಗಲೂ ಶೇ.100ಷ್ಟು ಇಡಿಗೋದಿ ಅಥವಾ ಶೇ.100ರಷ್ಟು ರವೆ ರಸ್ಕ್‌ಗಳನ್ನು ಬಳಸಿ ಎಂದು ಹೇಳಿದ ತಿಬ್ರೆವಾಲಾ, ರಸ್ಕ್ ಪ್ಯಾಕೆಟ್‌ನ್ನು ಒಮ್ಮೆಲೇ ಖಾಲಿ ಮಾಡಬೇಡಿ, ಅದನ್ನು ಮಿತವಾಗಿ ತಿನ್ನಿ ಎಂದು ಕಿವಿಮಾತು ಹೇಳಿದರು.

ಕೃಪೆ: Indianexpress.com

Similar News